ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಸಿರು ಪ್ರತಿಷ್ಠಾನದ ಅಪಸ್ವರ: ಕಲಬುರಗಿಯಲ್ಲಿ ಪ್ರತಿಭಟನೆ

Published 1 ಜೂನ್ 2024, 23:37 IST
Last Updated 1 ಜೂನ್ 2024, 23:37 IST
ಅಕ್ಷರ ಗಾತ್ರ

ಕಲಬುರಗಿ: ‘371 (ಜೆ) ವಿಶೇಷ ಸ್ಥಾನದಿಂದ 24 ಜಿಲ್ಲೆಗಳ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ಹಸಿರು ಪ್ರತಿಷ್ಠಾನ ಮುಖಂಡರು ಹುಸಿ ಆರೋಪ ಮಾಡಿ, ತಪ್ಪು ಸಂದೇಶ ರವಾನಿಸಿ ಅಖಂಡ ಕರ್ನಾಟಕವನ್ನು ಒಡೆಯುವಂತಹ ನೀಚ ಕೃತ್ಯ ಎಸಗುತ್ತಿದ್ದಾರೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು ಆರೋಪಿಸಿ ನಗರದಲ್ಲಿ ಶನಿವಾರ ಪ್ರತಿಭಟಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಹೋರಾಟ ಸಮಿತಿ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಬೋಧಕರು, ವಿದ್ಯಾರ್ಥಿಗಳು, ಚಿಂತಕರು, ಹಿಂದುಳಿದ, ಕನ್ನಡಪರ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

‘371 (ಜೆ) ಜಾರಿಯಾಗಿ 10 ವರ್ಷಗಳು ಕಳೆದಿವೆ. ಕೆಲವು ಸವಲತ್ತುಗಳು ಈಗಷ್ಟೇ ಸಿಗುವ ಹಂತದಲ್ಲಿವೆ. ಆದರೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸಹಿಸದ ಕೆಲವು ಪಟ್ಟಭದ್ರರು ಸಂವಿಧಾನ, ಮತ್ತು ಮೀಸಲಾತಿ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಹಸಿರು ಪ್ರತಿಷ್ಠಾನವನ್ನು ನಿಷೇಧಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಹೋರಾಟಗಾರ ಲಕ್ಷ್ಮಣ ದಸ್ತಿ, 'ಮೂರು ದಶಕಗಳಿಗೂ ಹೆಚ್ಚು ಕಾಲ ಹೋರಾಡಿ 371 (ಜೆ) ಪಡೆದಿದ್ದೇವೆ. ಅದನ್ನು ಉಳಿಸಿಕೊಳ್ಳಲು ಮತ್ತೊಂದು ಸುತ್ತಿನ ಹೋರಾಟಕ್ಕೂ ಹಿಂಜರಿಯುವುದಿಲ್ಲ’ ಎಂದು ಎಚ್ಚರಿಸಿದರು.

‘ಹಸಿರು ಪ್ರತಿಷ್ಠಾನವು ಕಲ್ಯಾಣ ಕರ್ನಾಟಕದ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ. ಇದು ಹೀಗೆಯೇ ಮುಂದುವರಿದರೆ ಉಗ್ರ ಸ್ವರೂಪದ ಚಳವಳಿಯೇ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ, ಸಾಹಿತಿ ಪ್ರೊ.ಆರ್‌.ಕೆ.ಹುಡಗಿ, ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT