ಕಲಬುರಗಿ: ‘ಶತಮಾನಗಳ ಹಿಂದೆ ನಳಂದಾ, ತಕ್ಷಶಿಲಾದಂತಹ ವಿಶ್ವವಿದ್ಯಾಲಯಗಳು ವಿಶ್ವಕ್ಕೆ ಭಾರತದ ಭವ್ಯ ಶಿಕ್ಷಣ ಪರಂಪರೆಯನ್ನು ಉಣಬಡಿಸಿದ್ದವು. ಈಗಲೂ ಅಂತಹ ವೈಭವವನ್ನು ಮರಳಿ ರೂಪಿಸಬೇಕಾದ ಅಗತ್ಯವಿದೆ’ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 42ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಮ್ಮ ಶೈಕ್ಷಣಿಕ ಪರಂಪರೆ ಅತಿ ಪ್ರಾಚೀನವಾದುದಾಗಿದ್ದು, ಮಾನವಿಕ ಶಿಕ್ಷಣವನ್ನು ನೀಡುತ್ತಿತ್ತು. ಈಗ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಮೂಲಕ ಭಾರತದ ಸಾಕ್ಷರತೆಯನ್ನು ಶೇ 100ರಷ್ಟು ಸಾಧಿಸಬೇಕಿದೆ. ಪ್ರಸ್ತುತ ದೇಶದಲ್ಲಿ ಪುರುಷರು ಶೇ 75ರಷ್ಟು ಸಾಕ್ಷರತೆ ಹೊಂದಿದ್ದರೆ, ಮಹಿಳೆಯರಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ ಇದೆ. ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯವಿದ್ದು, ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ’ ಎಂದರು.
‘ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಕಸಿತ ಭಾರತದ ಪರಿಕಲ್ಪನೆಯನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಆರ್ಥಿಕ, ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಅವರ ಸಂಕಲ್ಪಕ್ಕೆ ಎಲ್ಲರೂ ಸಹಕಾರ ನೀಡಬೇಕಾದ ಅಗತ್ಯವಿದೆ. ಅರ್ಥಿಕ ಪ್ರಗತಿಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ 5ನೇ ಸ್ಥಾನದಲ್ಲಿದ್ದು, ಇದನ್ನು ಮೂರನೇ ಸ್ಥಾನಕ್ಕೆ ತರಲು ಪ್ರಧಾನಮಂತ್ರಿಗಳು ಪಣ ತೊಟ್ಟಿದ್ದಾರೆ’ ಎಂದ ಅವರು, ‘ವಸುಧೈವ ಕುಟುಂಬಕಂ ಪರಿಕಲ್ಪನೆ ನಮ್ಮದಾಗಿದ್ದು, ಸರ್ವರೂ ಸುಖದಿಂದ ಬಾಳುವಂತೆ ಆ ಮೂಲಕ ಕಾಯಿಲೆಗಳಿಲ್ಲದ ಜೀವನ ನಡೆಸುವ ನಮ್ಮ ಚಿಂತನೆ ಎಲ್ಲೆಡೆ ಪಸರಿಸಬೇಕಿದೆ’ ಎಂದು ಹೇಳಿದರು.
ಗೋವಾದ ಡೋನಾ ಪಾಲ್‌ನ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯ ನಿರ್ದೇಶಕ ಪ್ರೊ. ಸುನೀಲ್ ಕುಮಾರ್ ಸಿಂಗ್ ಮಾತನಾಡಿ, ‘ಕಲ್ಲಿದ್ದಲು ಉರಿಸುವ ಮೂಲಕ ಇಂಗಾಲದ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಮೂಲಕ ಹಸಿರು ಮನೆ ಪರಿಣಾಮ ಉಂಟಾಗುತ್ತಿದೆ. ಇದರಿಂದ ಸಾಗರದಲ್ಲಿನ ಬಿಸಿಯೂ ಹೆಚ್ಚುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅಣುಬಾಂಬ್ ತಯಾರಿಸುವಷ್ಟು ಶಕ್ತಿ ಉತ್ಪಾದನೆಯಾಗಲಿದ್ದು, ಮನುಕುಲದ ಅಸ್ತಿತ್ವದ ಬಗ್ಗೆಯೇ ಆತಂಕ ಎದುರಾಗುತ್ತದೆ’ ಎಂದರು.
‘ನಾಲ್ಕು ಶತಮಾನಗಳ ಹಿಂದೆಯೇ ಭಾರತವು ಜಾಗತಿಕ ಜಿಡಿಪಿಯ ಅರ್ಧದಷ್ಟು ಕೊಡುಗೆ ನೀಡುತ್ತಿತ್ತು. ಪ್ರಸ್ತುತ ಇರುವ ಸಮಸ್ಯೆಗಳನ್ನು ಮೆಟ್ಟಿನಿಂತು ಇಂದು ಮತ್ತೆ ಭಾರತವು ವಿಶ್ವಗುರುವಾಗುವ ನಿಟ್ಟಿನಲ್ಲಿ ಎಲ್ಲರೂ ಉತ್ಸಾಹದಿಂದ ಮುಂದೆ ಸಾಗಬೇಕು’ ಎಂದು ಸಲಹೆ ನೀಡಿದರು.
ಮೂವರಿಗೆ ಗೌರವ ಡಾಕ್ಟರೇಟ್: ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ವಕೀಲರಾದ ಅರ್ಚನಾ ಪ್ರದೀಪ ತಿವಾರಿ, ಕಲ್ಯಾಣ ಕರ್ನಾಟಕ ಜನಪರ ಹೋರಾಟ ಸಮಿತಿ ಮುಖಂಡ ಲಕ್ಷ್ಮಣ ದಸ್ತಿ ಹಾಗೂ ಕೃಷಿ ತಜ್ಞ ಮತ್ತು ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
74 ಅಭ್ಯರ್ಥಿಗಳಿಗೆ ಚಿನ್ನದ ಪದಕ ಪ್ರದಾನ: ಘಟಿಕೋತ್ಸವದಲ್ಲಿ ವಿವಿಧ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿಸಿದ 74 ಅಭ್ಯರ್ಥಿಗಳಿಗೆ 168 ಚಿನ್ನದ ಪದಕ ಪ್ರದಾನ ಮಾಡಲಾಯಿತು. 9 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ಪರಿವರ್ತಿಸಿ 14 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಾಜನಾಳ್ಕರ ಲಕ್ಷ್ಮಣ, ವಿತ್ತಾಧಿಕಾರಿ ಗಾಯತ್ರಿ ಸೇರಿದಂತೆ ವಿದ್ಯಾ ವಿಷಯಕ ಪರಿಷತ್, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯದ ಡೀನರು, ಬೋಧಕ-ಬೋಧಕೇತರ ವೃಂದ ಹಾಜರಾಗಿದ್ದರು.
ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ತಾಯಿಯ ಹೆಸರಲ್ಲಿ ಎರಡು ಗಿಡಗಳನ್ನು ನೆಡುವ ಸಂಕಲ್ಪ ಮಾಡಿರಿ. ವಿ.ವಿ. ಗಳು ಮುಂದಿನ ವಾರದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಗಿಡ ನೆಡಬೇಕುಥಾವರಚಂದ್ ಗೆಹಲೋತ್ ರಾಜ್ಯಪಾಲ
ಗುಲಬರ್ಗಾ ವಿ.ವಿ.ಯಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಹುದ್ದೆಗಳ ಭರ್ತಿಗೆ ಈಗಾಗಲೇ ರಾಜ್ಯಪಾಲರು ಅನುಮೋದನೆ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒಪ್ಪಿದ್ದಾರೆಡಾ.ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ
‘ಮಕ್ಕಳ ಆಸ್ಪತ್ರೆಗೆ ವಿ.ವಿ.ಯ 10 ಎಕರೆ’ ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಮಕ್ಕಳ ಆಸ್ಪತ್ರೆಯನ್ನು ಆರಂಭಿಸುವ ಉದ್ದೇಶದಿಂದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಮಂಜೂರಾತಿ ಪಡೆದಿದ್ದು ಇದಕ್ಕಾಗಿ ಗುಲಬರ್ಗಾ ವಿಶ್ವವಿದ್ಯಾಲಯದ 10 ಎಕರೆ ಭೂಮಿಯನ್ನು ಕೇಳಿದ್ದರು. ಈ ಭಾಗದಲ್ಲಿ ವೈದ್ಯಕೀಯ ಸೇವೆಗಳ ವಿಸ್ತರಣೆಯನ್ನು ಗಮನದಲ್ಲಿರಿಸಿಕೊಂಡು ಆಸ್ಪತ್ರೆ ಸ್ಥಾಪನೆಗೆ ವಿ.ವಿ.ಯ 10 ಎಕರೆ ಭೂಮಿಯನ್ನು ನೀಡಲು ತೀರ್ಮಾನಿಸಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪ್ರಕಟಿಸಿದರು. ಘಟಿಕೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ‘ಮಲ್ಟಿ ಡಿಸಿಪ್ಲನರಿ ಕೇಂದ್ರ ಸ್ಥಾಪನೆಗೆ 25 ಎಕರೆ ಜಮೀನು ಗುಲಬರ್ಗಾ ವಿ.ವಿ.ಯಿಂದ ನೀಡಲಾಗುತ್ತಿದೆ. ಇದರಿಂದ ವಿ.ವಿ. ವಿದ್ಯಾರ್ಥಿಗಳಿಗೆ ದೊಡ್ಡ ಪ್ರಯೋಜನವಾಗಲಿದೆ’ ಎಂದರು. ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನಿಧಿಯಲ್ಲಿ ಈ ಭಾಗದ ವಿಶ್ವವಿದ್ಯಾಲಯಗಳ ಬೆಳವಣಿಗೆಗೆ ಶೇ 10ರಷ್ಟು ಅನುದಾನ ನೀಡಬೇಕು ಎಂದು ರಾಜ್ಯಪಾಲರು ಮಂಡಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಯ ಇದರಿಂದ ಈ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ’ ಎಂದು ಹೇಳಿದರು.
ಹುದ್ದೆಗಳ ಭರ್ತಿಗೆ ಬೇಡಿಕೆ ಇಟ್ಟ ಕುಲಪತಿ ಘಟಿಕೋತ್ಸವದ ವೇದಿಕೆಯಲ್ಲಿಯೇ ಕುಲಪತಿ ಪ್ರೊ. ದಯಾನಂದ ಅಗಸರ ಅವರು ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯಪಾಲರು ಉನ್ನತ ಶಿಕ್ಷಣ ಸಚಿವರಿಗೆ ಬೇಡಿಕೆ ಸಲ್ಲಿಸಿದರು. ‘248 ಮಂಜೂರಾದ ಬೋಧಕ ಹುದ್ದೆಗಳ ಪೈಕಿ ಈಗ ಕೇವಲ 38 ಜನರಿದ್ದಾರೆ. 707 ಬೋಧಕೇತರ ಸಿಬ್ಬಂದಿ ಪೈಕಿ 168 ಜನ ಕರ್ತವ್ಯ ನಿರ್ವಹಿಸುತ್ತಿದ್ದು ಉಳಿದವರು ನಿವೃತ್ತರಾಗಿದ್ದಾರೆ. ಈ ಹುದ್ದೆಗಳಲ್ಲಿ ಕೆಲವನ್ನು ಹೊಸದಾಗಿ ಆರಂಭವಾದ ರಾಯಚೂರು ಹಾಗೂ ಬೀದರ್ ವಿಶ್ವವಿದ್ಯಾಲಯಗಳಿಗೆ ಹಂಚಿಕೆ ಮಾಡಬೇಕಿದೆ. ಹುದ್ದೆಗಳ ಭರ್ತಿ ಆಗದ್ದರಿಂದ ಬೋಧನೆ ಹಾಗೂ ಸಂಶೋಧನೆಗೆ ಹಿನ್ನಡೆಯಾಗಿದೆ. ಇಷ್ಟಾಗಿಯೂ ಅಮೆರಿಕ ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳ ವಿ.ವಿ.ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.
ರಜೆ ಮೇಲೆ ತೆರಳಿದ ಕುಲಸಚಿವೆ ಕಲಬುರಗಿಯ ಇಂದಿರಾಗಾಂಧಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಅಕ್ರಮವಾಗಿ ಪರೀಕ್ಷೆ ಬರೆದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದರಿಂದ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ ಅವರನ್ನು ರಜೆಯ ಮೇಲೆ ಕಳುಹಿಸಲಾಗಿತ್ತು. ಘಟಿಕೋತ್ಸವದ ಸಂದರ್ಭದಲ್ಲಿ ರಾಜ್ಯಪಾಲರು ಭಾಗವಹಿಸಿದ್ದ ವೇದಿಕೆಯಲ್ಲಿ ಎಫ್‌ಐಆರ್ ದಾಖಲಾದ ಕುಲಸಚಿವೆ ಕುಳಿತುಕೊಳ್ಳುವಂತಿಲ್ಲ ಎಂದು ರಾಜ್ಯಪಾಲರ ಕಚೇರಿಯು ವಿ.ವಿ. ಕುಲಪತಿಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಅವರಿಗೆ ರಜೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.