ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಕೆಸಿಸಿಐ: ಚುನಾವಣಾಧಿಕಾರಿ ಬದಲಾಯಿಸಲು ಆಗ್ರಹ

Last Updated 4 ಫೆಬ್ರುವರಿ 2021, 13:37 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ)ಯ ಚುನಾವಣಾಧಿಕಾರಿಯನ್ನು ಬದಲಾಯಿಸಬೇಕು. ರಾಜಕೀಯ ರಹಿತವಾದ, ನಿಷ್ಪಕ್ಷಪಾತ ಚುನಾವಣೆ ನಡೆಸಬೇಕು’ ಎಂದು ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ, ಹಾಲಿ ಅಭ್ಯರ್ಥಿಯೂ ಆದ ಅಮರನಾಥ ಪಾಟೀಲ ಆಗ್ರಹಿಸಿದರು.

‘ಎಚ್‌ಕೆಸಿಸಿಐಗೆ ಚುನಾವಣೆ ನಡೆಸುವಂತೆ ನ್ಯಾಯಾಲಯವು ಮತ್ತೆ ಆದೇಶ ಹೊರಡಿಸಿದೆ. ಆದರೆ, ಇಲ್ಲಿಯವರೆಗಿನ ಚುನಾವಣೆಯ ಯಾವುದೇ ಪ್ರಕ್ರಿಯೆಗಳು ನಿಯಮಾನುಸಾರ ನಡೆದಿಲ್ಲ. ತಮಗೆ ಬೇಕಾದ ಒಬ್ಬ ವ್ಯಕ್ತಿಯನ್ನು ಅಧ್ಯಕ್ಷರಾಗಿ ಮಾಡಲು ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ರಾಜಕೀಯ ಪ್ರಭಾವಕ್ಕೆ ಮಣಿದು ಚುನಾವಣಾಧಿಕಾರಿಗಳೂ ನ್ಯಾಯಾಲಯದ ಆದೇಶಗಳಿಗೆ ಮನ್ನಣೆ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಬೇಕು. ಚುನಾವಣಾಧಿಕಾರಿ ಹಾಗೂ ಕಾರ್ಯದರ್ಶಿಗಳನ್ನು ಬದಲಾಯಿಸಬೇಕು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಎಚ್‌ಕೆಸಿಸಿಐ ಸಂಪೂರ್ಣವಾಗಿ ರಾಜಕೀಯರಹಿತವಾದ, ಉದ್ಯಮಿಗಳು ಹಾಗೂ ಉದ್ಯಮವಲಯದ ಹಿತಕ್ಕೆ ಇರುವ ಸಂಸ್ಥೆ. ಆದರೆ, ಇಲ್ಲಿಯೂ ರಾಜಕೀಯ ಬೆರೆಸಿ, ರಾಜಕೀಯ ಪ್ರಭಾವ ಇರುವ ವ್ಯಕ್ತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಕಾರಣಕ್ಕೆ ಇನ್ನಿಲ್ಲದ ಕಸರತ್ತು ಮಾಡುತ್ತಿರುವುದು ಬೇಸರ ತಂದಿದೆ. ನಾನು ಅಧ್ಯಕ್ಷನಾಗಿದ್ದ ಅವಧಿಯನ್ನು ಪ್ರಾಮಾಣಿಕವಾಗಿ, ಯಾವುದೇ ರಾಜಕೀಯ ಬೆಂಬಲ– ಹಸ್ತಕ್ಷೇಪ ಇಲ್ಲದಂತೆ ಪೂರೈಸಿದ್ದೇನೆ. ಮುಂದೆ ಯಾರೇ ಆಯ್ಕೆಯಾದರೂ ಕೂಡ ಚೇಂಬರ್‌ ಹಾಗೇ ಉಳಿಯಬೇಕು, ಅದು ರಾಜಕಾರಣಿಗಳ ಅಡ್ಡಾ ಆಗಬಾರದು ಎಂಬುದು ನನ್ನ ಹಂಬಲ’ ಎಂದರು.

‘ಕಳೆದ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಕೋವಿಡ್‌ ಕಾರಣ ಜಿಲ್ಲಾಧಿಕಾರಿಯವರೇ ಮುಂದೂಡಿದರು. ಆದರೆ, ಮುಂದೂಡಲು ನಾನೇ ಕಾರಣ ಎಂದು ಕೆಲವರು ಅಪಪ್ರಚಾರ ಮಾಡಿದರು. ನಂತರದ ದಿನಗಳಲ್ಲಿ ಅವಿರೋಧ ಆಯ್ಕೆ ಮಾಡಬೇಕು ಎಂದ ಚರ್ಚಿಸಿ, ಎಲ್ಲರ ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಲು ಕೆಲವು ಮುಖಂಡರು ಸೂಚಿಸಿದರು. ಕೆಲವರಿಗೆ ಒತ್ತಡ ಹೇರಿ ನಾಮಪತ್ರ ಹಿಂಪಡೆಯುವಂತೆ ಮಾಡಿದರು. ಅದನ್ನು ಪ್ರಶ್ನಿಸಿ ಸದಸ್ಯರು ಹೈಕೋರ್ಟ್‌ ಮೊರೆ ಹೋದರು. ಇದರ ಮಧ್ಯೆ ನನ್ನ ಪೆನಲ್‌ಅನ್ನೂ ಹೈಜಾಕ್‌ ಮಾಡಿದರು. ಇಷ್ಟೆಲ್ಲ ತಪ್ಪುಗಳನ್ನು ಅವರೇ ಮಾಡಿ, ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘ಚೇಂಬರ್‌ಗೆ 3,414 ಸದಸ್ಯರಿದ್ದು, ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡುವವರು ಅಧ್ಯಕ್ಷರಾಗಲಿ. ಅದನ್ನು ಬಿಟ್ಟು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತ, ವಾಮಮಾರ್ಗದಲ್ಲಿ ಅಧ್ಯಕ್ಷರಾಗುವುದು ಎಷ್ಟು ಸರಿ? ಇದನ್ನು ಪ್ರಶ್ನಿಸಿ ನಾವು ‘ಚೇಂಬರ್‌ ಉಳಿಸಿ’ ಎಂಬ ಅಭಿಯಾನದೊಂದಿಗೇ ಚುನಾವಣೆಗೆ ಹೋಗುತ್ತಿದ್ದೇವೆ. ನಾನು ಆಯ್ಕೆ ಆಗುತ್ತೇನೋ ಬಿಡುತ್ತೇನೋ ಗೊತ್ತಿಲ್ಲ. ಆದರೆ, ಎಚ್‌ಕೆಸಿಸಿಐ ಉಳಿಯಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದೂ ಹೇಳಿದರು.

ಅಭ್ಯರ್ಥಿಗಳಾದ ಬಸವರಾಜ ಎಸ್‌. ಹಡಗಿಲ್, ಭೀಮಾಶಂಕರ ಬಿ. ಪಾಟೀಲ, ಅಭಿಜಿತ್‌, ಮಲ್ಲನಗೌಡ, ಶರಣಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT