ಗುರುವಾರ , ಜನವರಿ 20, 2022
15 °C
ಎಚ್‌ಕೆಸಿಸಿಐ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ವ್ಯಾಪಾರಸ್ಥರ ಸಂಘದ ಮುಖ್ಯಸ್ಥರು

ಕಲಬುರ್ಗಿ ‘ವಾರಾಂತ್ಯದ ಕರ್ಫ್ಯೂ ಆದೇಶ ಪಾಲಿಸಲು ಅಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಎಲ್ಲವೂ ಮುಕ್ತವಾಗಿದ್ದು, ಕೊರೊನಾ ಪ್ರಕರಣಗಳೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಇಂಥ ಸಂದರ್ಭದಲ್ಲಿಯೂ ವಾರಾಂತ್ಯದ ಕರ್ಫ್ಯೂ ಹೇರುವ ಅವಶ್ಯಕತೆಯಿಲ್ಲ. ಒಂದೊಮ್ಮೆ ಈ ಸಂಬಂಧ ಆದೇಶ ಹೊರಡಿಸಿದರೆ ಅದನ್ನು ಪಾಲಿಸುವುದಿಲ್ಲ ಎಂದು ವ್ಯಾಪಾರಸ್ಥರು, ಉದ್ಯಮಿಗಳು ಜಿಲ್ಲಾಡಳಿತಕ್ಕೆ ಸವಾಲು ಹಾಕಿದರು.

ಇಲ್ಲಿನ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ, ‘ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮಹಾರಾಷ್ಟ್ರ ಗಡಿಯಲ್ಲೂ ನಿರ್ಬಂಧಗಳಿಲ್ಲ. ಬೇರೆ ರಾಜ್ಯದಿಂದ ಬಂದವರಿಗೆ ಕೋವಿಡ್–19 ಪರೀಕ್ಷೆ ನಡೆಸುತ್ತಿಲ್ಲ. ಕ್ವಾರಂಟೈನ್ ಮಾಡುತ್ತಿಲ್ಲ. ಒಟ್ಟಾರೆಯಾಗಿ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಇದ್ದಷ್ಟು ಪ್ರಕರಣಗಳಿಲ್ಲ. ಆದರೂ ಆಗಸ್ಟ್ 30ರವರೆಗೆ ವಾರಾಂತ್ಯದ ಕರ್ಫ್ಯೂ ವಿಧಿಸಿರುವುದರಿಂದ ವ್ಯಾಪಾರ–ವಹಿವಾಟಿಗೆ ಭಾರಿ ನಷ್ಟವಾಗುತ್ತಿದೆ.

ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆಯು ನಡೆಯುತ್ತಿದ್ದು, ವಾರಾಂತ್ಯದ ಕರ್ಫ್ಯೂ ಪ್ರಾಯೋಗಿಕವಾಗಿ ಕಷ್ಟ ಸಾಧ್ಯ. ಲಾಕ್‌ಡೌನ್ ಅವಧಿಯಲ್ಲಿ ಅಂತರರಾಜ್ಯ ಬಸ್ ಮತ್ತು ರೈಲುಗಳ ಸಾರಿಗೆಯನ್ನು ಯಾವುದೇ ರೀತಿಯಲ್ಲಿ ನಿರ್ಬಂಧಿಸಿಲ್ಲ. ರಾಜಕೀಯ ಸಭೆ ಸಮಾರಂಭಗಳು ಎಂದಿನಂತೆ ನಡೆಯುತ್ತಿವೆ. ಶಾಲಾ, ಕಾಲೇಜುಗಳನ್ನು ಆರಂಭಿಸಲಾಗಿದೆ. ಸರ್ಕಾರದ ಕಚೇರಿಗಳೂ ಎಂದಿನಂತೆ ಪೂರ್ಣಪ್ರಮಾಣದಲ್ಲಿ ಕೆಲಸ ನಿರ್ವಹಿಸುತ್ತಿವೆ. ಆದರೂ, ಅವುಗಳಿಗೆ ಇಲ್ಲದ ನಿರ್ಬಂಧ ವ್ಯಾಪಾರಸ್ಥರಿಗೆ ಏಕೆ’ ಎಂದರು.

ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಮಾತನಾಡಿ, ‘ಎರಡು ವರ್ಷಗಳಿಂದ ಲಾಕ್‌ಡೌನ್‌ ವ್ಯಾಪಾರಸ್ಥರನ್ನು ಹೈರಾಣ ಮಾಡಿದ್ದು, ಎಷ್ಟೋ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚುವ ಸ್ಥಿತಿಗೆ ಬಂದಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದಾಗಲೂ ವಾರಾಂತ್ಯದ ಕರ್ಫ್ಯೂ ಹೇರುತ್ತಿರುವ ಜಿಲ್ಲಾಡಳಿತದ ನಿರ್ಧಾರವನ್ನು ಒಪ್ಪಲಾಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ’ ಎಂದು ಹೇಳಿದರು.

ಕಲಬುರ್ಗಿ ಹೋಟೆಲ್, ಬೇಕರಿ, ವಸತಿಗೃಹಗಳ ಮಾಲೀಕರ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮೆಂಡನ್ ಮಾತನಾಡಿ, ‘ನಮಗೂ ಲಾಕ್‌ಡೌನ್‌ಗೆ ಸಹಕಾರ ನೀಡಿ ಸಾಕಾಗಿದೆ. ಈ ಬಾರಿ ವಾರಾಂತ್ಯದ ಕರ್ಫ್ಯೂ ಹೇರಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ಒಂದೊಮ್ಮೆ ಆದೇಶ ಜಾರಿಗೊಳಿಸಿದರೆ ನಾವು ಆದೇಶ ಉಲ್ಲಂಘಿಸಿ ಹೋಟೆಲ್ ವಹಿವಾಟು ನಡೆಸಲಿದ್ದೇವೆ. ನಮ್ಮ ವಿರುದ್ಧ ಎಷ್ಟು ಪ್ರಕರಣ ಬೇಕಾದರೂ ದಾಖಲಿಸಿಕೊಳ್ಳಿ. ಬೇಕಿದ್ದರೆ ನಮ್ಮನ್ನು ಬಂಧಿಸಿ’ ಎಂದು ಸವಾಲು ಹಾಕಿದರು.

ಬಟ್ಟೆ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಆನಂದ ದಂಡೋತಿ, ಬಟ್ಟೆ ವ್ಯಾಪಾರಿ ರಾಮಕೃಷ್ಣ ಸುತ್ರಾವೆ, ಜುವೆಲರಿ ಅಸೋಸಿಯೇಶನ್ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ವೈನ್‌ಶಾಪ್ ಅಸೋಸಿಯೇಶನ್ ಉಪಾಧ್ಯಕ್ಷ ಆರ್‌.ಪಿ. ರೆಡ್ಡಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ, ಗುಲಬರ್ಗಾ ಡಿಸ್ಟ್ರಿಬ್ಯೂಟರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಅಮಿತ್ ಜೈನ್, ಆಹಾರಧಾನ್ಯ ಮತ್ತು ಕಾಳು ಕಡಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಸಂತೋಷ ಲಂಗರ್, ಕಿರಾಣಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರ ಮಾದಮಶೆಟ್ಟಿ ಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು