ಶನಿವಾರ, ಅಕ್ಟೋಬರ್ 16, 2021
22 °C

ಕಲಬುರ್ಗಿ: ಜಿಲ್ಲೆಯ ವಿವಿಧೆಡೆ ಭಾರೀ ಮಳೆ, ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆ ಶುಕ್ರವಾರ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಕೆಲವೆಡೆ ಮನೆ ಗೋಡೆ ಕುಸಿದು ಹಾನಿಯಾಗಿದ್ದರೆ, ಹೊಲಗಳಲ್ಲಿ ಮತ್ತೆ ನೀರು ನಿಂತು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ತಡರಾತ್ರಿ 12ರ ಸುಮಾರಿಗೆ ಆರಂಭವಾದ ಮಳೆ ಶನಿವಾರ ನಸುಕಿನ 5ರವರೆಗೂ ನಿರಂತರವಾಗಿ ಸುರಿಯಿತು. 

ನಗರದ ಬ್ರಹ್ಮಪುರ, ಲಾಳಗೇರಿ ಕ್ರಾಸ್, ಸೋನಿಯಾ ಗಾಂಧಿ ಕೊಲೊನಿ, ಶಾಂತಿನಗರ, ಪ್ರಶಾಂತ ನಗರ, ವೆಂಕಟೇಶ್ವರ ನಗರ, ಗೋದುತಾಯಿ ಕೊಲೊನಿ, ಎಸ್.ಬಿ. ಟೆಂಪಲ್, ಗುಲಾಬವಾಡಿ, ಎಪಿಎಂಸಿ ಪ್ರದೇಶ ಸೇರಿದಂತೆ ತಗ್ಗೆ ಪ್ರದೇಶದ ಎಲ್ಲಕಡೆ ನೀರು ನಿಂತುಕೊಂಡಿತು. ಚರಂಡಿಗಳು ತುಂಬಿಕೊಂಡು ಕೊಚ್ಚೆಸಮೇತ ಮಳೆ ನೀರು ರಸ್ತೆಗಳ ಮೇಲೆ ಹೊಳೆಯಂತೆ ಹರಿಯಿತು.

ಸೂಪರ್ ಮಾರ್ಕೆಟ್, ಶಹಾಬಜಾರ್, ಮುಸ್ಲಿಂಮತ್ತು ಚೌಕನಲ್ಲೆರುವ ವಾಣಿಜ್ಯ ಮಳಿಗೆಗಳಿಗೂ ನೀರು ನುಗ್ಗಿದೆ. ಕಾಳಗಿ ಪಟ್ಟಣದಲ್ಲಿ ಕಲ್ಲಿನ ಗೋಡೆ ಕುಸಿದಿದೆ.

ಎಲ್ಲಿ, ಎಷ್ಟು ಮಳೆ (ಮಿ.ಮೀ): 
ಕಲಬುರಗಿ ತಾಲ್ಲೂಕಿನಲ್ಲಿ 48, ಚಿಂಚೋಳಿ 34, ಕಾಳಗಿ 50.4, ಜೇವರ್ಗಿ 29, ಸೇಡಂ- 29.5,  ಅಫಜಲಪುರ- 12.

* ಜಲಾಶಯಗಳಲ್ಲಿ ಹೆಚ್ಚಿದ ಒಹರಿವು; ಮುಲ್ಲಾಮಾರಿಯಲ್ಲಿ ಪ್ರವಾಹ ಭೀತಿ

ಚಿಂಚೋಳಿ ವರದಿ: ತಾಲ್ಲೂಕಿನಲ್ಲಿ ಶುಕ್ರವಾರ ಇಡಿ ರಾತ್ರಿ ನಿರಂತರ ಮಳೆ ಸುರಿದಿದೆ. ಇದರಿಂದ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. 

ನಾಗರಾಳ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ. ಇದರಿಂದ ಮುಲ್ಲಾಮಾರಿ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ನದಿ ಪಾತ್ರದ ರೈತರು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಕೆಳದಂಡೆ ಮುಲ್ಲಾಮಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ ಮನವಿ ಮಾಡಿದ್ದಾರೆ.

ಜಲಾಶಯದ ನೀರಿನ ಮಟ್ಟ ಸಮುದ್ರ ಮಟ್ಟದಿಂದ 489.65 ಮೀ. ತಲುಪಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ನದಿಗೆ 850 ಕ್ಯುಸೆಕ್ ಪ್ರಮಾಣದಲ್ಲಿ ನೀರು ಬಿಡಲಾಗಿದೆ ಎಂದರು. 

ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದಿಂದಲೂ ನೀರು ಬಿಡಲಾಗಿದೆ. ಜಲಾಶಯಕ್ಕೆ 245 ಕ್ಯುಸೆಕ್ ಒಳ ಹರಿವಿದ್ದು ಅಷ್ಟೆ ಪ್ರಮಾಣದ ನೀರು ನದಿಗೆ ಬಿಡಲಾಗಿದೆ. ಇದರಿಂದ ಸರನಾಲಾದಲ್ಲಿ ಪ್ರವಾಹದ ಸ್ಥಿತಿಯಿದೆ ಎಂದು ಎಇಇ ಚೇತನ ಕಳಸ್ಕರ ತಿಳಿಸಿದರು. 

ತಾಲ್ಲೂಕಿನ ಮಳೆ ವಿವರ: ತಾಲ್ಲೂಕಿನವಿವಿಧೆಡೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ ವಿವರ ಹೀಗಿದೆ. ಸುಲೇಪೇಟ 56.5, ಚಿಮ್ಮನಚೋಡ 56.2, ಕೋಡ್ಲಿ 48.8, ಚಿಂಚೋಳಿ 34, ಕುಂಚಾವರಂ 30.4.  ಐನಾಪುರ 15.5, ನಿಡಗುಂದಾ 9 ಮಿ.ಮೀ. ಮಳೆ ಸುರಿದಿದೆ ಎಂದು  ತಹಶೀಲ್ದಾರ ಅಂಜುಮ ತಬಸುಮ್ ತಿಳಿಸಿದ್ದಾರೆ.


ಕಾಳಗಿಯ ಪಸ್ತಪುರದಲ್ಲಿ ಕುಸಿದ ಕಲ್ಲಿನ ಗೋಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು