ಕಲಬುರಗಿ: ಜಿಲ್ಲಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಸೆಪ್ಟೆಂಬರ್ 2 ಮತ್ತು 3ರವರೆಗೆ ಯಲ್ಲೋ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ವ್ಯಾಪಕ ಮಳೆಯಾಗುವ ಕಾರಣ ಗ್ರಾಮದಲ್ಲಿನ ಕೆರೆ, ಹಳ್ಳ, ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ. ಜಾನುವಾರುಗಳಿಗೆ ನೀರು ಕುಡಿಸಲು ಹೊಳೆಯ ಸಮೀಪ ತೆಗೆದುಕೊಂಡು ಹೋಗಬಾರದು. ಸಾರ್ವಜನಿಕರು ಸಹ ನದಿ, ಹಳ್ಳಗಳತ್ತ ಸುಳಿಯಬಾರದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ರೈತರು ತಮ್ಮ ಬೆಳೆಗಳಿಗೆ ಕೀಟನಾಶಕ ಸಿಂಪರಣೆ ಮುಂದೂಡಬೇಕು. ಹೆಸರು, ಉದ್ದಿನ ಬೆಳೆಗಳು ಕಟಾವಿಗೆ ಬಂದಿರುವ ಕಾರಣ ಬೇಗನೆ ಕಟಾವು ಮಾಡಬಹುದಾಗಿದೆ. ಹೊಲ-ಗದ್ದೆಗಳಲ್ಲಿ ಹೆಚ್ಚಿನ ನೀರು ನಿಂತು ಬೆಳೆ ಹಾನಿಯಾಗುವ ಸಂಭವವಿದೆ ಎಂದಿದ್ದಾರೆ.