ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಚಳವಳಿಯಲ್ಲಿ ವಕೀಲರ ಪಾತ್ರ ಗಮನಾರ್ಹ

ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಹೈಕೋರ್ಟ್‌ ಕಲಬುರ್ಗಿ ಪೀಠದ ಹಿರಿಯ ನ್ಯಾಯಮೂರ್ತಿ ಬಿ.ಎ.ಪಾಟೀಲ ಗುಣಗಾನ
Last Updated 15 ಆಗಸ್ಟ್ 2020, 13:30 IST
ಅಕ್ಷರ ಗಾತ್ರ

ಕಲಬುರ್ಗಿ:'ರಾಷ್ಟ್ರಪಿತ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಡಾ.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್‌ ಸೇರಿದಂತೆ ಸಾವಿರಾರು ಮಹಾನ್ ನಾಯಕರು ಸ್ವಾತಂತ್ರ್ಯ ತಂದು ಕೊಟ್ಟು ಮಾದರಿಯಾಗಿದ್ದಾರೆ. ಅದೇ ರೀತಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಕೀಲರು ಹಾಗೂ ಕಾನೂನು ವೃತ್ತಿಯಲ್ಲಿ ತೊಡಗಿದ್ದವರ ಪಾತ್ರ ಕೂಡ ಗಮನಾರ್ಹ‘ ಎಂದು ಹೈಕೋರ್ಟ್‌ ಕಲಬುರ್ಗಿ ಪೀಠದ ಹಿರಿಯ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರು ಗುಣಗಾನ ಮಾಡಿದರು.

ಹೈಕೋರ್ಟ್ ಪೀಠದ ಆವರಣದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರೋತ್ಸವದ ಧ್ವಜಾರೋಣ ನೆರವೇರಿಸಿ ಮಾತನಾಡಿದ ಅವರು, ’ಪ್ರತಿ ವರ್ಷಕ್ಕಿಂತ ಈ ಬಾರಿ ನಾವು ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಬೇಕಾಗಿದೆ. ಕಾರಣ, ಕೋವಿಡ್-19. ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಈ ಸಂಬಂಧ ಸರ್ಕಾರಗಳು ನೀಡಿರುವ ಮಾರ್ಗಸೂಚಿಗಳನ್ನು ಎಲ್ಲಾ ನಾಗರಿಕರು ಪಾಲಿಸುವ ಮೂಲಕ ಕೋವಿಡ್ ನಿರ್ಮೂಲನೆ ಮಾಡಬೇಕಾಗಿದೆ‘ ಎಂದು ಅವರು ಸಲಹೆ ನೀಡಿದರು.

’ಕೊರೊನಾ ವೈರಸ್ ಹರಡಿದ ಕಾರಣ ಕೋರ್ಟ್ ಕಲಾಪಗಳನ್ನು ಕೂಡ ಈಗ ವರ್ಚುವಲ್ ಹೀಯರಿಂಗ್ (ಆನ್‍ಲೈನ್) ಮೂಲಕ ನಡಸಬೇಕಾಗಿದೆ. ವಕೀಲರು ತಮ್ಮ ವಾದವನ್ನು ಆನ್‌ಲೈನ್ ಮುಖಾಂತರ ಮಂಡಿಸಬೇಕಾಗಿದೆ. ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ಇಂದು ಆನ್‌ಲೈನ್‍ನಲ್ಲಿ ಕಲಿಯುತ್ತಿರುವ ಪ್ರಸಂಗ ಬಂದೊದಗಿದೆ. ಇಡೀ ಜಗತ್ತೇ ಇಂದು ಕೋವಿಡ್‍ನಿಂದಾಗಿ ಇಂತಹ ತಂತ್ರಜ್ಞಾನಕ್ಕೆ ಮರೆಹೋಗಬೇಕಾಗಿದೆ‘ ಎಂದು ವಿಷಾದ ವ್ಯಕ್ತಪಡಿಸಿದರು.

’ದಿನದ 24 ಗಂಟೆಯೂ ತಮ್ಮ ಜೀವನ ಮುಡುಪಾಗಿಟ್ಟು, ಧೈರ್ಯ ಮತ್ತು ಸಾಹಸದಿಂದ ಕೊರೊನಾ ರೋಗ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ವೈದ್ಯರು, ನರ್ಸ್, ಆರೋಗ್ಯ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರ ಸೇವೆ ಶ್ಲಾಘನೀಯ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

’ಲಾಕ್‌ಡೌನ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಜೀವನಶೈಲಿ ಮತ್ತು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ನಮ್ಮ ಜೀವನಶೈಲಿ ಮತ್ತು ಆರ್ಥಿಕತೆ ಮತ್ತೆ ಯಥಾಸ್ಥಿತಿಗೆ ಬರಬೇಕಾದರೆ, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗೂಡಿ ಮುನ್ನಡೆಯಬೇಕು‘ ಎಂದು ಕಿವಿಮಾತು ಹೇಳಿದರು.

’ನ್ಯಾಯಾಂಗ ವ್ಯವಸ್ಥೆಯಲ್ಲಿ ದೇಶದ ಜನರು ವಿಶ್ವಾಸ ಮತ್ತು ನಂಬಿಕೆ ಇಡಬೇಕಾಗಿದೆ. ಎಲ್ಲರೂ ನ್ಯಾಯಾಂಗದ ಘನತೆ– ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ. ಎಲ್ಲಿಯೂ ನ್ಯಾಯ ಸಿಗದಿದ್ದರಿಂದ ನ್ಯಾಯಾಲಯದಲ್ಲಿ ಸಿಗುತ್ತದೆ ಎಂಬ ವಿಶ್ವಾಸದಿಂದ ಜನತೆ ಕೋರ್ಟ್‍ಗಳಿಗೆ ಬರುತ್ತಾರೆ. ಕಷ್ಟಪಟ್ಟು ದುಡಿಯುವ ಮೂಲಕ ಅವರ ಬಯಕೆಯನ್ನು ಈಡೇರಿಸಬೇಕು‘ ಎಂದು ಸಿಬ್ಬಂದಿಗೆ ತಿಳಿ ಹೇಳಿದರು.

’ಇಂಥ ಘನವೆತ್ತ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುವುದಕ್ಕೆ ನಾವು ಹೆಮ್ಮೆಪಡಬೇಕು. ಇಲ್ಲಿ ನ್ಯಾಯಧೀಶರು, ರಿಜಿಸ್ಟ್ರಾರ್‌ಗಳು, ವಕೀಲರು ಹಾಗೂ ಸಿಬ್ಬಂದಿ ಆಗಿ ಸೇವೆ ಸಲ್ಲಿಸುತ್ತಿದ್ದು, ಕೋವಿಡ್ ನಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಹಂಚಿಕೊಂಡು ಕೆಲಸ ಮಾಡುತ್ತಿದ್ದಾರೆ. ನಾನು ಇದಕ್ಕೆ ಎಲ್ಲರನ್ನೂ ಅಭಿನಂದಿಸುತ್ತೇನೆ‘ ಎಂದರು.

ವೈದ್ಯರು, ನರ್ಸ್‌ಗಳು, ಪೊಲೀಸರು, ಸಫಾಯಿ ಕರ್ಮಚಾರಿ, ಆರೋಗ್ಯ ಸಿಬ್ಬಂದಿ ಮತ್ತು ಕೊರೊನಾದಿಂದ ಗುಣಮುಖರಾಗಿ ಬಂದಿರುವ ಹೈ ಕೋರ್ಟ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ನ್ಯಾಯಮೂರ್ತಿಗಳಾದ ನಟರಾಜ್ ರಂಗಸ್ವಾಮಿ, ಹಂಚಾಟೆ ಸಂಜೀವ ಕುಮಾರ, ಪಿ.ಎನ್. ದೇಸಾಯಿ, ಪಿ. ಕೃಷ್ಣಾ ಭಟ್, ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ವಿಜಯ, ಕಲಬುರ್ಗಿ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಬಿ. ಕಿಣ್ಣಿ ಇದ್ದರು.

ಕೆಎಟಿಯಲ್ಲಿ ಸ್ವಾತಂತ್ರ್ಯೋತ್ಸವ

'ಈ ಬಾರಿಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಕೊವೀಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಆಚರಿಸಲಾಗುತ್ತಿದೆ‘ ಎಂದು ನ್ಯಾಯಾಂಗ ಸದಸ್ಯರಾದ ಆರ್.ಬಿ. ಸತ್ಯನಾರಾಯಣ ಸಿಂಗ್‌ ಹೇಳಿದರು.

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಕಲಬುರ್ಗಿ ಪೀಠದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಹಾಯಕ ರಿಜಿಸ್ಟರ್ ಈರಣ್ಣ, ಸರ್ಕಾರಿ ವಕೀಲ ಆರತಿ ಪಾಟೀಲ, ವಕೀಲರಾದ ಬಿ.ಆರ್. ಪಾಟೀಲ, ಬಿ.ಕೆ ಪಾಟೀಲ, ವೀರಶೇಟ್ಟಿ, ಸಿದ್ಧಾರೂಢ ಬಿ. ಪೂಜಾರಿ, ಎ.ಗುನ್ನಾಪೂರ ಪ್ರಶಾಂತ, ಗಂಗಾಧರ, ಸಂಗೀತಾ, ಹುಲಿಯಪ್ಪ ಹೇರೂರ್ ಹಾಗೂ ಅಧಿಕಾರಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT