ಭಾನುವಾರ, ಸೆಪ್ಟೆಂಬರ್ 26, 2021
25 °C

ಸೇಡಂ: ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ: ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದಾಗಿ ಜನತೆ ತತ್ತರಿಸಿದ್ದಾರೆ. ಸೇಡಂ ತಾಲ್ಲೂಕಿನ ಮುಧೋಳ, ಮಳಖೇಡ, ಕೋಡ್ಲಾ, ಕೋಲ್ಕುಂದಾ, ಆಡಕಿ, ಕುರಕುಂಟಾ, ಲಿಂಗಂಪಲ್ಲಿ, ಮದನಾ, ಮೀನಹಾಬಾಳ, ಬೀರನಳ್ಳಿ, ತೆಲ್ಕೂರ ರಿಬ್ಬನಪಲ್ಲಿ, ಮದರಿನಾಗಸನಪಲ್ಲಿ, ರಂಜೋಳ, ಇಟಕಾಲ್ ಸೇರಿದಂತೆ ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗಿದೆ.

ಶುಕ್ರವಾರವು ಸಹ ಭಾರಿ ಮಳೆಯಾಗಿದ್ದರಿಂದ ಭೂಮಿ ಒಣಗುವ ಮುನ್ನವೆ ಪುನಃ ಶನಿವಾರವೂ ಸಹ ಮಳೆಯಾಗಿದ್ದರಿಂದ ತೊಗರಿ ಹೊಲಗಳಲ್ಲಿ ಮಳೆ ನೀರು ನಿಂತಿವೆ. ಅಲ್ಲದೆ ಹೊಲಗಳಲ್ಲಿ ನಾಲಗಳಿಂದ ಹರಿದು ಬಂದು ನೀರಿನಿಂದ ಕೆಲವು ಕಡೆಗಳಲ್ಲಿ ತೊಗರಿ ಬೆಳೆ ಮಳೆಗೆ ಕೊಚ್ಚಿ ಹೋಗಿದೆ.

ಹಳ್ಳ, ಕೊಳ್ಳ, ನಾಲೆಗಳು ತುಂಬಿ ಹರಿದಿವೆ. ಕೆರೆಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಿದ್ದು, ಮೈದುಂಬಿ ನಿಂತಿವೆ. ತಾಲ್ಲೂಕಿನ ಉಭಯ ನದಿಗಳಾದ ಕಮಲಾವತಿ ಮತ್ತು ಕಾಗಿಣಾ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದ ಕೆಲವು ಹೊಲಗಳಲ್ಲಿ ನೀರು ನುಗ್ಗಿದೆ. ಪಟ್ಟಣದಲ್ಲಿ ಭಾರಿ ಮಳೆಯಾಗಿದ್ದರಿಂದ ರಸ್ತೆ ಮೇಲಿನ ನೀರು ಚರಂಡಿಯಲ್ಲಿ ತುಂಬಿ ಹರಿದಿದೆ.

ಪಟ್ಟಣದ ಕೆಲವು ರಸ್ತೆಗಳು ಕೆಸರಿನಿಂದ ಕೂಡಿದ್ದರಿಂದ ವಾಹನ ಸಂಚಾರರಿಗೆ ತೆರಳು ತೊಂದರೆಯುಂಟಾಯಿತು. ವೆಂಕಟೇಶನಗರ, ಕೋಡಂಗಲ್ ರಸ್ತೆ, ಗಣೇಶ ನಗರ, ಶಾಸ್ತ್ರಿ ನಗರ ಸೇರಿದಂತೆ ಕೆಲವು ಕಡೆಗಳಲ್ಲಿ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯುಂಟಾಯಿತು.

ಕಲಬುರ್ಗಿ- ಸೇಡಂ ಸಂಪರ್ಕ ಕಡಿತ: ತಾಲ್ಲೂಕಿನ ಮಳಖೇಡ ಬಳಿಯ ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಮಟ್ಟ ಹೆಚ್ಚಿದ್ದರಿಂದ ಮಳಖೇಡ ಸೇತುವೆ ಮೇಲೆ ನೀರು ಅಪಾಯ ಮಟ್ಟ ಮೀರಿ ಹರಿದಿದೆ. ಇದರಿಂದಾಗಿ ಭಾನುವಾರ ಬೆಳಿಗ್ಗೆಯೇ ರಾಜ್ಯ ಹೆದ್ದಾರಿ 10 ಕಲಬುರ್ಗಿ-ರಿಬ್ಬನಪಲ್ಲಿ ಸಂಪರ್ಕ ಕಡಿತಗೊಂಡಿತು.

ಬೆಣ್ಣೆತೊರಾ, ಚಂದ್ರಂಪಳ್ಳಿ ಜಲಾಶಯಗಳಿಂದ ನದಿಗೆ ನೀರು ಬಿಟ್ಟಿದ್ದರಿಂದ ಹಾಗೂ ಅತಿವೃಷ್ಟಿಯಿಂದಾಗಿ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದೆ. ಕಲಬುರ್ಗಿ-ಸೇಡಂ ತಾಲ್ಲೂಕು ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಕಾರ್, ಬೈಕ್ ಚಾಲಕರು ಪರದಾಡಿದರು. ಅಲ್ಲದೆ ರಸ್ತೆಯಲ್ಲಿ ಲಾರಿಗಳು ಸಾಲಾಗಿ ನಿಂತಿದ್ದು ಕಂಡು ಬಂತು. ಅನಿವಾರ್ಯವಾಗಿ ಕಲಬುರ್ಗಿ, ರಾವೂರ, ಚಿತ್ತಾಪೂರ ಮಾರ್ಗದಿಂದ ಸವಾರರು ಸೇಡಂಗೆ ಆಗಮಿಸಿದರು.

ಶಿಕ್ಷಕರ ದಿನಾಚರಣೆಗೆ ಆಗಮಿಸುವ ಅಧಿಕಾರಿಗಳೂ, ಶಿಕ್ಷಕರು ಇನ್ನಿತರ ಸಿಬ್ಬಂದಿಗಳು ತೊಂದರೆ ಎದುರಿಸಿದರು. ತಾಲ್ಲೂಕಿನ ಮಳಖೇಡ ಸೇರಿದಂತೆ ವಿವಿಧ ಗ್ರಾಮಗಳಿಗೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ಭೇಟಿ ನೀಡಿದ್ದಾರೆ. ಮಳಖೇಡ ಸೇತುವೆಗೆ ಮೇಲೆ ನೀರು ಹರಿಯುತ್ತಿರುವುದನ್ನು ಗಮನಿಸಿ, ಯಾರು ನದಿಯತ್ತ ಸುಳಿಯದಂತೆ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ಸಂಗಾವಿ(ಎಂ) ಗ್ರಾಮದ ಶರಣಬಸ್ಸಪ್ಪ ಜೋಗ ಅವರಿಗೆ ಸೇರಿದ ನಾಲ್ಕು ಎಕರೆಯ ತೋಟದಲ್ಲಿ ಎರಡು ಎಕರೆ ಹೊಲದಲ್ಲಿ ಕಾಗಿಣಾ ನದಿ ನೀರು ಹರಿದಿದ್ದರಿಂದ ತೋಟದ ಬೆಳೆಗಳು ನದಿಪಾಲಾಗಿವೆ. ಕಳೆದ ಎರಡ್ಮೂರು ದಿನಗಳ ಹಿಂದೆಯೇ ಟೊಮ್ಯಾಟೊ, ಮೆಣಸಿನಗಿಡ, ಬದನೆಕಾಯಿ ಸೇರಿದಂತೆ ಇನ್ನಿತರ ಸಸಿಗಳನ್ನು ನೆಟ್ಟಿದ್ದರು ಎನ್ನಲಾಗಿದೆ. ಹೊಲಗಳಲ್ಲಿದ್ದ ಪೈಪ್ ಹಾಗೂ ಸ್ಪಿಂಕಲ್ ಎಂಜಿನಗಳು ನದಿ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ ಎಂದು ರೈತ ಅಲವತ್ತುಕೊಂಡಿದ್ದಾರೆ.

ಶನಿವಾರ ಸುರಿದ ಮಳೆ ವಿವರ:  ಸೇಡಂ 66.5 ಮಿ.ಮೀ, ಆಡಕಿ 61.2 ಮಿ.ಮೀ, ಮುಧೋಳ 34.0 ಮಿ.ಮೀ, ಕೋಡ್ಲಾ, 71 ಮಿ.ಮೀ ಮತ್ತು 24.6 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಕೋಡ್ಲಾ ಹೋಬಳಿಯಲ್ಲಿ ಅತ್ಯಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

70 ಮನೆಗಳಿಗೆ ನುಗ್ಗಿದ ನೀರು:ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸುಮಾರು 70 ಮನೆಗಳಿಗೆ ಮಳೆ ನೀರು ನುಗ್ಗಿದೆ. ಅಲ್ಲದೆ 4 ಕ್ಕಿಂತ ಹೆಚ್ಚು ಮನೆಗಳು ನೆಲಕ್ಕುರಳಿವೆ. ತಾಲ್ಲೂಕಿನ ಮದಕಲ್, ಕೊಂತನಪಲ್ಲಿ, ಜವಾಹರ್ ನಗರ, ಕುರಕುಂಟಾ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಕೊಂತನಪಲ್ಲಿ(2), ಇಂದ್ರಾನಗರ(1) ಮತ್ತು ಆಡಕಿ(1) ಗ್ರಾಮಗಳಲ್ಲಿ ಮನೆಗಳು ನೆಲಕ್ಕುರಳಿವೆ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ತಿಳಿಸಿದ್ದಾರೆ.

ನವೋದಯ ವಸತಿ ನಿಲಯಕ್ಕೆ ನುಗ್ಗಿದ ನೀರು

ಸೇಡಂ ತಾಲ್ಲೂಕಿನ ಮಳಖೇಡ ನವೋದಯ ವಸತಿ ನಿಲಯ ಕಟ್ಟಡದ ಒಳಗಡೆ ನೀರು ನುಗ್ಗಿದ್ದರಿಂದ ವಸತಿ ನಿಲಯದಲ್ಲಿರುವ ಸುಮಾರು 50 ವಿದ್ಯಾರ್ಥಿಗಳನ್ನು ತಮ್ಮ ತಮ್ಮ ಮನೆಗೆ ತೆರಳುವಂತೆ ತಹಶೀಲ್ಧಾರ್ ಬಸವರಾಜ ಬೆಣ್ಣೆಶಿರೂರ್ ಸೂಚಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭಾರಿ ಮಳೆಯಾಗುವ ಸಂಭವ ಇರುವುದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಇರುವುದು ಸೂಕ್ತವಲ್ಲ. ಸಿಬ್ಬಂದಿಗಳು ಅತ್ಯಂತ ಮುಂಜಾಗ್ರತಾ ಕ್ರಮ ವಹಿಸಬೇಕು ಜೊತೆಗೆ ವಿದ್ಯಾರ್ಥಿಗಳು ಇರದಂತೆ ನೋಡಿಕೊಳ್ಳಬೇಕು’ ಎಂದು ಸಭೆ ನಡೆಸಿ ಸೂಚಿಸಿದ್ದಾರೆ.

ಅಲ್ಲದೆ ಮಳಖೇಡದ ಕೋಲಿವಾಡ, ದರ್ಗಾಕಾಲೋನಿ ಸೇರಿದಂತೆ ವಿವಿಧೆಡೆಗಳಲ್ಲಿ ತಹಶೀಲ್ದಾರ್ ಭೇಟಿ ನೀಡಿದರು. ಈಗಾಗಲೇ ಕಾಳಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯ ಬಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.