ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆಯ ಅರ್ಭಟ ಮುಂದುವರಿದಿದೆ. ತಾಲ್ಲೂಕಿನ ಜೀವನದಿ ಮುಲ್ಲಾಮಾರಿ ಉಕ್ಕೇರಿದೆ. ತಾಲ್ಲೂಕಿನ ಬೆನಕನಳ್ಳಿಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. 22 ಮನೆಗಳ ಗೋಡೆಗಳು ಭಾಗಶ: ಕುಸಿದಿವೆ.
ಪ್ರವಾಹದಿಂದ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಭಕ್ತಂಪಳ್ಳಿ-ಗರಕಪಳ್ಳಿ, ಪೋಲಕಪಳ್ಳಿ ಅಣವಾರ, ಕೆರಳ್ಳಿ ಗಡಿಕೇಶ್ವರ ಮಾರ್ಗ ಮಧ್ಯದ ಸೇತುವೆ, ಚಂದಾಪುರ ಹನುಮಾನ ಮಂದಿರ ಹಿಂದಿನ ಸೇತುವೆ ಹಾಗೂ ಯಂಪಳ್ಳಿ, ಪಟಪಳ್ಳಿ ಸೇತುವೆಗಳು ಪ್ರವಾಹದಲ್ಲಿ ಮುಳುಗಿವೆ. ಇದರಿಂದ ಉಭಯ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಪಟಪಳ್ಳಿ, ಗಾರಂಪಳ್ಳಿ, ಚಿಮ್ಮನಚೋಡ ಹಳೆಯ ಹಾಗೂ ಹೊಸ ಊರುಗಳ ಮಧ್ಯೆ ಸಂಪರ್ಕ ಕಡಿತವಾಗಿದೆ.
ಮಳೆಯಿಂದ ನದಿ ನಾಲಾ ತೊರೆಗಳು ತುಂಬಿ ಹರಿಯುತ್ತಿರುವುದರಿಂದ ಸೇತುವೆಗಳು ಮುಳುಗಿ ಸಂಪರ್ಕ ಕಡಿತವಾಗಿದೆ. ತಹಶೀಲ್ದಾರ್ ವೀರೇಶ ಮುಳುಗುಂದ ಮಠ ಹಾಗೂ ವೆಂಕಟೇಶ ದುಗ್ಗನ್, ಕಂದಾಯ ನಿರೀಕ್ಷಕ ಕೇಶವರಾವ್ ಕುಲಕರ್ಣಿ ಅವರು ಬೆನಕನಳ್ಳಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.
ವಿಕೋಪ ನಿರ್ವಹಣೆ ಸಮಿತಿ ಸಭೆ:
ತಹಶೀಲ್ದಾರ್ ವೀರೇಶ ಮುಳಗುಂದ ಮಠ ಅಧ್ಯಕ್ಷತೆಯಲ್ಲಿ ವಿಕೋಪ ನಿರ್ವಹಣಾ ಸಮಿತಿ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಅವಲೋಕಿಸಲಾಗಿದ್ದು ಅಗತ್ಯ ಸಿದ್ಧತೆ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು ನೀರಿನ ಮಟ್ಟ 1610 ಅಡಿಗೆ ತಲುಪಿದೆ. 1500 ಕ್ಯುಸೆಕ್ ಒಳಹರಿವು ಇದೆ. ಜಲಾಶಯ ಭರ್ತಿಗೆ ಇನ್ನೂ 8 ಅಡಿ ಮಾತ್ರ ಬಾಕಿಯಿದೆ. ಮುಂಜಾಗ್ರತಾ ಕ್ರಮವಾಗಿ ತಡರಾತ್ರಿಯಿಂದ 600 ಕ್ಯುಸೆಕ್ ನೀರು ನದಿಗೆ ಬಿಡಲಾಗುವುದು ಎಂದು ಎಇಇ ಚೇತನ ಕಳಸ್ಕರ್ ತಿಳಿಸಿದರು.
ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ 2200 ಕ್ಯುಸೆಕ್ ಒಳಹರಿವಿದ್ದು, 2800 ಕ್ಯುಸೆಕ್ ನೀರು ಮುಲ್ಲಾಮಾರಿ ನದಿಗೆ ಹೊರ ಬಿಡಲಾಗುತ್ತಿದೆ. ಜಲಾಶಯದ ನೀರು ಸಂಗ್ರಹಣೆಯ ಗರಿಷ್ಠಮಟ್ಟ 491 ಮೀಟರ್ ಇದ್ದು, 490.20ಮೀಟರ್ ನೀರಿನ ಮಟ್ಟ ಕಾಪಾಡಲಾಗುತ್ತಿದೆ ಎಂದು ಎಇಇ ಅರುಣಕುಮಾರ ವಡಗೇರಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ 20 ಸಣ್ಣ ನೀರಾವರಿಗಳಿದ್ದು ಐನಾಪುರ ಹಳೆ ಕೆರೆ ಭರ್ತಿಯಾಗಿದೆ. ಕೊಳ್ಳೂರು, ತುಮಕುಂಟಾ, ಖಾನಾಪುರ ಭರ್ತಿ ಅಂಚಿನಲ್ಲಿವೆ. ಉಳಿದಂತೆ 16 ಕೆರೆಗಳಿಗೆ 4ರಿಂದ6 ಅಡಿ ನೀರು ಬಂದಿದೆ. ಆದರೆ ರಾಜ್ಯದ ಎರಡನೇ ಅತಿದೊಡ್ಡ ಸಣ್ಣ ನೀರಾವರಿ ಕೆರೆ ಖ್ಯಾತಿ ಸಾಲೇಬೀರನಹಳ್ಳಿ ಕೆರೆಗೆ 13 ಅಡಿ ನೀರು ಬಂದಿದೆ ಎಂದು ಎಇಇ ಶಿವಶರಣಪ್ಪ ಕೇಶ್ವಾರ ತಿಳಿಸಿದ್ದಾರೆ.
ಪ್ರತಿ ಮಳೆಗಾಲದಲ್ಲಿ ನಮ್ಮ ಊರಿನ ಜನರು ಪ್ರವಾಹ ಭೀತಿಯಲ್ಲಿ ಜೀವನ ನಡೆಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.ಮಲ್ಲು ರಾಯಪ್ಪಗೌಡ ಯುವ ಮುಖಂಡ ಬೆನಕನಳ್ಳಿ
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಸೋರುವ ಶಿಥಿಲವಾದ ಶಾಲೆ ಅಂಗನವಾಡಿ ಕಟ್ಟಡ ಬಳಸದಂತೆ ನಿರ್ದೇಶನ ನೀಡಲಾಗಿದೆ. ಸೇತುವೆ ದಾಟಿ ಬರುವ ಶಾಲೆಗಳಿಗೆ ರಜೆ.ವೀರೇಶ ಮುಳುಗುಂದ ಮಠ ಚಿಂಚೋಳಿ ತಹಶೀಲ್ದಾರ್
ಪ್ರವಾಹ ಮುನ್ನಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಲ್ಲಾಮಾರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಜನ ಜಾನುವಾರುಗಳ ಬಗ್ಗೆ ಕಾಳಜಿವಹಿಸಬೇಕುಅವಿನಾಶ ಜಾಧವ ಚಿಂಚೋಳಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.