‘ದೂರುಗಳ ವಿಚಾರಣೆ ಸಹಿತ ಆದೇಶ ಪ್ರತಿಯನ್ನು ತಾ.ಪಂ. ಇಒ ಜಿ.ಪಂ. ಸಿಇಒ ಹಾಗೂ ಆರ್‌ಡಿಪಿಆರ್ ಇಲಾಖೆಗೂ ಕಳುಹಿಸುತ್ತೇವೆ. ಎಷ್ಟು ಆದೇಶಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಸರಿಯಾಗಿ ಕೊಡುತ್ತಿಲ್ಲ. ಕಲಬುರಗಿಯ 111 ಪಿಡಿಒಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶಿಸಿದ್ದೇವೆ. ಪ್ರಾಧಿಕಾರಕ್ಕಾಗಲಿ ಅಥವಾ ದೂರುದಾರರಿಗೆ ಶಿಸ್ತು ಕ್ರಮದ ಮಾಹಿತಿಯೇ ಇಲ್ಲ. ಇದು ಹೀಗೆ ಮುಂದುವರಿದರೆ ದೂರುದಾರರಿಗೆ ಭ್ರಮ ನಿರಸನ ಆಗುತ್ತದೆ’ ಎನ್ನುತ್ತಾರೆ ಕಲಬುರಗಿ ವಿಭಾಗದ ಕುಂದು–ಕೊರತೆ ನಿವಾರಣಾ ಪ್ರಾಧಿಕಾರದ ಅಧಿಕಾರಿ ಡಾ. ಟಿ.ಶ್ರೀನಿವಾಸ ರೆಡ್ಡಿ. ‘ವಿಚಾರಣೆಯ ಬಳಿಕ ಆದೇಶದ ತೀರ್ಪು ಕೊಟ್ಟ ಮೂರು ತಿಂಗಳ ಒಳಗಾಗಿ ಸಂಬಂಧಿಸಿದ ಅಧಿಕಾರಿ ಮೇಲ್ಮನವಿ ಸಲ್ಲಿಸಬೇಕು. ಆದರೆ ಇದುವರೆಗೂ ಒಬ್ಬರು ಮೇಲ್ಮನವಿಗೆ ಹೋಗಿಲ್ಲ. ಹೀಗಾಗಿ ಅವರು ತಪ್ಪು ಒಪ್ಪಿಕೊಂಡಂತೆ ಆಗುತ್ತದೆ. ಸಂಬಂಧಿಸಿದ ಮೇಲಧಿಕಾರಿಗಳು ಅವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಅಮಾನತು ವಿಚಾರಣೆಯ ಆದೇಶ ಅಥವಾ ಕನಿಷ್ಠ ಚಾರ್ಜ್ ಶೀಟ್ ಸಹ ಹಾಕುತ್ತಿಲ್ಲ’ ಎಂದು ಬೇಸರದಿಂದ ನುಡಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿ.ಪಂ. ಸಿಇಒ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ.
ದೂರು ಸಲ್ಲಿಕೆ ಹೇಗೆ?
ದೂರುದಾರರು ಗ್ರಾ.ಪಂ. ನಲ್ಲಿ ನಿಗದಿತ ನಮೂನೆಯ ಅರ್ಜಿ ಪಡೆದು ಅಲ್ಲಿ ಕೇಳಲಾದ ಮಾಹಿತಿ ಭರ್ತಿ ಮಾಡಬೇಕು. ದೂರುದಾರರ ವಿಳಾಸ ಪಂಚಾಯಿತಿ ಹೆಸರು ಮತ್ತು ಅಧಿಕಾರಿ/ಅಧ್ಯಕ್ಷ/ ನೌಕರರ ಹೆಸರು ದೋಷದ ಸ್ವರೂಪ ಪೂರಕ ದಾಖಲೆಗಳನ್ನು ನೀಡಬೇಕು. ₹10 ಮೌಲ್ಯದ ಪೋಸ್ಟಲ್ ಆರ್ಡರ್ ಹಾಗೂ ಸ್ವಯಂ ದೃಢೀಕರಣ ಮಾಡಿ ಜಿ.ಪಂ. ಕಚೇರಿಯಲ್ಲಿನ ಕುಂದು–ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು.