ಸೇಡಂ: ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕಾಗಿಣಾ ನದಿ ನೀರಿನ ಮಟ್ಟ ಹೆಚ್ಚಿದ್ದು, ಮಳಖೇಡ ಸೇತುವೆಗೆ ತಾಕಿ ನದಿ ನೀರು ಹರಿಯುತ್ತಿದೆ. ನದಿ ತೀರದ ಗ್ರಾಮಗಳ ಜನರಲ್ಲಿ ಪ್ರವಾಹ ಭೀತಿ ಆವರಿಸಿದೆ.
ನಾಗರಾಳ ಜಲಾಶಯ, ಮುಲ್ಲಾಮಾರಿ ನೀರು ಮತ್ತು ಬೆಣ್ಣೆತೊರಾ ನೀರು ಕಾಗಿಣಾ ನದಿಗೆ ಸೇರುತ್ತಿರುವುದರಿಂದ ನದಿ ನೀರಿನ ಪ್ರವಾಹ ಉಕ್ಕೇರುತ್ತಿದೆ. ನದಿ ದಂಡೆಯ ಹೊಲಗಳಲ್ಲಿ ನೀರು ನುಗ್ಗುತ್ತಿದೆ.
ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ನಾಲಾಗಳು ತುಂಬಿ ಹರಿದು ಕಾಗಿಣಾ ನದಿಗೆ ಸೇರುತ್ತಿದೆ. ಇದರಿಂದ ನದಿ ಪಾತ್ರದ ಜನರು ಆತಂಕಗೊಂಡಿದ್ದಾರೆ. ನದಿ ನೀರಿನ ಮಟ್ಟ ಗಂಟೆ ಗಂಟೆಗೂ ಹೆಚ್ಚುತ್ತಿದ್ದು ಸಂಜೆ ವೇಳೆಗೆ ಕಾಗಿಣಾ ಸೇತುವೆ ಮುಳುಗುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.