ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಜಾನಪದ ಕಲಾವಿದರ ಬದುಕು ಕಸಿದ ಕೊರೊನಾ

ಜಾತ್ರೆ, ಉತ್ಸವ, ಸಮಾರಂಭ ರದ್ದು, ಕೂಲಿ ಕೆಲಸಕ್ಕೆ ಹೊರಟ ಯುವ ಕಲಾವಿದರು
Last Updated 19 ಏಪ್ರಿಲ್ 2021, 3:36 IST
ಅಕ್ಷರ ಗಾತ್ರ

ಕಲಬುರ್ಗಿ: ವರ್ಷದಿಂದ ಲಾಕ್‌ಡೌನ್‌, ಸೀಲ್‌ಡೌನ್‌, ನಿಷೇಧಾಜ್ಞೆಗಳ... ಮಧ್ಯೆ ಕಲಾವಿದರ ಬದುಕು ಅಕ್ಷರಶಃ ತತ್ತರಿಸಿಹೋಗಿದೆ. ಕೊರೊನಾ ವೈರಾಣು ಹಾವಳಿಯಿಂದಾಗಿ ದೇಸಿ ಕಲಾವಿದರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಅದರಲ್ಲೂ ಕಲೆಯನ್ನೇ ಜೀವನೋಪಾಯ ಮಾಡಿಕೊಂಡವರ ಅನ್ನವನ್ನೂ ಈ ವೈರಾಣು ಕಸಿದುಕೊಂಡಿದೆ.

2020ರ ಮಾರ್ಚ್‌ 22ರಿಂದ ಜಾತ್ರೆ, ಉತ್ಸವ, ಸಭೆ, ಸಮಾರಂಭ, ಧಾರ್ಮಿಕ ಹಬ್ಬ, ರಾಷ್ಟ್ರೀಯ ಹಬ್ಬ... ಹೀಗೆಎಲ್ಲವೂ ನಿಂತುಹೋಗಿವೆ. ಇವುಗಳನ್ನೇ ನಂಬಿಕೊಂಡು ಬದುಕುವ ಜನಪದ ಕಲಾವಿದರು ತುತ್ತಿನಚೀಲ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ಗ್ರಾಮೀಣ ಕಲಾವಿದರಿದ್ದು, ಇದರಲ್ಲಿ ಬಹುಪಾಲು ಜನರಿಗೆ ತಮ್ಮ ಕಲೆಯೇ ಅನ್ನದ ಬಟ್ಟಲು. ಜಿಲ್ಲೆ ಮಾತ್ರವಲ್ಲದೇ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನಡೆಯುವ ಉತ್ಸವಗಳಲ್ಲಿ ಪಾಲ್ಗೊಂಡು, ಬಂದಷ್ಟು ಹಣದಲ್ಲೇ ಅವರು ಬದುಕುತ್ತಿದ್ದರು. ಆದರೆ, ಇಡೀ ದೇಶದಾದ್ಯಂತ ಎಲ್ಲಿಯೂ ಅವಕಾಶಗಳೇ ಇಲ್ಲದ ಸ್ಥಿತಿ ಅವರ ಬದುಕಿನ ‘ತಾಳ’ವೇ ತಪ್ಪುವಂತೆ ಮಾಡಿದೆ.

ಯಾವ ಯಾವ ಕಲಾವಿದರು ಇದ್ದಾರೆ: ಜಿಲ್ಲೆಯಲ್ಲಿ ಜನಪದ ನೃತ್ಯ, ಜನಪದ ಸಂಗೀತ, ವೀರಗಾಸೆ, ನಂದಿಕೋಲು, ಡೊಳ್ಳುವಾದನ, ಮರಗಂಬ, ಕೋಲಾಟ, ಕಂಸಾಳೆ, ಹೆಜ್ಜೆ ಮೇಳ, ಪೂಜಾ ಕುಣಿತ, ಗೀಗೀ ಪದ, ಸೋಬಾನೆ, ಹಂತಿಪದ, ಬೀದಿನಾಟಕ, ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಸೇರಿದಂತೆ ಹಲವಾರು ಕಲಾ ಪ್ರಕಾರಗಳನ್ನು ನಂಬಿ ಜೀವನ ನಡೆಸುತ್ತಿದ್ದ ಕಲಾವಿದರು ಕೊರೊನಾ ದಾಳಿಗೆ ನಲುಗಿದ್ದಾರೆ.

ಹಲವಾರು ಕಲಾವಿದರು ಈಗ ತಮ್ಮ ಕಲಾಸಲಕರಣೆಗಳನ್ನು ಮೂಲೆಗೆ ಇಟ್ಟು ಕೂಲಿ ಮಾಡಲು ಹೋಗುತ್ತಿದ್ದಾರೆ. ತಮ್ಮ ಮನಮೋಹಕ ಶಬ್ದದ ಮೂಲಕ ಜನರನ್ನು ರಂಜಿಸುತ್ತಿದ್ದ ತಾಳ, ತಮಡೆ, ತಬಲಾ, ಹಾರ್ಮೋನಿಯಂ, ಹಲಗೆ, ಗೆಜ್ಜೆಗಳು ದೂಳು ತಿನ್ನುತ್ತಿವೆ.‌

‘ಆಳಂದ ತಾಲ್ಲೂಕಿನಲ್ಲಿ ಸಾಕಷ್ಟು ಸಂಖ್ಯೆಯ ಕಲಾವಿದರಿದ್ದಾರೆ. ಕಲೆಯ ವಿವಿಧ ಆಯಾಮಗಳಲ್ಲಿ ಪರಿಣತಿ ಹೊಂದಿರುವ ಕಲಾವಿದರಿಗೆ ಕಲಾ ಪ್ರದರ್ಶನದ ಹೊರತಾಗಿ ಬೇರೆ ಕೆಲಸ ಮಾಡಲು ಬರುವುದಿಲ್ಲ. ಹಿರಿಯ ಕಲಾವಿದರು, ಅಶಕ್ತರಾದವರು ತಮ್ಮ ಹಾವಭಾವ, ಅಭಿನಯದ ಮೂಲಕ ರಂಗದ ಮೇಲೆ ಪಾತ್ರ ನಿರ್ವಹಿಸಿ ಜೀವನೋಪಾಯದ ಸಂಭಾವನೆ ಪಡೆಯುತ್ತಿದ್ದರು. ಆದರೆ ಕೊರೊನಾ ಕರಿನೆರಳು ಎಲ್ಲವನ್ನೂ ನುಂಗಿ ಹಾಕಿದೆ. ಮೂರು ಹೊತ್ತು ಉನ್ನುವ ಬದಲು ಈಗ ಒಂದೇ ಹೊತ್ತುವ ಉನ್ನುವ ಸ್ಥಿತಿ ಕಲಾವಿದರಿಗೆ ಬಂದಿದೆ’ ಎನ್ನುತ್ತಾರೆ ಜನಪದ ಗಾಯಕಿ ಭೀಮಮ್ಮ.

ನೆರವಿನ ನಿರೀಕ್ಷೆಯೂ ಹುಸಿ
‘ಕಳೆದ ಬಾರಿ ಲಾಕ್‌ಡೌನ್‌ನಿಂದ ತತ್ತರಿಸಿದ ಬಹುಪಾಲು ಸಮುದಾಯಗಳಿಗೆ ಸರ್ಕಾರಗಳು ಆರ್ಥಿಕ ನೆರವು ನೀಡಿದವು. ಅದೇ ರೀತಿ ಕಲಾವಿದರಿಗೂ ನೆರವು ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಯಾರಿಗೂ ಬಿಡಿಗಾಸು ಬರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿದ ಕಲಾವಿದರಿಗೆ ನೆರವು ನೀಡಿದ್ದೇವೆ ಎನ್ನುತ್ತಾರೆ. ಯಾರಿಗೆ ತಲುಪಿದೆಯೋ ಗೊತ್ತಿಲ್ಲ’ ಎನ್ನುತ್ತಾರೆ ಕನ್ನಡ ಜಾನಪದ ಪರಿಷತ್‌ ಆಳಂದ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ.

ಪ್ರಮುಖ ಬೇಡಿಕೆಗಳೇನು?

* ಮಾಸಾಶನಕ್ಕೆ 60 ವರ್ಷದ ಮಿತಿಯನ್ನು ಸಡಿಲಗೊಳಿಸಿ 45ಕ್ಕೆ ಇಳಿಸಿ.

* ಸದ್ಯ ನೀಡುವ ₹ 3 ಸಾವಿರ ಮಾಸಾಶನ ಯಾವುದಕ್ಕೂ ಸಾಲುವುದಿಲ್ಲ. ₹ 5 ಸಾವಿರಕ್ಕೆ ಹೆಚ್ಚಿಸಿ.‌

* ರಾಜ್ಯದಾದ್ಯಂತ ಕಲಾ ಪ್ರದರ್ಶನಕ್ಕೆ ಸಂಚರಿಸುವ ಕಲಾವಿದರಿಗೆ ಉಚಿತ ಬಸ್‌ಪಾಸ್‌ ನೀಡಿ.‌

* ವೈದ್ಯಕೀಯ ಸೌಲಭ್ಯ ಮತ್ತು ನಿವೇಶನ ನೀಡಲು ಕ್ರಮ ಕೈಗೊಳ್ಳಿ.

* ಜಿಲ್ಲೆಯಲ್ಲಿ ಜನಪದ ಕಲಾವಿದರಿಗಾಗಿಯೇ ಕಲಾಭವನ ನಿರ್ಮಾಣ ಮಾಡಿ.

25 ವರ್ಷದ ಹಿಂದಿನ ದಾಖಲೆ ಬೇಕೆ?
ಮಾಸಾಶನವೂ ಸೇರಿದಂತೆ ಕಲಾವಿದರಿಗೆ ಸರ್ಕಾರದ ಯಾವುದೇ ಸೌಲಭ್ಯ, ಪ್ರಶಸ್ತಿಗಳನ್ನು ನೀಡಬೇಕಾದರೆ ಕನಿಷ್ಠ 25 ವರ್ಷಗಳ ಹಿಂದಿನ ದಾಖಲೆಗಳನ್ನು ಕೇಳುತ್ತಾರೆ. ಮೇಲಾಗಿ ಅದರಲ್ಲಿ ಪ್ರಮಾಣ ಪತ್ರಗಳನ್ನು ಕಡ್ಡಾಯ ಮಾಡಿ ದ್ದಾರೆ. ಬಹುಪಾಲು ಜಾನಪದ ಕಲಾವಿದರು ಅನಕ್ಷರಸ್ಥರು, ಹಳ್ಳಿ–ಹಳ್ಳಿ ತಿರುಗಿ ಜೀವನ ಸಾಗಿಸುವವರು. ಅವರು ದಾಖಲೆಗಳನ್ನು ಇಟ್ಟುಕೊಳ್ಳಲು ಹೇಗೆ ಸಾಧ್ಯ ಎಂಬುದು ಬಹುಪಾಲು ಕಲಾವಿದರ ನೋವು.

ಕಲಾವಿದರ ಕಲೆಯನ್ನು ನೋಡಿ ಲೆಕ್ಕಹಾಕುವ ಬದಲು; ಪ್ರಮಾಣ ಪತ್ರ ನೋಡಿ ಹೇಗೆ ಲೆಕ್ಕ ಹಾಕುತ್ತಾರೋ ತಿಳಿಯದು. ರಾಜ್ಯ ಸರ್ಕಾರ ಈ ಒಂದು ಅಂಶವನ್ನು ಸಡಿಲಗೊಳಿಸಿದರೆ ಹಲವಾರು ಕಲಾವಿದರಿಗೆ ಅನುಕೂಲವಾಗುತ್ತದೆ ಎಂಬುದು ಅವರ ಬೇಡಿಕೆ.

ಕಲಾವಿದರು ಏನಂತಾರೆ?

ಜಿಲ್ಲೆಯಲ್ಲಿ ಜೀವನಾಧಾರ ಭತ್ಯೆ ಯಾರಿಗೂ ಸಿಕ್ಕಿಲ್ಲ. ಕಳೆದ ವರ್ಷ 500 ಅರ್ಜಿ ಕಳಿಸಿದ್ದೇವು. ಏನಾಯಿತು ಎಂದು ಗೊತ್ತೇ ಆಗಿಲ್ಲ. ಹಳ್ಳಿಕಟ್ಟೆಯಲ್ಲಿ ಹಾಡುವವರು ಕಲಾವಿದರೇ ಅಲ್ಲ ಎನ್ನುವ ಮನೋಭಾವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಲ್ಲಿದೆ.
–ಎಂ.ಬಿ.ನಿಂಗಪ್ಪ, ಜಿಲ್ಲಾ ಘಟಕದ ಅಧ್ಯಕ್ಷ, ಕನ್ನಡ ಜಾನಪದ ಪರಿಷತ್‌, ಕಲಬುರ್ಗಿ

*
ಸುಮಾರು 5 ಸಾವಿರ ಪದ ಹಾಡುತ್ತೇನೆ. ‌ನನಗೀಗ 70 ವರ್ಷ ಮೀರಿದೆ. ಆದರೂ ಮಾಸಾಶನ ಸಿಕ್ಕಿಲ್ಲ. ಮಕ್ಕಳು ಬೇರೆ ಕಡೆ ಕೂಲಿ ಮಾಡುತ್ತಿದ್ದಾರೆ. ಇಳಿವಯಸ್ಸಿನಲ್ಲಿಯೂ ನಾನೇ ಹಾಡಿ ಬಂದ ಹಣದಿಂದ ಗಂಡನನ್ನು ನೋಡಿಕೊಳ್ಳುತ್ತಿದ್ದೇನೆ. ಸ್ವಂತ ಹೊಲ, ಮನೆ ಏನೂ ಆದಾಯ ಇಲ್ಲ.ಈಗ ಹಾಡುವುದು ಕಷ್ಟವಾಗುತ್ತಿದೆ. ಇಳಿವಯಸ್ಸಿನ ಬದುಕಿಗೆ ನೆರವು ಬೇಕಾಗಿದೆ.
–ಲಕ್ಷ್ಮಿಬಾಯಿ ಚಂದ್ರಶ್ಯಾ ಅವರಾದೆ, ಹಿರಿಯ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT