ಮಂಗಳವಾರ, ಮೇ 18, 2021
22 °C
ಗುಲಬರ್ಗಾ ವಿಶ್ವವಿದ್ಯಾಲಯ ಆಯ್ಕೆ ಮಾಡಿಕೊಂಡ 10,753 ಅಭ್ಯರ್ಥಿಗಳು

15 ಕೇಂದ್ರಗಳಲ್ಲಿ ನಾಳೆ ಕೆ–ಸೆಟ್‌ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಏಪ್ರಿಲ್ 11ರಂದು ನಡೆಯಲಿದ್ದು, ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಒಟ್ಟು 10,753 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಈ ಬಾರಿಯ ಪರೀಕ್ಷೆಯು ಒಟ್ಟು 41 ವಿಷಯಗಳಿಗಾಗಿ ನಡೆಯಲಿದೆ. ಪ್ರಥಮ ಮತ್ತು ದ್ವಿತೀಯ ಪತ್ರಿಕೆಯು ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಬಹು ಆಯ್ಕೆಯಿಂದ ಕೂಡಿರುತ್ತದೆ. ತಮ್ಮ ಪರೀಕ್ಷಾ ಕೇಂದ್ರ ಹಾಗೂ ಕೊಠಡಿಗಳ ನಿಖರ ಮಾಹಿತಿಗಾಗಿ ವೆಬ್‌ಸೈಟ್‌ ವಿಳಾಸ https://gug.ac.in ಅಥವಾ http//kset.uni_mysore.ac.in ಇದರಲ್ಲಿ ಸಂರ್ಪಕಿಸಬಹುದು.

ಅಲ್ಲದೇ ವಿಶೇಷವಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಅಭ್ಯರ್ಥಿಗಳಿಗಾಗಿ ವಿಶೇಷ ಲಿಂಕ್‌ ಸಿದ್ಧಪಡಿಸಿದ್ದು https://kset.gukonline.in ಇದರಲ್ಲಿ ಕೂಡ ಉಪಕೇಂದ್ರ ಹಾಗೂ ಬ್ಲಾಕ್ ನಂಬರ್‌ ಮಾಹಿತಿ ಪಡೆಯಬಹುದು. ಜತೆಗೆ, ಮೈಸೂರು ವಿಶ್ವವಿದ್ಯಾಲಯ ಕೆ-ಸೆಟ್ ವೆಬ್‍ಸೈಟ್‌ನಿಂದಲೂ ಮಾಹಿತಿ ಪಡೆಯಬಹುದು.

10,753 ಅಭ್ಯರ್ಥಿಗಳ ಪೈಕಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂದರೆ; 1305 ಪರೀಕ್ಷಾರ್ಥಿಗಳು ಇದ್ದು, ಜನಪದ ಸಾಹಿತ್ಯದಲ್ಲಿ ಅತಿ ಕಡಿಮೆ ಅಂದರೆ; ಕೇವಲ ಒಬ್ಬರು ಮಾತ್ರ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಎಲ್ಲ ಅಭ್ಯರ್ಥಿಗಳು ಪರೀಕ್ಷೆಗೆ ಸರಿಯಾಗಿ ಬೆಳಿಗ್ಗೆ 8 ಗಂಟೆಗೆ ಪರೀಕ್ಷೆ ಕೇಂದ್ರದಲ್ಲಿ ಹಾಜರಾಗಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಪರೀಕ್ಷೆಯ ಪ್ರವೇಶ ಪತ್ರ ತರಬೇಕು. ಅಗತ್ಯವಿದ್ದವರು ಪಾರದರ್ಶಕ ಬಾಟಲಿಗಳಲ್ಲಿ ಕುಡಿಯುವ ನೀರನ್ನು ತಾವೇ ತರಬಹುದು.

ಪರೀಕ್ಷಾ ಪ್ರವೇಶ ಪತ್ರ ಇರದಿದ್ದರೆ ತಾವು ಅರ್ಜಿ ಶುಲ್ಕ ಸಂದಾಯ ಮಾಡಿದ ರಸೀದಿ ವಿಳಾಸದ ದೃಢೀಕರಣ ಹಾಗೂ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ ಲಗತ್ತಿಸಿದ ಗುರುತಿನ ಚೀಟಿ ಹಾಗೂ ಸೂಕ್ತ ಕಾರಣಗಳೊಂದಿಗೆ ನೋಡಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕು. ದಾಖಲಾತಿಗಳು ಮನದಟ್ಟಾದ ನಂತರ ಪರೀಕ್ಷೆ ಪ್ರವೇಶ ಪತ್ರ ವಿತರಿಸಲಾಗುವುದು.

ವಿಶೇಷವಾಗಿ, ಎಲ್ಲಾ ಪರೀಕ್ಷಾರ್ಥಿಗಳು ತಮ್ಮ ವಿಷಯ ಹಾಗೂ ನೋಂದಣಿ ಸಂಖ್ಯೆಯ ಯಾವ ಪರೀಕ್ಷಾ ಉಪ ಕೇಂದ್ರದಲ್ಲಿ ಇದೆ ಎನ್ನುವುದನ್ನು ನಿಖರವಾಗಿ ಖಚಿತ ಪಡಿಸಿಕೊಂಡೇ ಕೇಂದ್ರಗಳಿಗೆ ಹಾಜರಾಗಬೇಕು ಎಂದು ಪರೀಕ್ಷೆಯ ನೋಡಲ್‌ ಅಧಿಕಾರಿಯೂ ಆದ ಪ್ರೊ.ಚಂದ್ರಕಾಂತ ಕೆಳಮನಿ ತಿಳಿಸಿದ್ದಾರೆ.‌‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.