ಸೋಮವಾರ, ಜೂಲೈ 13, 2020
28 °C
ನಾಲ್ವರ ಹೆಸರು ತೇಲಿಬಿಟ್ಟ ಸಂಸದ

ಜಿಲ್ಲಾ ಬಿಜೆಪಿಯಲ್ಲಿ ತೀವ್ರಗೊಂಡ ಚಟುವಟಿಕೆ; ಯಾರಿಗೆ ಒಲಿಯಲಿದೆ ಪರಿಷತ್‌ ಭಾಗ್ಯ

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

prajavani

ಕಲಬುರ್ಗಿ: ಕಾಂಗ್ರೆಸ್‌ನ ಇಕ್ಬಾಲ್‌ ಅಹ್ಮದ್‌ ಸರಡಗಿ ಹಾಗೂ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಕೆಲ ವಿಧಾನ ಪರಿಷತ್‌ ಸದಸ್ಯರ ಅವಧಿ ಜೂನ್‌ 23ಕ್ಕೆ ಕೊನೆಗೊಳ್ಳಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿಯ ಯಾವ ನಾಯಕರಿಗೆ ಅದೃಷ್ಟ ಖುಲಾಯಿಸಲಿದೆ ಎಂಬ ಚರ್ಚೆ ನಡೆಯುತ್ತಿದೆ.

ಬಿಜೆಪಿ ನಾಯಕರು ಹಾಗೂ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಸುನೀಲ್‌ ವಲ್ಲ್ಯಾಪುರ ಅವರು ವಿಧಾನ ಪರಿಷತ್‌ ಪ್ರವೇಶಿಸುವ ಪ್ರಬಲ ಆಕಾಂಕ್ಷಿಗಳು. ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ, ಡಾ.ಉಮೇಶ ಜಾಧವ ಅವರನ್ನು ಗೆಲ್ಲಿಸುವಲ್ಲಿ ತಾವು ಪ್ರಮುಖ ಪಾತ್ರ ವಹಿಸಿದ್ದು, ತಮಗೂ ಅವಕಾಶ ನೀಡಬೇಕು ಎಂಬುದು ಮಾಲೀಕಯ್ಯ ಅವರ ಬೇಡಿಕೆ. ಉಮೇಶ ಜಾಧವ ಅವರ ಪುತ್ರ ಅವಿನಾಶ್‌ ಅವರಿಗೆ ಕ್ಷೇತ್ರ ತ್ಯಾಗ ಮಾಡಿ ಅವರನ್ನು ಗೆಲ್ಲಿಸಿಕೊಂಡು ಬಂದಿರುವ ತಮಗೆ ಅವಕಾಶ ನೀಡಬೇಕು ಎಂಬುದು ಸುನೀಲ್‌ ವಲ್ಲ್ಯಾಪುರ ಅವರ ಕೋರಿಕೆ ಎನ್ನುತ್ತವೆ ಪಕ್ಷದ ಮೂಲಗಳು.

ಸುನೀಲ್‌ ವಲ್ಲ್ಯಾಪುರ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡಬೇಕು ಎಂದು ಸಂಸದ ಉಮೇಶ ಜಾಧವ ಅವರು ಜಿಲ್ಲೆಯ ಪಕ್ಷದ ಕೆಲ ಶಾಸಕರನ್ನು ಮುಖ್ಯಮಂತ್ರಿ ಬಳಿ ಕರೆದೊಯ್ದಿದ್ದರು. ಇದು ಮಾಲೀಕಯ್ಯ ಅವರ ಸಿಟ್ಟಿಗೆ ಕಾರಣವಾಗಿದೆ. ‘ಸುನೀಲ್‌ ವಲ್ಲ್ಯಾಪುರ ಅವರಿಗೆ ಟಿಕೆಟ್‌ ಕೇಳೋಣ ಬನ್ನಿ ಎಂದು ಕರೆದಿದ್ದರೆ ನಾನೂ ಬರುತ್ತಿದ್ದೆ. ನನ್ನನ್ನು ಕತ್ತಲೆಯಲ್ಲಿಟ್ಟು ನೀವು ಹೀಗೆ ನಿಯೋಗ ಕರೆದೊಯ್ದಿದ್ದು ಎಷ್ಟು ಸರಿ ಎಂದು ಅವರು ಸಂಸದರನ್ನು ಪ್ರಶ್ನಿಸಿದ್ದಾರೆ’ ಎಂಬುದು ಮೂಲಗಳ ಮಾಹಿತಿ.

ನನಗೆ ಕ್ಷೇತ್ರವೇ ಇಲ್ಲ: ‘ನಾನೂ ವಿಧಾನ ಪರಿಷತ್‌ ಟಿಕೆಟ್‌ ಆಕಾಂಕ್ಷಿ. ಚಿಂಚೋಳಿ ಉಪ ಚುನಾವಣೆ ವೇಳೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವರಾದ ಜಗದೀಶ ಶೆಟ್ಟರ್‌, ವಿ.ಸೋಮಣ್ಣ, ಕೇಂದ್ರ ಸಚಿವ ಪಲ್ಹಾದ್‌ ಜೋಶಿ ಅವರು ವಿಧಾನ ಪರಿಷತ್‌ ಟಿಕೆಟ್‌ ನೀಡುವ ಸ್ಪಷ್ಟ ಭರವಸೆ ನೀಡಿದ್ದರು.  ಹೀಗಾಗಿ ಪರಿಷತ್‌ಗೆ ಅವಕಾಶ ಕಲ್ಪಿಸಿ ಎಂದು ಕೋರಿದ್ದೇನೆ’ ಎನ್ನುತ್ತಾರೆ ಸುನೀಲ್‌ ವಲ್ಲ್ಯಾಪುರ.

‘ಚಿಂಚೋಳಿ ವಿಧಾನಸಭೆ ಉಪ ಚುನಾವಣೆಯಲ್ಲಿ ನನ್ನ ಬದಲು ಉಮೇಶ ಜಾಧವ ಅವರ ಪುತ್ರ ಡಾ. ಅವಿನಾಶ್‌ಗೆ ಟಿಕೆಟ್‌ ನೀಡಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನೂ ಪಕ್ಷದ ಮುಖಂಡರು ನನಗೆ ವಹಿಸಿದ್ದರು. ಅವಿನಾಶ ನನ್ನ ಪುತ್ರ ಇದ್ದಂತೆ; ಅವರಿಗೆ ಮತ ನೀಡಿ ಎಂದು ಕ್ಷೇತ್ರದ ಜನರ ಮನವೊಲಿಸಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನನಗೆ ಈಗ ಕ್ಷೇತ್ರವೇ ಇಲ್ಲ. ನನ್ನ ತ್ಯಾಗಕ್ಕೆ ಫಲ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಲಾಬಿ ಮಾಡಿಲ್ಲ: ‘ಸ್ಥಾನಮಾನಕ್ಕಾಗಿ ನಾನು ಎಂದೂ ಲಾಬಿ ಮಾಡಿಲ್ಲ. ಈಗಲೂ ಅಷ್ಟೇ ವಿಧಾನ ಪರಿಷತ್‌ ಪ್ರವೇಶಿಸಲು ಲಾಬಿ ಮಾಡುತ್ತಿಲ್ಲ. ಆದರೂ, ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸಲು ಸಿದ್ಧ’ ಎಂದು ಮಾಲೀಕಯ್ಯ ಗುತ್ತೇದಾರ ಪ್ರತಿಕ್ರಿಯಿಸಿದರು.

ಏತನ್ಮಧ್ಯೆ, ಈ ಬಾರಿ ಜಿಲ್ಲೆಗೆ ಅವಕಾಶ ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಸುನೀಲ್‌ ವಲ್ಲ್ಯಾಪುರ ಅವರ ಪರವಾಗಿ ತೆರಳಿದ್ದ ನಿಯೋಗಕ್ಕೆ, ‘ಬೇರೆ ಪಕ್ಷದಿಂದ ರಾಜೀನಾಮೆ ನೀಡಿ ಬಂದು ಸರ್ಕಾರ ರಚನೆಗೆ ನೆರವಾಗಿರುವವರಿಗೆ ಸ್ಥಾನಮಾನ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸೂಚ್ಯವಾಗಿ ಹೇಳಿದ್ದಾರೆ’ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು