ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಡಿಬಿ: ತನಿಖಾ ತಂಡದಿಂದ ಅನುದಾನ ಬಳಕೆ ಪರಿಶೀಲನೆ

ಕೆಕೆಆರ್‌ಡಿಬಿ ಅನುದಾನ ದುರ್ಬಳಕೆ ಆರೋಪದ ಪ್ರಕರಣ
Published 12 ಜೂನ್ 2023, 17:49 IST
Last Updated 12 ಜೂನ್ 2023, 17:49 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅನುದಾನ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಬೆಂಗಳೂರಿನಿಂದ ಬಂದಿರುವ ಯೋಜನಾ ಇಲಾಖೆಯ ಎಡಿಬಿ ವಿಭಾಗದ ನಿರ್ದೇಶಕ ಡಿ.ಚಂದ್ರಶೇಖರಯ್ಯ ನೇತೃತ್ವದ ತಂಡ ಸೋಮವಾರ ಇಲ್ಲಿನ ಕೆಕೆಆರ್‌ಡಿಬಿ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು.

ಯೋಜನಾ ಇಲಾಖೆಯ ಉಪನಿರ್ದೇಶಕಿ ಶಿವರೂಪಾ, ಸಹಾಯಕ ನಿರ್ದೇಶಕ ಗಿರೀಶ, ಸೆಕ್ಷನ್‌ ಅಧಿಕಾರಿ ದಿಲೀಪ್‌ ಹಾಗೂ ಡಾಟಾ ಆಪರೇಟರ್‌ (ಡಿಒ) ವರಲಕ್ಷ್ಮಿ ತಂಡದಲ್ಲಿದ್ದಾರೆ. ಈ ತಂಡ ಗುರುವಾರದವರೆಗೆ ಮಂಡಳಿ ಮತ್ತು ಸಂಘದ ದಾಖಲೆಗಳ ಪರಿಶೀಲನೆ ನಡೆಸಲಿದೆ. ಜೊತೆಗೆ ಮಂಡಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕಾಮಗಾರಿ ಅಥವಾ ಯೋಜನೆ ಅನುಷ್ಠಾನಗೊಳಿಸಿದ ಸ್ಥಳಕ್ಕೂ ಭೇಟಿ ನೀಡಿ ತನಿಖೆ ನಡೆಸಲಿದೆ. ಹಸು, ಯಂತ್ರೋಪಕರಣ ಸೇರಿದಂತೆ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದೆಯೇ ಇಲ್ಲವೇ ಎಂಬುದನ್ನೂ ಪರಿಶೀಲಿಸಲಿದೆ.

‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಚೇರಿಗೆ ಭೇಟಿ ನೀಡಿ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ. ದಾಖಲೆಯ ನಕಲು ಪ್ರತಿಗಳನ್ನು ನೀಡಲು ಸೂಚಿಸಲಾಗಿದೆ. ಅವರು ಕೊಡುವ ಮಾಹಿತಿಯ ಆಧಾರದಲ್ಲಿಲ ತನಿಖೆ ನಡೆಸಲಾಗುವುದು. ಅಲ್ಲದೇ, ಯೋಜನೆ ಅನುಷ್ಠಾನಗೊಳಿಸಿದ ಸ್ಥಳಕ್ಕೂ ಭೇಟಿ ನೀಡಲಾಗುವುದು’ ಎಂದು ಡಿ.ಚಂದ್ರಶೇಖರಯ್ಯ ಮಾಹಿತಿ ನೀಡಿದರು.

‘ಕೆಕೆಆರ್‌ಡಿಬಿ ಅನುದಾನ ಬಳಕೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಗುರುವಾರದ ನಂತರವೂ ತನಿಖೆ ಮುಂದುವರಿಸಲಾಗುವುದು. ವರದಿ ಸಿದ್ಧಪಡಿಸಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಸಲ್ಲಿಸಲಾಗುವುದು. ಅವರು ವರದಿ ಪರಾಮರ್ಶಿಸಿ ಇಲಾಖೆಯ ಸಚಿವರು ಮತ್ತು ಮುಖ್ಯಮಂತ್ರಿಗೆ ಸಲ್ಲಿಸಲಿದ್ದಾರೆ’ ಎಂದರು.

ಕೆಕೆಆರ್‌ಡಿಬಿ ಮತ್ತು ಕಲ್ಯಾಣ ಕರ್ನಾಟಕ ಸಂಘದ ಅನುದಾನ ಬಳಕೆ ಬಗ್ಗೆ ಪರಿಶೀಲಿಸಲು ಯೋಜನಾ ಇಲಾಖೆಯ ಎಡಿಬಿ ವಿಭಾಗದ ನಿರ್ದೇಶಕ ಡಿ.ಚಂದ್ರಶೇಖರಯ್ಯ ನೇತೃತ್ವದ ತಂಡ ಕಲಬುರಗಿಯ ಕೆಕೆಆರ್‌ಡಿಬಿ ಕಚೇರಿಗೆ ಸೋಮವಾರ ಭೇಟಿ ನೀಡಿತು  – ಪ್ರಜಾವಾಣಿ ಚಿತ್ರ
ಕೆಕೆಆರ್‌ಡಿಬಿ ಮತ್ತು ಕಲ್ಯಾಣ ಕರ್ನಾಟಕ ಸಂಘದ ಅನುದಾನ ಬಳಕೆ ಬಗ್ಗೆ ಪರಿಶೀಲಿಸಲು ಯೋಜನಾ ಇಲಾಖೆಯ ಎಡಿಬಿ ವಿಭಾಗದ ನಿರ್ದೇಶಕ ಡಿ.ಚಂದ್ರಶೇಖರಯ್ಯ ನೇತೃತ್ವದ ತಂಡ ಕಲಬುರಗಿಯ ಕೆಕೆಆರ್‌ಡಿಬಿ ಕಚೇರಿಗೆ ಸೋಮವಾರ ಭೇಟಿ ನೀಡಿತು  – ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT