ಕಲಬುರಗಿ: ಮುಂಗಾರು ವಿಳಂಬವಾಗಿ ಸರಿಯಾಗಿ ಬಿತ್ತನೆ ಆಗಿಲ್ಲ. ಈಗ ಅಳಿದುಳಿದ ತೊಗರಿ ಬೆಳೆ ಅತಿವೃಷ್ಟಿಯಿಂದ ತೇವಾಂಶ ಹೆಚ್ಚಾಗಿ ಹಾನಿಗೀಡಾಗಿದೆ. ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
'ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಘೋಷಣೆಗೆ ಕೇಂದ್ರ ಸರ್ಕಾರವು ವಸಾಹತುಶಾಹಿ ಕಾಲಘಟ್ಟದ ಮಾನದಂಡಗಳಿಗೆ ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸಬೇಕು. ಕೂಡಲೇ ಕೇಂದ್ರ ಸರ್ಕಾರವು ಎಲ್ಲಾ ರೈತರ, ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು. ಎಲ್ಲಾ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.
‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 1.88 ಲಕ್ಷ ರೈತರಿಂದ ₹ 161 ಕೋಟಿ ಪ್ರಿಮಿಯಂ ಜಮಾ ಆಗಿದೆ. ಕೇವಲ ₹ 91 ಕೋಟಿ ಮಾತ್ರ ಬಿಡುಗಡೆ ಆಗಿದೆ. ಇನ್ನೂ ₹ 115 ಕೋಟಿ ಬಿಡುಗಡೆ ಮಾಡಬೇಕು. ಅಲ್ಲದೇ, ವಿಮೆ ಹಣ ಪಾವತಿಸದವರ ಖಾತೆಗೆ ಪರಿಹಾರ ಜಮಾ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸೇವೆಯಿಂದ ಅಮಾನತು ಮಾಡಿ ನಿಜವಾದ ಫಲಾನುಭವಿಗಳಿಗೆ ವಿಮೆ ಹಣ ಒದಗಿಸಬೇಕು’ ಎಂದರು.
‘ಈಗಾಗಲೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಜಿಲ್ಲೆಯಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸಬೇಕು. ತಕ್ಷಣವೇ ಬಿಪಿಎಲ್–ಎಪಿಎಲ್ ತಾರತಮ್ಯ ಇಲ್ಲದೇ ಬರಗಾಲ ಪರಿಹಾರ ರೇಷನ್ ವಿತರಣೆಯಲ್ಲಿ ಹೆಚ್ಚುವರಿ ಆಹಾರಧಾನ್ಯ ಒದಗಿಸಬೇಕು. ಆಹಾರಧಾನ್ಯಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು’ ಎಂದು ಮನವಿ ಮಾಡಿದರು.
‘ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಇದಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಸಬೇಕು. ಬರಗಾಲದ ಕೂಲಿಯಾಗಿ ₹ 600 ಪಾವತಿಸಬೇಕು. ರೈತರ, ಕೃಷಿ ಕೂಲಿಕಾರರ, ಗೇಣಿ ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಸಾಯಬಣ್ಣ ಗುಡಬಾ, ಜಾವೇದ್ ಹುಸೇನ್, ಪ್ರಕಾಶ ಜಾನೆ, ಪದ್ಮಿನಿ ಕಿರಣಗಿ, ನಾಗಯ್ಯ ಸ್ವಾಮಿ, ದಿಲೀಪಕುಮಾರ್, ರಾಯಪ್ಪ ಹುರಮುಂಜಿ, ರೇವಣಸಿದ್ದಪ್ಪ ಆಲಗೂಡ, ಜಾಫರ್ ಖಾನಸಾಬ್, ಸಿದ್ದಾರ್ಥ ಠಾಕೂರ, ಕ್ಷೇಮಲಿಂಗ ಭಂಕೂರ, ಕಾವೇರಿ ಭಂಕೂರ, ಜಗದೇವಿ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.