ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸಂಗ್ರಾಮದ ಆ ದಿನಗಳು | ‘ದಂಗೆಯ ದಿನಗಳಲ್ಲಿ’ ಬಂದ ‘ಶಾಂತಿದೂತ’

ರೈಲು ನಿಲ್ದಾಣದಲ್ಲಿ ಭವ್ಯ ಸ್ವಾಗತ; ಬೃಹತ್ ಸಭೆಯಲ್ಲಿ ಶಾಂತಿ ಸಂದೇಶ
Last Updated 13 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕಲಬುರಗಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕರ್ನಾಟಕಕ್ಕೆ ಬಂದಿದ್ದೇ ಬೆರಳೆಣಿಕೆಯಷ್ಟು ಸಲ. ಅದರಲ್ಲೂ ಕಲಬುರಗಿಗೆ ಒಮ್ಮೆ ಮಾತ್ರ ಬಂದು, ಶಾಂತಿ ಸ್ಥಾಪನೆಗೆ ಮುನ್ನುಡಿ ಬರೆದಿದ್ದರು.

ಸರಿಯಾಗಿ ನೂರು ವರ್ಷಗಳ ಹಿಂದೆ 1921–22ರ ವರ್ಷದಲ್ಲಿ. ಆ ಕಾಲಘಟ್ಟದಲ್ಲಿ ಗುಲಬರ್ಗಾದಲ್ಲಿ ಹೈದರಾಬಾದ್ ನಿಜಾಮರ
ಆಡಳಿತ ಇತ್ತು. ಅಲ್ಲಲ್ಲಿ ಸ್ವಾತಂತ್ರ್ಯದ ಕೂಗು ಮೊಳಗುತ್ತಿತ್ತು. ಇದರ ಮಧ್ಯೆ 1921-22ರ ಒಂದು ರಾತ್ರಿ ಹಿಂದೂ–ಮುಸ್ಲಿಂ ಗಲಭೆ ಉಂಟಾಯಿತು. ಅಶಾಂತಿಯ ವಾತಾವರಣ ನಿರ್ಮಾಣವಾಯಿತು.

‘ಗುಲಬರ್ಗಾ ಪ್ರಾಂತದಲ್ಲಿ ಎತ್ತ ನೋಡಿದರೂ ಹೊಡೆದಾಟ, ಕೊಲೆ ಸಂಚು, ದಬ್ಬಾಳಿಕೆ ನಡೆದಿತ್ತು. ಧಾರ್ಮಿಕ ಕೇಂದ್ರಗಳನ್ನೂ ಕೆಡವಲು ಸಂಚು ಮಾಡಲಾಗಿತ್ತು. ವರ್ಷಗಳವರೆಗೂ ಹೊತ್ತಿ ಉರಿಯುತ್ತಿದ್ದ ದಂಗೆಯಲ್ಲಿ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದರು’ ಎಂಬ ಅಂಶ ಕೆಲ ಪತ್ರಿಕಾ ವರದಿ ಮತ್ತು ಪುಸ್ತಕಗಳಲ್ಲಿ ದಾಖಲಾಗಿದೆ.

ಇಲ್ಲಿನ ಗಲಭೆ ಬಗ್ಗೆ ತಿಳಿದ ಮಹಾತ್ಮ ಗಾಂಧೀಜಿ ತಮ್ಮ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ‘ಗುಲಬರ್ಗಾ ಗಾನ್ ಮ್ಯಾಡ್’ (ಗುಲ್ಬರ್ಗಕ್ಕೆ ಹುಚ್ಚು ಹಿಡಿದಿದೆ) ಎಂಬ ಲೇಖನ ಬರೆದು, ದೇಶದ ಗಮನ ಸೆಳೆದಿದ್ದರು.

ಗಲಭೆಯ ಬೆಂಕಿ ಇನ್ನೂ ಆರದ ದಿನಗಳಲ್ಲೇ ಮಹಾತ್ಮ ಗಾಂಧೀಜಿ ಗುಲಬರ್ಗಾಕ್ಕೆ ಬರುತ್ತಾರೆ. ಶಾಂತಿ, ಸಹಬಾಳ್ವೆಯಿಂದ ಬಾಳಲು ಜನರಿಗೆ ತಿಳಿ ಹೇಳುತ್ತಾರೆ. ಶರಣಬಸವೇಶ್ವರರ ಸಮಾಧಿ ಸ್ಥಳ ಮತ್ತು ಖಾಜಾ ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆಯನ್ನು ನಡೆಸುತ್ತಾರೆ.

‘1927ರ ಫೆಬ್ರುವರಿಯಲ್ಲಿ ಗಾಂಧೀಜಿಯವರಿಗೆ ರೈಲು ನಿಲ್ದಾಣದಲ್ಲಿ ಭವ್ಯ ಸ್ವಾಗತ ಸಿಕ್ಕಿತ್ತು.ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಆಗಿನ ಕಾಲದಲ್ಲೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಹಿಂದೂ–ಮುಸ್ಲಿಂ ಗಲಭೆಯಲ್ಲಿ ಹಾನಿಗೊಳಗಾಗಿದ್ದ ನಂದಿಯ ಬೃಹತ್‌ ವಿಗ್ರಹವನ್ನು ಸಭೆಗೂ ಮುನ್ನ ನೋಡಿದ ಗಾಂಧೀಜಿ ದುಃಖ ವ್ಯಕ್ತಪಡಿಸಿದ್ದರು ಎಂಬ ಬಗ್ಗೆ ಉಲ್ಲೇಖಗಳಿವೆ.

ಶಾಂತಿ ಸಂದೇಶ: ತುಂಬು ಸಭೆಯಲ್ಲಿ ಮಾತನಾಡಿದ್ದ ಗಾಂಧೀಜಿ, ‘ಕುರಾನ್ ಅನ್ನು ನಾನು ಅನೇಕ ಸಲ ಅಧ್ಯಯನ ಮಾಡಿದ್ದೇನೆ. ಅದರ ತತ್ವಗಳ ಬಗ್ಗೆ ಚಿಂತನೆ ನಡೆಸಿದ್ದೇನೆ. ಅದರಲ್ಲಿ ಎಲ್ಲಿಯೂ ಪರಧರ್ಮೀಯರ ಹಿಂಸೆ, ದೇಗುಲ ಧ್ವಂಸದ ಬಗ್ಗೆ ಉಪದೇಶವಿಲ್ಲ. ಎಲ್ಲರೂ ಪ್ರೀತಿ, ಶಾಂತಿ ಮತ್ತು ಸೌಹಾರ್ದದಿಂದ ಬಾಳಬೇಕು’ ಎಂದರು.

ಗಾಂಧಿ ಭೇಟಿ ಪರಿಣಾಮ; ನಿಜಾಮ ವಿಷಾದ
ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡುವ ಮಹಾತ್ಮ ಗಾಂಧೀಜಿ ಅವರು ದೊಡ್ಡಪ್ಪ ಅಪ್ಪ ಅವರೊಂದಿಗೆ ಸಂವಾದ ನಡೆಸುತ್ತಾರೆ. ದೇಗುಲಗಳ ಮೇಲೆ ನಡೆದ ದಾಳಿಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ದೊಡ್ಡಪ್ಪ ಅಪ್ಪ
ದೊಡ್ಡಪ್ಪ ಅಪ್ಪ

ಇದನ್ನು ಅರಿತ ನಿಜಾಮ ದೊರೆ, ‘ನನ್ನ ಸಂಸ್ಥಾನ ಮತ್ತು ಪೊಲೀಸರ ಸಮ್ಮುಖದಲ್ಲಿ ದಾಳಿ ನಡೆದಿದ್ದು ದುರದೃಷ್ಟಕರ’ ಎಂದು ಪತ್ರ ಬರೆಯುತ್ತಾರೆ. ನಷ್ಟದ ಪರಿಹಾರವನ್ನು ಕೊಡುವುದಾಗಿ ಹೇಳುತ್ತಾರೆ.

ಇದನ್ನು ವಿನಯದಿಂದಲೇ ನಿರಾಕರಿಸುವ ದೊಡ್ಡಪ್ಪ ಅಪ್ಪ, ‘ಮುಂದೆ ಇಂತಹ ಘಟನೆ ನಡೆಯದಿರಲಿ’ ಎನ್ನುತ್ತಾರೆ.

ನಿಜಾಮರಿಂದ ಅನುದಾನ
‘ದೊಡ್ಡಪ್ಪ ಅಪ್ಪ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. 1934ರಲ್ಲೇ ಶಾಲೆ ತೆರೆದ ಅಪ್ಪ ಅವರ ವಿರುದ್ಧ ಕೆಲವರು ನಿಜಾಮನಿಗೆ ದೂರು ನೀಡಿದ್ದರು. ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ನಿಜಾಮ ಅಲ್ಲಿಗೆ ದೂತನೊಬ್ಬನನ್ನು ಕಳಿಸಿದ್ದರು. ಶಿಕ್ಷಣದ ಬಗ್ಗೆ ವರದಿ ಒಪ್ಪಿಸಿದಾಗ, ನಿಜಾಮರು ₹ 40 ಅನುದಾನ ನೀಡಿದ್ದರು’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.

ಆಧಾರ: ನಿಜಾಮ ವಿಜಯ ಪತ್ರಿಕೆ ಮತ್ತು ಶರಣಬಸವೇಶ್ವರ ದೇವಸ್ಥಾನ ಟ್ರಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT