ಕಲಬುರಗಿ: ಇಂದಿನಿಂದ ಆರಂಭವಾಗಲಿರುವ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 18ನೇ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಮಲಾಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನಾಧ್ಯಕ್ಷ ಸುಭಾಶ್ಚಂದ್ರ ಕಶೆಟ್ಟಿ ಅವರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಕಲಬುರಗಿ-ಬೀದರ್ ಮಧ್ಯದ ಹೆದ್ದಾರಿಯಗುಂಟ ಬಂದ ಮೆರವಣಿಗೆಯ ಕಮಲಾಪುರದ ಓಕಳಿ ಗ್ರಾಮದ ರಸ್ತೆಯಲ್ಲಿರುವ ಆಕೃತಿ ಬಿರಾದಾರ ಸಮ್ಮೇಳನ ಸಭಾಂಗಣಕ್ಕೆ ಬಂದು ತಲುಪಿತು.
ಅಲಂಕೃತ ಬಿಂದಿಗೆಗಳನ್ನು ಹೊತ್ತ ಬಂಜಾರ ಮಹಿಳೆಯರು ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪುರವಂತರ ಕುಣಿತ, ಡೊಳ್ಳು, ಕಂಜರ್ ಬಾರಿಸುವ ಮೂಲಕ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.
ಬೊಂಬೆ ಕುಣಿತ, ಸ್ಕೌಟ್ಸ್ ಅಂಡ್ ಗೈಡ್ಸ್ ನ ವಿದ್ಯಾರ್ಥಿಗಳು ಶಿಸ್ತಿನಿಂದ ಭಾಗವಹಿಸಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗೌರವ ಕಾರ್ಯದರ್ಶಿಗಳಾದ ಯಶವಂತರಾಯ ಅಷ್ಠಗಿ, ಶಿವರಾಜ ಅಂಡಗಿ ಹಾಗೂ ಕಸಾಪ ಮಹಿಳಾ ಸದಸ್ಯರೂ ಮೆರವಣಿಗೆಯಲ್ಲಿ ನೃತ್ಯ ಮಾಡಿ ಗಮನ ಸೆಳೆದರು.
ಎರಡು ದಿನಗಳ ಜಿಲ್ಲಾ ಸಮ್ಮೇಳನದಲ್ಲಿ ಕನ್ನಡ ಕಾವ್ಯಗಳಲ್ಲಿ ಬದುಕಿನ ಮೌಲ್ಯಗಳು, ಜಿಲ್ಲೆಯ ಸಮಸ್ಯೆಗಳು ಹಾಗೂ ಅಭಿವೃದ್ಧಿ, ಮಹಿಳಾ ಕವಿಗೋಷ್ಠಿ, ಕೌಟುಂಬಿಕ ವ್ಯವಸ್ಥೆ: ಬದಲಾವಣೆಯ ಸವಾಲುಗಳು, ಮಾಧ್ಯಮ: ಸಾಮಾಜಿಕ ಪ್ರಜ್ಞೆ-ಕಾಳಜಿ ಹಾಗೂ ಕವಿಗೋಷ್ಠಿಗಳನ್ನು ಆಯೋಜಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.