ಗುರುವಾರ , ಅಕ್ಟೋಬರ್ 1, 2020
22 °C

ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ದತ್ತಾತ್ರೇಯ ಅಧಿಕಾರ ಸ್ವೀಕಾರ; ಅನಿಶ್ಚಿತತೆಗೆ ತೆರೆ

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಆ ಮೂಲಕ ಅನಿಶ್ಚಿತತೆಗೆ ತೆರೆ ಬಿದ್ದಿದೆ. ಮಂಡಳಿಗೆ ವರ್ಷದ ನಂತರ ಅಧ್ಯಕ್ಷರು ಸಿಕ್ಕಂತಾಗಿದೆ.

ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವುದು ಹಾಗೂ ಕಾಮಗಾರಿಗಳಿಗೆ ವೇಗ ನೀಡುವ ಬಹುದೊಡ್ಡ ಜವಾಬ್ದಾರಿ ಮತ್ತು ಸವಾಲು ನೂತನ ಅಧ್ಯಕ್ಷರ ಹೆಗಲೇರಿದೆ.

‘ಮಂಡಳಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಮಂದಗತಿಯಿಂದ ಸಾಗಿವೆ. ಸರ್ಕಾರ ಸರಿಯಾಗಿ ಅನುದಾನವನ್ನೂ ನೀಡುತ್ತಿಲ್ಲ. ಹೀಗಾಗಿ ಈ ಭಾಗದ ಪ್ರಗತಿ ಹಿಂದೆ ಬಿದ್ದಿದೆ. ಮಂಡಳಿಯ ನಿಯಮಾವಳಿಗಳ ಪಾಲನೆಯೂ ಸರಿಯಾಗಿ ಆಗುತ್ತಿಲ್ಲ’ ಎಂದು ದೂರುತ್ತಾರೆ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ.

‘ಶಾಸಕರ ಅನುಕೂಲಕ್ಕಾಗಿ ಗುಂಪು ಟೆಂಡರ್‌ ಪದ್ಧತಿ ಜಾರಿಗೆ ತಂದಿದ್ದಾರೆ. ಒಬ್ಬ ಗುತ್ತಿಗೆದಾರ ಹತ್ತಾರು ಕಾಮಗಾರಿಗಳ ಗುತ್ತಿಗೆ ಪಡೆದರೆ ಕಾಮಗಾರಿಗೆ ವೇಗ ದೊರೆಯಲು ಹೇಗೆ ಸಾಧ್ಯ? ಈ ಪದ್ಧತಿ ಕೈಬಿಡಬೇಕು. ಮೊದಲು ಇದ್ದಂತೆ ಕಾಮಗಾರಿವಾರು ಟೆಂಡರ್‌ ಕರೆಯಬೇಕು. ಇದರಿಂದ ಹೆಚ್ಚಿನ ಗುತ್ತಿಗೆದಾರರಿಗೆ ಕೆಲಸ ಸಿಕ್ಕು, ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲು ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಅವರು.

‘ನೂತನ ಅಧ್ಯಕ್ಷರು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಈಗಾಗಲೇ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಬೇಕು. ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ವೇಗ ನೀಡಬೇಕು. ನೂತನ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡುವಲ್ಲಿ ಈಗ ಬಹಳ ವಿಳಂಬವಾಗುತ್ತಿದೆ. ₹100 ಕೋಟಿ ಅನುದಾನ ಇರುವ ಇಲಾಖೆಗಳಿಗೆ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ₹1500 ಕೋಟಿ ಅನುದಾನ ಇರುವ ಈ ಮಂಡಳಿಗೆ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ಏಕೆ ಬೇಡ’ ಎಂಬ ಪ್ರಶ್ನೆ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಮುಖಂಡ, ರಾಯಚೂರಿನ ರಜಾಕ್‌ ಉಸ್ತಾದ್‌ ಅವರದ್ದು.

‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಲಭ್ಯ ಕಲ್ಪಿಸಲು ನಿಯಮಾವಳಿಗಳ ಸರಳೀಕರಣ ಮಾಡಬೇಕು. ಅವಶ್ಯ ಇರುವೆಡೆ ಶಾಲಾ–ಕಾಲೇಜು ಆರಂಭಿಸುವ ಅಧಿಕಾರ ಮಂಡಳಿಗೆ ಇದೆ. ಅದನ್ನು ನಿರ್ವಹಿಸಬೇಕು’ ಎಂದು ಅವರು ಹೇಳುತ್ತಾರೆ.

ಅಧ್ಯಕ್ಷ ಸ್ಥಾನಕ್ಕೇರಿದ ಪ್ರಥಮ ಶಾಸಕ

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ‘ಹೈದರಾಬಾದ್‌ ಕರ್ನಾಟಕ’ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕರಣ ಮಾಡಿದರು. 2013ರಲ್ಲಿ ಪುನಾರಚಣೆಯಾಗಿದ್ದ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹೆಸರನ್ನೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಬದಲಿಸಿದರು.

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಸರದಿಯಂತೆ ಮಂಡಳಿಯ ಅಧ್ಯಕ್ಷರಾಗಬೇಕು ಎಂಬ ನಿಯಮ ಇತ್ತು. ರಾಜ್ಯ ಸರ್ಕಾರ ಈ ನಿಯಮಕ್ಕೆ ತಿದ್ದುಪಡಿ ತಂದು, ವಿಧಾನ ಸಭೆ ಅಥವಾ ವಿಧಾನ ಪರಿಷತ್‌ ಸದಸ್ಯರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿದೆ.

ಸಚಿವರಾಗಿದ್ದ ಖಮರುಲ್‌ ಇಸ್ಲಾಂ, ಡಾ.ಶರಣಪ್ರಕಾಶ ಪಾಟೀಲ, ಬಸವರಾಜ ರಾಯರಡ್ಡಿ, ಬಸವರಾಜ ಪಾಟೀಲ ಹುಮನಾಬಾದ್‌ ಅವರು ಮಂಡಳಿಯ ಅಧ್ಯಕ್ಷರಾಗಿದ್ದರು. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು.

ಮಂಡಳಿ ಹೆಸರು ಬದಲಾವಣೆ  ಮತ್ತು ನಿಯಮಕ್ಕೆ ತಿದ್ದುಪಡಿಯಾದ ನಂತರ ಅಧ್ಯಕ್ಷರಾಗಿದ ಮೊದಲ ಶಾಸಕ ದತ್ತಾತ್ರೇಯ ಪಾಟೀಲ.

ತೇಲ್ಕೂರ ಮೌನಕ್ಕೆ ಶರಣು

ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನದ ಮೇಲೆ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಕಣ್ಣಿಟ್ಟಿದ್ದರು. ಆದರೆ, ಮುಖ್ಯಮಂತ್ರಿ ಅವರು ತೇಲ್ಕೂರ ಅವರನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಅವರು ಈ ವರೆಗೂ ಅಧಿಕಾರ ವಹಿಕೊಂಡಿಲ್ಲ.

ರಾಜಕುಮಾರ ಅವರು ಈ ವಿಷಯವಾಗಿ ಬಹಿರಂಗವಾಗಿ ಏನನ್ನೂ ಮಾತನಾಡಿಲ್ಲ. ದತ್ತಾತ್ರೇಯ ಪಾಟೀಲ ಅಧಿಕಾರ ಸ್ವೀಕಾರ ಸಮಾರಂಭದಿಂದಲೂ ಅವರು ದೂರು ಉಳಿದಿದ್ದರು.

***

ಕಾಮಗಾರಿಗಳಿಗೆ ವೇಗ ನೀಡಬೇಕಾದರೆ ಮಂಡಳಿಗೆ ಪ್ರತ್ಯೇಕ ಎಂಜಿನಿಯರಿಂಗ್‌ ವಿಭಾಗ ಆರಂಭಿಸಬೇಕು. ನಿಯಮಗಳ ಸರಳೀಕರಣ, ಕ್ರಿಯಾಯೋಜನೆಗಳಿಗೆ ತ್ವರಿತ ಅನುಮೋದನೆ ನೀಡುವ ವ್ಯವಸ್ಥೆ ಜಾರಿಯಾಗಬೇಕು.

–ರಜಾಕ್‌ ಉಸ್ತಾದ್‌, ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಮುಖಂಡ, ರಾಯಚೂರು

***

ಮಂತ್ರಿಗಿಂತಲೂ ಹೆಚ್ಚು ಕೆಲಸ ಮಾಡುವ ಅವಕಾಶ ಕೆಕೆಆರ್‌ಡಿಬಿ ಅಧ್ಯಕ್ಷರಿಗೆ ಇದೆ. ಹಣ ದುರುಪಯೋಗವಾಗದಂತೆ ಎಚ್ಚರ ವಹಿಸಿ ಈ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದ್ದೇನೆ. ನಮ್ಮ ಸಂಘವೂ ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ.

–ಬಸವರಾಜ ಪಾಟೀಲ ಸೇಡಂ, ಕ.ಕ. ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ

***

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮಂಡಳಿಗೆ ₹1500 ಕೋಟಿ ಅನುದಾನ ಘೋಷಿಸಿದ್ದರೂ, ₹500 ಕೋಟಿ ಕಡಿತ ಮಾಡಿದೆ ಎಂಬ ಮಾಹಿತಿ ಇದೆ. ₹1000 ಕೋಟಿ ಅನುದಾನ ನೀಡುವಬಗ್ಗೆಯೂ ಸಂಶಯ ಇದೆ

ಡಾ.ಶರಣಪ್ರಕಾಶ ಪಾಟೀಲ, ಮಂಡಳಿಯ ಮಾಜಿ ಅಧ್ಯಕ್ಷ

***

ಕಲ್ಯಾಣ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಈ ಭಾಗದ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಡಳಿಗೆ ಹೆಚ್ಚಿನ ಅನುದಾನ ತರಲು ಶ್ರಮಿಸುತ್ತೇನೆ.

–ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ಡಿಬಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು