ಶುಕ್ರವಾರ, ಮೇ 27, 2022
30 °C
ಈಡಿಗ ಸಮುದಾಯದಿಂದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ 151 ಕಿ.ಮೀ. ಪಾದಯಾತ್ರೆ

ಬೇಡಿಕೆ ಈಡೇರದಿದ್ದರೆ ಜೂ 20ರಿಂದ ಆಮರಣ ಉಪವಾಸ: ಪ್ರಣವಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: 'ಸೇಂದಿ ಮಾರಾಟಕ್ಕೆ ಅವಕಾಶ ನೀಡುವುದು ಹಾಗೂ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು' ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಡಾ.ಪ್ರಣವಾನಂದ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಿಂಚೋಳಿಯಿಂದ ಕಲಬುರಗಿಯವರೆಗೆ ನಡೆದ 151 ಕಿ.ಮೀ. ಪಾದಯಾತ್ರೆಯು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ತಲುಪಿದ ಸಂದರ್ಭದಲ್ಲಿ ಬುಧವಾರ ಅವರು ಮಾತನಾಡಿದರು.

‘ಈಡಿಗರ ಕುಲಕಸುಬು ಕಸಿದುಕೊಂಡ ಸರ್ಕಾರ ತಳಸಮುದಾಯವನ್ನು ಬೀದಿಪಾಲು ಮಾಡಲು ಯತ್ನಿಸುತ್ತಿದೆ. ಕುಲಕಸುಬಾದ ನೀರಾ ಇಳಿಸುವುದು ಹಾಗೂ ಬೇರೆ ರಾಜ್ಯಗಳಿಂದ ಸೇಂದಿ ತಂದು ಕರ್ನಾಟಕದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ನಿಗಮಕ್ಕೆ ₹ 500 ಕೋಟಿ ಅನುದಾನ ನೀಡಬೇಕು. ಸಮಾಜಕ್ಕೆ ಎಲ್ಲ ಸರ್ಕಾರಗಳಿಂದಲೂ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವ ಕೆಲಸವನ್ನು ಮುಖ್ಯಮಂತ್ರಿ ಅವರು ಮಾಡಬೇಕು ಎಂದರು.

‘ಒಂದು ವೇಳೆ ಈ ಎಲ್ಲಾ ಬೇಡಿಕೆಗಳನ್ನು ಜೂನ್ 20 ರೊಳಗಾಗಿ ಈಡೇರಿಸದಿದ್ದರೆ ಅಂದಿನಿಂದಲೇ ಆಮರಣಾಂತ ಉಪವಾಸ ಕುಳಿತುಕೊಳ್ಳುತ್ತೇನೆ. 21ರಂದು ಕಲ್ಯಾಣ ‌ಕರ್ನಾಟಕ ಭಾಗದ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆ ಮಾಡಲಾಗುವುದು‘ ಎಂದು ಎಚ್ಚರಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ಈಡಿಗ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಯಾವ ಸರ್ಕಾರದಿಂದಲೂ ಸಾಧ್ಯವಾಗಿಲ್ಲ.‌ ಎಂಎಸ್ಐಎಲ್ ಮದ್ಯ‌ ಮಾರಾಟ ಮಳಿಗೆಯ ಹೆಚ್ಚಿನ ಲೈಸೆನ್ಸ್ ಗಳನ್ನು ಸಮುದಾಯದ ‌ನಿರುದ್ಯೋಗಿ ಯುವಕರಿಗೆ ಕೊಡಬೇಕು. ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ವಸತಿ ಶಾಲೆಗಳ ಆರಂಭಕ್ಕೆ ಸರ್ಕಾರ ನಿರ್ಧರಿಸಿದೆ. ಅಷ್ಟು ಸಾಲದು. ಸೇಂದಿ ಮಾರಾಟ ನಿಷೇಧಿಸಿದ್ದರಿಂದ ಇದನ್ನೇ ನಂಬಿಕೊಂಡವರಿಗೆ ಬೇರೆ ಉದ್ಯೋಗ ‌ಸೃಷ್ಟಿ‌ ಮಾಡಬೇಕು. ‌ಈ ಸಂಬಂಧ ಮುಖ್ಯಮಂತ್ರಿ ಅವರು ‌ಗಮನ ಹರಿಸಬೇಕು’ ಎಂದರು.

ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಮಾತನಾಡಿ, ‘ಅಬಕಾರಿ ಇಲಾಖೆಯು ನೀಡಿರುವ 12 ಸಾವಿರಕ್ಕೂ ಅಧಿಕ ಲೈಸೆನ್ಸ್‌ಗಳ ಪೈಕಿ ಈಡಿಗ ಸಮುದಾಯಕ್ಕೆ ಕೇವಲ 3 ಸಾವಿರ ‌ಲೈಸೆನ್ಸ್ ನೀಡಲಾಗಿದೆ. ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ರಾಜೇಶ್ ಗುತ್ತೇದಾರ, ನಿತಿನ್ ಗುತ್ತೇದಾರ, ಸತೀಶ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ರಾಜು ಗುತ್ತೇದಾರ ಸೇರಿ ಈಡಿಗ ಸಮುದಾಯದ ತಾಲೂಕು ಅಧ್ಯಕ್ಷರುಗಳು, ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.

ಈಚಲು ಮರದ ಮೆರವಣಿಗೆ

ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಸೇಡಂ, ಚಿತ್ತಾಪುರ, ಶಹಾಬಾದ್, ಅಫಜಲ‍ಪುರ, ಆಳಂದ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಸುಮಾರು 5 ಸಾವಿರಕ್ಕೂ ಅಧಿಕ ಈಡಿಗ ಸಮುದಾಯದ ಮುಖಂಡರು ಜಗತ್ ವೃತ್ತದಿಂದ ಆರಂಭವಾದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಈಡಿಗ ಸಮುದಾಯದ ಕುಲಗುರು ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಹಾಗೂ ಈಚಲು ಮರಗಳನ್ನು ಮೆರವಣಿಗೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು