ಬುಧವಾರ, ಆಗಸ್ಟ್ 10, 2022
25 °C

ಪ್ರತ್ಯೇಕ ಅಪಘಾತ; ಐವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಜಿಲ್ಲೆಯ ಕಮಲಾಪುರ ಹಾಗೂ ನಗರದ ಹೊರವಲಯದ ಶಹಾಬಾದ್ ರಸ್ತೆಯಲ್ಲಿ ಭಾನುವಾರ ಎರಡು ಪ್ರತ್ಯೇಕ ಅಪಘಾತ ಸಂಭವಿಸಿ ಐವರು ಮೃತಪಟ್ಟಿದ್ದಾರೆ.

ಕಮಲಾಪುರ ತಾಲ್ಲೂಕಿನ ಭೀಮನಾಳ ಕ್ರಾಸ್ ಬಳಿ ಕ್ರೂಸರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿ ಇದ್ದವರ ಪೈಕಿ ಇಬ್ಬರು ಸ್ಥಳದಲ್ಲಿ ಮೃತಪಟ್ಟರು.

ತೆಲಂಗಾಣ ರಾಜ್ಯದ ಹನಮಕೊಂಡಾ ನಗರದ ಉಜಲಿಬೇಸ್ ನಿವಾಸಿ ಮಹಮ್ಮದ್ ಅಬ್ದುಲ್ ಮಜೀದ್ ಸಿದ್ಧಿಕಿ (71) ಮತ್ತು ಹೈದರಾಬಾದ್‌ನ ಬಾಲಾಜಿ ನಗರದ ಸಾದಯಾ ಖುನ್ನಿಸಾ ಬೇಗಂ (55) ಸ್ಥಳದಲ್ಲೇ ಮೃತರಾದರು.

ಮಹಮ್ಮದ್ ಅಬ್ದುಲ್ ಮಜೀದ್ ಪತ್ನಿ ಫರಹದ್ ಸುಲ್ತಾನಾ (68) ನಗರದ ಎಎಸ್‌ಎಂ ಆಸ್ಪತ್ರೆಯಲ್ಲಿ ಮೃತಪಟ್ಟರು. ಬಾಲಕ ಹುಸೇನ್ (7) ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ. ಅರ್ಜುಮನ್ ಇಲ್ತಿಮಾ ಸುಲ್ತಾನ್ ಅವರಿಗೂ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಹೈದರಾಬಾದ್‌ನಿಂದ ಎರಡು ಕುಟುಂಬಸ್ಥರು ಎರಡು ಕಾರುಗಳಲ್ಲಿ ಕಲಬುರಗಿಯ ಖಾಜಾ ಬಂದೇ ನವಾಜ್ ದರ್ಗಾಗೆ ತೆರಳುತ್ತಿದ್ದರು. ಮಾರ್ಗದ ಭೀಮನಾಳ ಕ್ರಾಸ್‌ ಬಳಿ ಕಲಬುರಗಿ ಕಡೆಯಿಂದ ಬೀದರ್‌ನ ಗುರುನಾನಕ್‌ ಗುರುದ್ವಾರಕ್ಕೆ ತೆರಳುತ್ತಿದ್ದ ಕ್ರೂಸರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಅವಘಡದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ’ ಎಂದರು.

ಸ್ಥಳಕ್ಕೆ ಪಿಎಸ್‌ಐ ಶಿವಶಂಕರ ಸುಬೇದಾರ, ರಾಜಶೇಖರ ನಾಶಿ, ಶರಣು ಮರಗುತ್ತಿ, ಶಕೀಲ್ ಭೇಟಿ ನೀಡಿ ಪರಿಶೀಲಿಸಿದರು.

ಇಬ್ಬರು ಸಾವು: ಕಲಬುರಗಿ ಹೊರವಲಯದ ಶಹಾಬಾದ್ ರಸ್ತೆಯ ಬಳಿ ತೈಲ ಟ್ಯಾಂಕರ್ ಮತ್ತು ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ನಿವಾಸಿಗಳಾದ ಅಮಿತ್ ಗುಂಡೇಶ್ ಸುಬೇದಾರ್(21) ಹಾಗೂ ಆದರ್ಶ ಬಸವಂತರಾಯ (22) ಮೃತಪಟ್ಟರು. ಕಾರಿನಲ್ಲಿ ಇದ್ದ ಮಹಾಂತೇಶ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರಗಿಯಿಂದ ಶಹಬಾದ್‌ನತ್ತ ತೆರಳುತ್ತಿದ್ದ ಕಾರು ಶಹಾಬಾದ್‌ನಿಂದ ಕಲಬುರಗಿ ನಗರ ಕಡೆಗೆ ಬರುತ್ತಿದ್ದ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಲಬುರಗಿ ಸಂಚಾರಿ–2ರಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರು ಸಾಗಣೆ: 7 ಜನರ ವಿರುದ್ಧ ಪ್ರಕರಣ

ವಾಡಿ: ಪರವಾನಗಿ ಇಲ್ಲದೆ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ಆರೋಪದಡಿ ಒಬ್ಬ ಮಹಿಳೆ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಭಾನುವಾರ ಇಲ್ಲಿನ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 17 ಹಸು, 8 ಕರು, 4 ಹೋರಿ, 4 ಮಣಕ ಸೇರಿ 33 ಜಾನುವಾರುಗಳನ್ನು ಸಮೀಪದ ಕೊಂಚೂರು ಪುಣ್ಯಕೋಟಿ ಗೋಶಾಲೆಗೆ ಕಳುಹಿಸಲಾಗಿದೆ.

ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ರೈತ ಮಹಿಳೆ ಕಾಂತಮ್ಮ ದುರ್ಗಪ್ಪ ಹತ್ತಿಕುಣಿ ಎಂಬುವವರು ತಮ್ಮ 33 ಜಾನುವಾರುಗಳನ್ನು ರಾಷ್ಟ್ರೀಯ ಹೆದ್ದಾರಿ 150ರ ಮಾರ್ಗವಾಗಿ ಶಹಾಬಾದ್‌ನಲ್ಲಿ ಇರುವ ಮಗಳ ಮನೆಗೆ ಕರೆದೊಯ್ಯುತ್ತಿದ್ದರು. ವಾಡಿ ಹೊರ ವಲಯದ ಬಳಿರಾಮ ಚೌಕ್ ಬಳಿ ತೆರಳುತ್ತಿದ್ದಾಗ ಶ್ರೀರಾಮ ಸೇನೆಯ ಮುಖಂಡರು ತಡೆದು, ಅಕ್ರಮವಾಗಿ ಗೋವುಗಳನ್ನು ಕಸಾಯಿ ಖಾನೆಗೆ ಸ್ಥಳಾಂತರಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗಾಣಿಕೆಗೆ ಪರವಾನಗಿ ಇಲ್ಲದ ಕಾರಣ ಪ್ರಕರಣ ದಾಖಲಿಸಲಾಗಿದೆ. ಜಾನುವಾರುಗಳನ್ನು ಕೊಂಚೂರು ಪುಣ್ಯಕೋಟಿ ಗೋಶಾಲೆಗೆ ಕಳುಹಿಸಲಾಗಿದೆ ಎಂದು ಪಿಎಸ್‌ಐ ಮಹಾಂತೇಶ ಜಿ.ಪಾಟೀಲ ತಿಳಿಸಿದ್ದಾರೆ.

‘ಆಕಳನ್ನು ಕಟುಕರಿಗೆ ಮಾರಲು ತಂದಿಲ್ಲ. ನನ್ನ ಮಗಳ ಊರಿಗೆ ಬಿಡಲು ತಂದಿದ್ದೇನೆ. ಸಾಕುವ ಜಾನುವಾರುಗಳನ್ನು ಕಟುಕರಿಗೆ ಮಾರಲು ಹೊರಟಿದ್ದಾಳೆ ಎಂದು ಆರೋಪಿಸಿ ಠಾಣೆಗೆ ಕರೆತಂದಿದ್ದಾರೆ’ ಎಂದು ಕಾಂತಮ್ಮ ದುರ್ಗಪ್ಪ ಪೊಲೀಸರ ಮುಂದೆ ಅಲವತ್ತುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು