ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ದ್ವೇಷ ರಾಜಕಾರಣ ಮಿತಿಮೀರಿದೆ: ಡಿ.ಕೆ. ಶಿವಕುಮಾರ್

Last Updated 24 ನವೆಂಬರ್ 2020, 5:57 IST
ಅಕ್ಷರ ಗಾತ್ರ

ಕಲಬುರ್ಗಿ: 'ನನ್ನ ಮಗಳ ನಿಶ್ಚಿತಾರ್ಥದ ದಿನವೇ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಉಕ್ಕಿ ಹರಿಯುತ್ತಿದೆ. ನನಗೆ ತೊಂದರೆ ಕೊಟ್ಟವರು ಯಾವಾಗಲೂ ಖುಷಿಯಾಗಿರಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‌ವ್ಯಂಗ್ಯವಾಡಿದರು.

ನಗರದ ಐವಾನ್ ಇ‌‌ ಶಾಹಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇಡೀ ರಾಜ್ಯದಲ್ಲಿ ಯಾವ ಶಾಸಕರಿಗೂ ನೋಟಿಸ್ ನೀಡಿಲ್ಲ. ಆದರೆ ನನಗೆ ಮಾತ್ರ ನೀಡಿದ್ದಾರೆ. ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದ್ವೇಷದ ರಾಜಕಾರಣವನ್ನು ನನ್ನೊಬ್ಬನ ಮೇಲೆ ಯಾಕೆ ಮಾಡುತ್ತಿದ್ದಾರೆ ಎಂದು ‌ಪ್ರಶ್ನಿಸಿದ ಅವರು, ಮಗಳ ನಿಶ್ಚಿತಾರ್ಥದ ದಿನವೇ ನೋಟಿಸ್ ಕೊಡುತ್ತಾರೆ ಅಂದರೆ ಅವರ ದ್ವೇಷ ಎಷ್ಟರಮಟ್ಟಿಗಿದೆ ಅನ್ನೋದು ಅರ್ಥವಾಗುತ್ತದೆ ಎಂದರು.

'ನನ್ನ ವಿರುದ್ಧ ಎಫ್‌ಐಆರ್ ಹಾಕುವ ಜೊತೆಗೆ ನೋಟಿಸ್ ಸಹ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ರಾಜಕೀಯ ಕುಮ್ಮಕ್ಕು ಇಲ್ಲದಿದ್ದಲ್ಲಿ ಸಿಬಿಐ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದರೆ ನ್ಯಾಯ ಸಮ್ಮತ ತನಿಖೆ ನಡೆಸಲಿ. ನಾನು ಕಾನೂನಿಗೆ ಗೌರವ ಕೊಡುತ್ತೇನೆ. ಯಾರೂ ಗಾಬರಿಪಟ್ಟುಕೊಳ್ಳಬೇಡಿ, ಸಿಬಿಐ ಕಚೇರಿ ಕಡೆ ಬರಬೇಡಿ. ನನ್ನ ಪರವಾದ ಹೇಳಿಕೆಗಳನ್ನೂ ನೀಡಬೇಡಿ' ಎಂದು ಮುಖಂಡರಿಗೆ ‌ಮನವಿ‌ ಮಾಡಿದರು.

'ರಾಜ್ಯದಲ್ಲಿ ಪಕ್ಷ ವಿಜಯ ಸ್ಥಾಪಿಸಲು ವಿಜಯನಗರದಿಂದ ಪ್ರವಾಸ ಆರಂಭಿಸಿದ್ದೇನೆ. ಯುವಕರು ವಿಶೇಷವಾಗಿ ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಮಸ್ಕಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾವಿರಾರು ಜನ ಸೇರ್ಪಡೆ ಆದರು. ಉತ್ತರ ಕರ್ನಾಟಕದ ಬಹುದೊಡ್ಡ ಸೇರ್ಪಡೆ ಸಭೆ ಮಸ್ಕಿಯಲ್ಲಿ ಆಗಿದೆ' ಎಂದು‌ ಶಿವಕುಮಾರ್ ‌ತಿಳಿಸಿದರು.

ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಅನೇಕ ಸಚಿವರು ಪ್ರವಾಸ ಮಾಡುತ್ತಿದ್ದಾರೆ. ಅನೇಕ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಆದರೆ ಜನ ಅದನ್ನು ನಂಬುವುದಿಲ್ಲ. ಯಾರ ಸರ್ಕಾರ ಇರುತ್ತದೋ ಅವರಿಗೆ ಗೆಲ್ಲುವ ಅವಕಾಶ ಹೆಚ್ಚಿರುತ್ತದೆ. ಆದರೆ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಈ ಬಾರಿ ಉಪ ಚುನಾವಣೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT