ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ರಾಹುಲ್ ಬಂದರೂ ಮೋದಿ ಸರಿಗಟ್ಟಲಾಗದು: ಜಗದೀಶ ಶೆಟ್ಟರ್

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಸತ್ಕಾರಕ್ಕಾಗಿ ಜನಸೇವಕ ಸಮಾವೇಶ
Last Updated 12 ಜನವರಿ 2021, 3:22 IST
ಅಕ್ಷರ ಗಾತ್ರ

ಕಲಬುರ್ಗಿ: ‘ಒಬ್ಬರಲ್ಲ, 20 ರಾಹುಲ್‌ ಗಾಂಧಿಗಳು ಬಂದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರಿಗಟ್ಟಲಾಗದು. ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ, ಜನರ ಬಗ್ಗೆ ಕನಿಷ್ಠ ಅನುಕಂಪವೂ ಇಲ್ಲದ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ಕನಸಿನ ಮಾತು’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

ಇಲ್ಲಿನ ಎನ್‌.ವಿ. ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನಸೇವಕ ಸಮಾವೇಶದಲ್ಲಿ, ನೂತನವಾಗಿ ಆಯ್ಕೆಯಾದ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ರೈತರು ಬೀದಿಯಲ್ಲಿದ್ದರೆ ಅವರೊಂದಿಗೆ ಇರುವುದು ಬಿಟ್ಟು ರಾಹುಲ್ ಗಾಂಧಿ ಇಟಲಿಗೆ ಪಲಾಯನ ಮಾಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರ ಆಂತರಿಕ ಕಚ್ಚಾಟ ಮಿತಿ ಮೀರಿದೆ. ಅವರಲ್ಲಿ ಕಾರ್ಯಕರ್ತರೇ ಇಲ್ಲ. ಎಲ್ಲರೂ ನಾಯಕರು. ಕಾಂಗ್ರೆಸ್‌ ಕಾರ್ಯಕ್ರಮ ಆಯೋಜಿಸಿದರೆ ವೇದಿಕೆಯ ಕೆಳಗೆ ಯಾರೂ ಇರುವುದಿಲ್ಲ. ಎಲ್ಲರೂ ವೇದಿಕೆ ಹತ್ತುವವರೇ ಇದ್ದಾರೆ’ ಎಂದು ಅವರು ಹೇಳಿದರು.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿ ವಿರೋಧ ಮಾಡುತ್ತಿದೆ. ಎಪಿಎಂಸಿಗಳ ಬದಲು ಹೊರಗಡೆ ಉತ್ತಮ ಬೆಲೆ ಸಿಕ್ಕರೆ ಅವರ ಕೃಷಿ ಉತ್ಪನ್ನಗಳನ್ನು ರೈತರು ಮಾರುವುದು ತಪ್ಪೇ’ ಎಂದು ಪ್ರಶ್ನಿಸಿದರು.

‘ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದ 25 ಸಂಸದರು ಬಿಜೆಪಿಯವರೇ ಇದ್ದಾರೆ. ಜನರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಮುಂದಿನ 15–20 ವರ್ಷಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿರುವ ಪಂಚಾಯಿತಿಗಳ ಸಂಖ್ಯೆ ಹೆಚ್ಚಲಿದೆ’ ಎಂದು ಆಶಿಸಿದರು.

ಬೀದರ್ ಸಂಸದ ಭಗವಂತ ಖೂಬಾ, ‘ಗ್ರಾಮ ಪಂಚಾಯಿತಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ₹ 70 ಲಕ್ಷದಿಂದ ₹ 1 ಕೋಟಿ ಅನುದಾನ ಹರಿದು ಬರುತ್ತದೆ. 15ನೇ ಹಣಕಾಸು ಯೋಜನೆಯಲ್ಲಿಯೂ ಅನುದಾನ ದೊರೆಯುತ್ತದೆ. ಅಲ್ಲದೇ, ಹಲವಾರು ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳಿವೆ. ಇವುಗಳನ್ನು ನಿಮ್ಮನ್ನು ಗೆಲ್ಲಿಸಿದ ಜನರ ಅನುಕೂಲಕ್ಕಾಗಿ ಬಳಸಿಕೊಳ್ಳಬೇಕು’ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಚುನಾವಣೆಗೂ ಮುನ್ನ ಗ್ರಾಮ ಸ್ವರಾಜ್ಯ ಅಭಿಯಾನ ಮಾಡಿದ್ದೆವು. ಇದೀಗ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದು, ಅವರಿಗೆ ಪಕ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಜನಸೇವಕ ಸಮಾವೇಶ ಆಯೋಜಿಸಲಾಗಿದೆ’ ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಡಾ. ಸಂದೀಪಕುಮಾರ್ ಕೆ.ಸಿ. ಮಾತನಾಡಿದರು.

ಶಾಸಕರಾದ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ವೇದಿಕೆಯಲ್ಲಿದ್ದರು.

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ತೆಲ್ಕೂರ
‘ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಮುಖ್ಯಮಂತ್ರಿಗಳು ಕರೆ ಮಾಡಿ ಆಹ್ವಾನ ನೀಡುವ ವಿಶ್ವಾಸವಿದೆ’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಭರವಸೆ ವ್ಯಕ್ತಪಡಿಸಿದರು.

ಜನಸೇವಕ ಸಮಾವೇಶ ಆರಂಭವಾಗುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕಿದೆ. ಹಾಗಾಗಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಸಿಗದಿದ್ದರೆ ಎಲ್ಲ ಶಾಸಕರ ನಿಯೋಗ ತೆರಳಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT