ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಇಡಿ ಪರೀಕ್ಷೆಯಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಮೌಲ್ಯಮಾಪನ ಕುಲಸಚಿವರು, ಅಲ್ ಬದರ್ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮಕ್ಕೆ ಒತ್ತಾಯ
Published 10 ಜುಲೈ 2024, 6:06 IST
Last Updated 10 ಜುಲೈ 2024, 6:06 IST
ಅಕ್ಷರ ಗಾತ್ರ

ಕಲಬುರಗಿ: ಬಿ.ಇಡಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಗುಲಬರ್ಗಾ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರು ಸೇರಿ ಇತರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಅಮಾನತುಗೊಳಿಸುವಂತೆ ಆಗ್ರಹಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿ.ವಿ.ಯ ಕಾರ್ಯಸೌಧದ ಎದುರು ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಶಿವಶರಣ ಪಾಟೀಲ ಮಾತನಾಡಿ, ‘ಡಬರಾಬಾದ್‌ ಕ್ರಾಸ್‌ ಹತ್ತಿರದ ಇಂದಿರಾ ಗಾಂಧಿ ಬಿ.ಇಡಿ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಬದಲಿಗೆ ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಇತರ ಸುಮಾರು 100 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯ ಮೊದಲು ಪರೀಕ್ಷಾ ಕೇಂದ್ರವಾಗಿತ್ತು. ಅಕ್ರಮ ನಡೆಸುವ ಉದ್ದೇಶಕ್ಕಾಗಿಯೇ ಅಲ್‌ ಬದರ್‌ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಗಿದೆ’ ಎಂದು ದೂರಿದರು.

‘ಈ ಅಕ್ರಮದಲ್ಲಿ ಮೌಲಮಾಪನ ಕುಲಸಚಿವೆ ಮೇಧಾವಿನಿ ಕಟ್ಟಿ, ಅಲ್‌ ಬದರ್‌ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಮ್ಮ ಮಂಠಾಳೆ, ಹಿರಿಯ ಮೇಲ್ವಿಚಾರಕ ಮೌನೇಶ ಅಕ್ಕಿ, ಇಂದಿರಾಗಾಂಧಿ ಕಾಲೇಜಿನ ಅಧ್ಯಕ್ಷ ಮೌಲಾ ಪಟೇಲ್‌, ಪ್ರಾಂಶುಪಾಲ ಸಿದ್ದಣ್ಣ ಆನೂರ, ಬಿ.ಇಡಿ ವಿಷಯ ನಿರ್ವಾಹಕ ಸ್ವರೂಪ್‌ ಭಟ್ಟರ್ಕಿ ಮತ್ತು ಕಚೇರಿಯ ಅಧೀಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ ತಪ್ಪಿತಸ್ಥರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ಕುಲಸಚಿವ (ಆಡಳಿತ) ಸೋಮಲಿಂಗ ಜಿ.ಗೆಣ್ಣೂರ್‌ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ರವಿಕುಮಾರ್ ಈಶ್ವರ್, ಬಾಬುರಾವ್ ಬೀಳಗಿ, ಸಚಿನ್ ಬಂಡೆ, ಸಚಿನ್ ಕೊಚ್ಚಿ, ಮಹದೇವ ಸ್ವಾಮಿ, ಅಣವೀರ ಬಿರಾದಾರ, ಕೈಲಾಶ್ ಶಿಂಧೆ, ಶ್ರೀಸೌಖ್ಯಾ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪೋಲಿಸ್ ಆಯುಕ್ತರಿಗೆ ಮನವಿ: ಬಿ.ಇಡಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಗುವಿವಿ ಮೌಲ್ಯಮಾಪನ ಕುಲಸಚಿವರು ಸೇರಿ ಇತರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗೌತಮ್ ಕರಿಕಲ್ ನೇತೃತ್ವದಲ್ಲಿ ಪೊಲೀಸ್ ಆಯುಕ್ತ ಚೇತನ್‌ ಆರ್. ಅವರಿಗೆ ಮನವಿ ಸಲ್ಲಿಸಲಾಯಿತು. ಬಾಬುರಾವ್ ಬೀಳಗಿ, ಸಚಿನ್ ಬಂಡೆ, ಸಚಿನ್ ಕೊಚ್ಚಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT