ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಸನ್ನತಿ ಈಗ ಸಮಸ್ಯೆಗಳ ಆಗರ

ಚರಂಡಿ, ಕುಡಿಯುವ ನೀರು, ಸಿಸಿ ರಸ್ತೆಗಳ ಕೊರತೆ
Last Updated 13 ಅಕ್ಟೋಬರ್ 2020, 4:36 IST
ಅಕ್ಷರ ಗಾತ್ರ

ವಾಡಿ: ಮೌರ್ಯ ಸಾಮ್ರಾಜ್ಯದ ಸ್ಮಾರಕ, ಅವಶೇಷಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಸನ್ನತಿ ಗ್ರಾಮದಲ್ಲಿ ಕನಿಷ್ಠ ಸೌಕರ್ಯಗಳ ಕೊರತೆ ಕಣ್ಣಿಗೆ ರಾಚುತ್ತಿದೆ.

ಭೀಮಾ ನದಿ ದಂಡೆಯ ಮೇಲಿರುವ ಸನ್ನತಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳ ಹೊಂದಿದ್ದು, 4,000 ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಕಟ್ಟಕಡೆಯ ಗ್ರಾಮವಾಗಿರುವ ಇಲ್ಲಿ ಚರಂಡಿ, ಸಿಸಿ ರಸ್ತೆ, ಕುಡಿಯುವ ನೀರು, ಸಾರ್ವಜನಿಕರ ಶೌಚಾಲಯದಂತಹ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಎತ್ತ ನೋಡಿದರತ್ತ ಕಣ್ಣು ಕುಕ್ಕುವ ಕೊಳಚೆ ನೀರು ಸ್ಥಳೀಯ ಆಡಳಿತದ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ. ವಾರ್ಡ್ ನಂ.1ರ ಜನವಸತಿ ಪ್ರದೇಶವಾದ ಹನುಮಾನ ಮಂದಿರ ಹಾಗೂ ಮರಿಯಮ್ಮ ದೇವಸ್ಥಾನದ ಸುತ್ತಲೂ ಕೊಳಚೆ ನೀರು ನಿಂತಿದ್ದು, ದುರ್ನಾತ ಬೀರುತ್ತಿದೆ. ಅಂಬೇಡ್ಕರ್ ಬಡಾವಣೆ, ಶರಣಬಸವೇಶ್ವರ ಹಾಗೂ ಸೋಮೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು, ಜನರು ನಡೆದಾಡಲು ಹರಸಾಹಸ ಪಡುವಂತಾಗಿದೆ.

ಬಹುತೇಕ ಕಡೆ ಸಿಸಿ ರಸ್ತೆಗಳು ಹಾಗೂ ಚರಂಡಿಗಳು ಇಲ್ಲದ ಕಾರಣ ಕೊಳಚೆ ನೀರು ಎಲ್ಲೆಂದರಲ್ಲಿ ನುಗ್ಗಿ ಇಡೀ ಗ್ರಾಮ ಗಬ್ಬೆದ್ದು ನಾರುತ್ತಿದೆ.

‘ಅಶುಚಿತ್ವದಿಂದ ಗ್ರಾಮದಲ್ಲಿ ಸೊಳ್ಳೆಗಳು ಹಾಗೂ ನೊಣಗಳ ಕಾಟ ವಿಪರೀತವಾಗಿದೆ. ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಸ್ಥಳೀಯರಾದ ರವಿ ನಾಯ್ಕೋಡಿ ಮತ್ತು ಸಾಬಣ್ಣ ನಾಟೇಕಾರ.

ಶೌಚಕ್ಕೆ ಮುಳ್ಳುಕಂಟಿಗಳೇ ಆಸರೆ: ಗ್ರಾಮದಲ್ಲಿ ಶೌಚಾಲಯಗಳ ಕೊರತೆಯಿರುವುದರಿಂದ ಬಹಿರ್ದೆಸೆ ಮುಂದುವರೆದಿದೆ. ಸ್ಥಳೀಯರು ಶೌಚಕ್ಕಾಗಿ ಮುಳ್ಳುಕಂಟಿಗಳು, ನದಿ ದಂಡೆ ಹಾಗೂ ರಸ್ತೆಯ ಮೊರೆ ಅನಿವಾರ್ಯವಾಗಿದೆ.

ಗ್ರಾಮ ಪಂಚಾಯಿತಿ ಕಚೇರಿ ಇರುವ ಬಡಾವಣೆಗೂ ಸಹ ಮೂಲ ಸೌಕರ್ಯಗಳಿಲ್ಲ. ನಲ್ಲಿ ವ್ಯವಸ್ಥೆ ಕಲ್ಪಿಸದ ಕಾರಣ ಜನರು ಖಾಸಗಿ ನಲ್ಲಿಗಳಿಗೆ ದುಂಬಾಲು ಬಿದ್ದು ನೀರು ತುಂಬಿಸಿಕೊಳ್ಳುತ್ತಾರೆ. ನೀರು ಶುದ್ಧೀಕರಣ ಘಟಕ ಹಾಳು ಬಿದ್ದಿದ್ದು, ಜನರಿಗೆ ಅಶುದ್ಧ ನೀರು ಸೇವನೆ ಅನಿವಾರ್ಯವಾಗಿದೆ.

‘ನೀರಿಗಾಗಿ ಬೇರೊಬ್ಬರ ಮನೆಗೆ ಹೋಗಿ ಅಂಗಲಾಚುತ್ತೇವೆ. ನಳದ ವ್ಯವಸ್ಥೆ ಕಲ್ಪಿಸಿ ಎಂದು 5 ವರ್ಷಗಳಿಂದ ಹೇಳುತ್ತಿದ್ದೇವೆ. ಕೇರ್ ಮಾಡುತ್ತಿಲ್ಲ. ಕೊಳಚೆ ನೀರು ನಿಂತು ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚತೆ ಕಾಪಾಡಿ ಎಂದು ಗೊಗರೆದರೂ ಕೇಳುತ್ತಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಖಾತ್ರಿ ಕೆಲಸ ಇಲ್ಲ: ಕೋವಿಡ್ ಸಂಕಷ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಸ್ಥಳೀಯರಿಗೆ ಕೆಲಸ ಸೃಷ್ಟಿಸಿ ಆಸರೆಯಾಗಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಹುತೇಕ ಬಡಜನರೇ ವಾಸಿಸುವ ಗ್ರಾಮದಲ್ಲಿ ಸಮರ್ಪಕ ಪಡಿತರ ಚೀಟಿಗಳಿಲ್ಲ. ಅರ್ಹ ಪಲಾನುಭವಿಗಳಿಗೆ ಮಂಜೂರಾಗಿದ್ದ ಸಂಧ್ಯಾ ಸುರಕ್ಷಾ, ವಿಧವಾ ಹಾಗೂ ಅಂಗವಿಕಲ ವೇತನಗಳು ಸ್ಥಗಿತಗೊಂಡಿವೆ. ಸ್ಥಳೀಯ ಅಂಚೆ ಕಚೇರಿ ಸಿಬ್ಬಂದಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಡವರಿಗೆ ಮುಟ್ಟಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೂಡಲೇ ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಸಿ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮುಟ್ಟಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT