ಭಾನುವಾರ, ಏಪ್ರಿಲ್ 5, 2020
19 °C
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಈರಣ್ಣ ಬೇಸರ

ಹಡಪದ ಸಮಾಜಕ್ಕೆ ನಯಾಪೈಸೆ ಅನುದಾನವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ರಾಜ್ಯದ 20 ಲಕ್ಷ ಇರುವ ಹಡಪದ ಸಮಾಜಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪೂರ್ತಿ ಕಡೆಗಣಿಸಿದ್ದು, ನಯಾಪೈಸೆ ಅನುದಾನವನ್ನೂ ನೀಡಿಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಹಡಪದ ಸಮಾಜದ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಡಪದ ಸಮಾಜವು ತಮಗೆ ಮತ ಹಾಕಲು ಬೇಕು. ತೆರಿಗೆ ಕಟ್ಟಲು ಬೇಕು. ಕ್ಷೌರ ಮಾಡಲು ಬೇಕು. ಬಜೆಟ್‌ನಲ್ಲಿ ನಮಗೆ ಪಾಲು ಇಲ್ಲವೇ ಹೇಳಿ. ನಮ್ಮ ಜನಾಂಗ ಎಷ್ಟು ನಂಬಿಕೆ, ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದರೂ ಅದನ್ನೆಲ್ಲ ಹುಸಿ ಮಾಡಿದ್ದೀರಿ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮವನ್ನು ಟೀಕಿಸಿದರು.

2017ರಲ್ಲಿ ಕಲಬುರ್ಗಿಯಲ್ಲಿ ನಡೆದ ಹಡಪದ ಸಮಾಜದ ಸಮಾವೇಶದಲ್ಲಿ ಮಾತನಾಡಿದಾಗ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಹಡಪದ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ, ಹಡಪದ ಸಮಾಜವನ್ನು ಪ್ರವರ್ಗ 1ಕ್ಕೆ ಸೇರಿಸುವುದು, ಹಜಾಮ ಪದ ಬಳಸಿದವರಿಗೆ ಜಾತಿ ನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಈಗ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅನುದಾನ ನೀಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿರುವ ಎಲ್ಲ ಕ್ಷೌರದ ಅಂಗಡಿಗಳನ್ನು ಬಂದ್‌ ಮಾಡಲಾಗುವುದು. ಅಂಗಡಿಯಲ್ಲಿ ಸಂಗ್ರಹವಾದ ಕೂದಲನ್ನು ಸಂಗ್ರಹಿಸಿ ವಿಧಾನಸೌಧದ ಎದುರು ಸುರುವಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಹಡಪದ ಸಮಾಜದ ಗೌರವ ಅಧ್ಯಕ್ಷ ಬಸವರಾಜ ಹಡಪದ ಸೂಗೂರ, ಕಾರ್ಯಾಧ್ಯಕ್ಷ ಭಗವಂತ ಹಡಪದ ಹೊನ್ನಕಿರಣಗಿ, ಮಹಾಂತೇಶ ಹಡಪದ, ಸುನೀಲ ಹಡಪದ ಗೋಷ್ಠಿಯಲ್ಲಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)