ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಪೂರಕ ಹವಾಮಾನ: ವರ್ಷದಲ್ಲಿಯೇ ದುಪ್ಪಟ್ಟಾದ ಮಾವು ಬೇಸಾಯ ಕ್ಷೇತ್ರ

Published 18 ಮೇ 2024, 7:36 IST
Last Updated 18 ಮೇ 2024, 7:36 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಒಂದೇ ವರ್ಷದಲ್ಲಿ ಮಾವು ಬೇಸಾಯ ಕ್ಷೇತ್ರ ದುಪ್ಪಟ್ಟಾಗಿದ್ದು, ಇದರಲ್ಲಿ ನೆರೆ ರಾಜ್ಯದ ರೈತರ ಪಾಲೇ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಮಾವು ಬೇಸಾಯಕ್ಕೆ ಪೂರಕ ಹವಾಮಾನ ಇರುವುದರಿಂದ ಉತ್ತೇಜಿತರಾದ ರೈತರು ನೀರಾವರಿ ಸೌಲಭ್ಯ ಅಳವಡಿಸಿಕೊಂಡು ಹನಿ ನಿರಾವರಿ ಮೂಲಕ ಮಾವಿನ ತೋಟಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.

ತಾಲ್ಲೂಕಿನ ಕುಂಚಾವರಂ ಮತ್ತು ಶಾದಿಪುರ ಹಾಗೂ ಮಿರಿಯಾಣ, ಐನಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಮಾವು ಬೇಸಾಯ ಹೆಚ್ಚಾಗಿದೆ. ನೆರೆಯ ರಾಜ್ಯದ ತೆಲಂಗಾಣದ ಉದ್ಯಮಿಗಳು, ನಿವೃತ್ತ ಅಧಿಕಾರಿಗಳು ತಾಲ್ಲೂಕಿಗೆ ಬಂದು ಜಮೀನು ಖರೀದಿಸಿ ಅಭಿವೃದ್ಧಿ ಪಡಿಸಿ ಮಾವಿನ ಸಸಿ ನೆಟ್ಟು ಪೋಷಿಸುತ್ತಿದ್ದಾರೆ.

ಕುಂಚಾವರಂ ಮತ್ತು ಐನಾಪುರ, ಸಲಗರ ಬಸಂತಪುರ ಸುತ್ತಲಿನ ಜಮೀನು ಕೆಂಪುಮಣ್ಣು ಹೊಂದಿದ್ದು, ಮಾವು ಬೇಸಾಯಕ್ಕೆ ಪೂರಕವಾಗಿದೆ. ಜತೆಗೆ ಅಂತರ್ಜಲ ಮಟ್ಟವೂ ಉತ್ತಮವಾಗಿದ್ದರಿಂದ ಮಾವು ಬೇಸಾಯಕ್ಕೆ ಹೆಚ್ಚಿನ ಅನುಕೂಲವಾಗಿದೆ. ಪ್ರಸಕ್ತ ವರ್ಷದಲ್ಲಿ ಒಂದು ಸಾವಿರ ಎಕರೆ ಮಾವು ಬೇಸಾಯ ಕ್ಷೇತ್ರ ಹೆಚ್ಚಳವಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೆಶಕ ಸಂತೋಷಕುಮಾರ ಇನಾಂದಾರ.

ಶಾದಿಪುರ, ಚಿಂದಾನೂರ, ಜಿಲವರ್ಷಾ, ಕುಂಚಾವರಂ, ಮೊಗದಂಪುರ, ಶಿವರಾಮಪುರ, ಶಿವರೆಡ್ಡಿಪಳ್ಳಿ, ಪೋಚಾವರಂ, ಲಕ್ಷ್ಮಿಸಾಗರ, ಬೋನಸಪುರ, ವೆಂಕಟಾಪುರ ಮತ್ತು ಐನಾಪುರ, ಬೆನಕೆಪಳ್ಳಿ, ಮಿರಿಯಾಣ ಮೊದಲಾದ ಗ್ರಾಮಗಳ ವ್ಯಾಪ್ತಿಯಲ್ಲಿ ಮಾವು ಬೇಸಾಯವಿದೆ.

ತೆಲಂಗಾಣ ಗಡಿಗೆ ಹೊಂದಿಕೊಂಡ ಕುಂಚಾವರಂ ಸುತ್ತಲಿನ ಗಡಿನಾಡಿನಲ್ಲಿ ಮಾವು ಬೆಳೆಯ ಬೇಸಾಯ ಹೆಚ್ಚಾಗಿದೆ. ಇಲ್ಲಿನ ನೀರಾವರಿ ಸೌಲಭ್ಯ ಹೊಂದಿರುವ ರೈತರು ಹೆಚ್ಚಿನ ಪ್ರಮಾಣದಲ್ಲಿ ಮಾವು ಕೃಷಿ ನಡೆಸುತ್ತಿದ್ದಾರೆ.

ಪ್ರಸಕ್ತ(ಸಿಎಚ್‌ಡಿ) ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ 50 ಹೆಕ್ಟೇರ್‌ಗೆ ಸಹಾಯಧನ ನೀಡಲಾಗಿದೆ. ಆದರೆ ಪ್ರದೇಶ ಹೆಚ್ಚಾಗಿದೆ. ಹೆಚ್ಚುವರಿ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೆಶಕ ರಾಜಕುಮಾರ ಗೋವಿನ ತಿಳಿಸಿದರು. ತಾಲ್ಲೂಕಿನಲ್ಲಿ 2500 ಎಕರೆ ಪ್ರದೇಶದಲ್ಲಿ ಮಾವು ಬೇಸಾಯವಿದೆ. ಇದರಲ್ಲಿ ಪ್ರಸಕ್ತ ವರ್ಷ ಅಭಿವೃದ್ಧಿ ಪಡಿಸಿದ ಕ್ಷೇತ್ರದ ಪಾಲು ಹೆಚ್ಚಾಗಿದೆ.

ಕುಂಚಾವರಂ ಸುತ್ತಲಿನ ಪ್ರದೇಶದಲ್ಲಿ ಕಬ್ಬು ಮತ್ತು ಮಾವು ಇಲ್ಲಿನ ರೈತರ ಮುಖ್ಯ ಬೆಳೆಯಾಗಿದೆ. ವರ್ಷದಿಂದ ವರ್ಷಕ್ಕೆ ಮಾವು ಕ್ಷೇತ್ರ ವಿಸ್ತರಣೆಯಾಗುತ್ತಿದೆ. ಸರ್ಕಾರ ಮಾವು ಮಾಗಿಸುವ ಘಟಕ ಸ್ಥಾಪಿಸಬೇಕು
ನರಶಿಮ್ಲು ಕುಂಬಾರ, ಮಾವು ಬೆಳೆಗಾರ
ಅರೆಮಲೆನಾಡು ಪ್ರದೇಶ ಎಂದು ಭೌಗೋಳಿಕವಾಗಿ ಗುರುತಿಸಲ್ಪಡುವ ಚಿಂಚೋಳಿ ತಾಲ್ಲೂಕಿನಲ್ಲಿ ತೋಟಗಾರಿಕಾ ಬೆಳೆಗಳ ಅದರಲ್ಲು ಮಾವು ಬೇಸಾಯಕ್ಕೆ ಉತ್ತಮ ವಾತಾವರಣವಿದೆ
ಸಂತೋಷಕುಮಾರ ಇನಾಂದಾರ, ಉಪನಿರ್ದೇಶಕ ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT