ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಹುದ್ದೆ ಕಲ್ಯಾಣ ಕರ್ನಾಟಕದವರಿಗೆ ನೀಡಿ’

Published 24 ಮೇ 2023, 14:15 IST
Last Updated 24 ಮೇ 2023, 14:15 IST
ಅಕ್ಷರ ಗಾತ್ರ

ಕಲಬುರಗಿ: ‘ಕಲಬುರಗಿ ಹೈಕೋರ್ಟ್‌ ಪೀಠದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಕಲ್ಯಾಣ ಕರ್ನಾಟಕ ಭಾಗದ ವೃತ್ತಿಪರ ವಕೀಲರನ್ನು ನೇಮಕ ಮಾಡಬೇಕು’ ಎಂದು ಗುಲಬರ್ಗಾ ನ್ಯಾಯವಾದಿಗಳ ಸಂಘ ಹೈಕೋರ್ಟ್‌ ಘಟಕದ ಅಧ್ಯಕ್ಷ ಗುಪ್ತಲಿಂಗ ಎಸ್‌.ಪಾಟೀಲ ಒತ್ತಾಯಿಸಿದರು.

‘ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಈ ಭಾಗದವರನ್ನು ನೇಮಿಸದೇ ಹಿಂದಿನ ಸರ್ಕಾರ ಅನ್ಯಾಯವೆಸಗಿತ್ತು. ಸಂಘದ ಮನವಿಗೂ ಸ್ಪಂದಿಸಿರಲಿಲ್ಲ. ಈಗ ನೂತನ ಸರ್ಕಾರ ರಚನೆ ಆಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಈಗಿನ ಕಾರ್ಯಕಾರಿ ಸದಸ್ಯರ ಸಭೆ ಕರೆದು ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ನೂತನ ಅಡ್ವೊಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಘವೇಂದ್ರ ನಾಡಗೌಡ ಹೊರತುಪಡಿಸಿ ಉಳಿದವರು ಬೆಂಗಳೂರು, ಬೆಳಗಾವಿ, ಧಾರವಾಡದವರನ್ನು ನೇಮಕ ಮಾಡಲಾಗಿದೆ. ಅವರು ನಮಗೆ ಸ್ಥಳೀಯವಾಗಿ ಲಭ್ಯವಾಗುವುದಿಲ್ಲ. ಹೈಕೋರ್ಟ್‌ ಪೀಠದ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿಯೂ ಪ್ರತಿಭಾವಂತರಿದ್ದಾರೆ. ಹಾಗಾಗಿ, ಈ ಭಾಗದವರನ್ನೇ ನೇಮಕ ಮಾಡಬೇಕು. ಇಲ್ಲವಾದಲ್ಲಿ ಈ ಎಲ್ಲ ಜಿಲ್ಲೆಗಳ ವಕೀಲರ ಸಂಘಗಳ ಬೆಂಬಲದೊಂದಿಗೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಎಚ್‌.ಪಾಟೀಲ, ಉಪಾಧ್ಯಕ್ಷ ಅಶೋಕ ಬಿ.ಮುಲಗೆ, ಜಂಟಿ ಕಾರ್ಯದರ್ಶಿ ಭೀಮರಾಯ ಎಂ.ಎನ್‌., ಖಜಾಂಚಿ ಶ್ರವಣಕುಮಾರ ಜಿ.ಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT