ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಜಿಲ್ಲಾಧಿಕಾರಿಗೆ ಸ್ವಜಾತಿ ಪ್ರೇಮ: ಆರೋಪ

Published 18 ಜೂನ್ 2024, 16:25 IST
Last Updated 18 ಜೂನ್ 2024, 16:25 IST
ಅಕ್ಷರ ಗಾತ್ರ

ಕಲಬುರಗಿ: ‘ಮುಸ್ಲಿಂ ಸಮಾಜದ ಅಧಿಕಾರಿಗಳು ತಪ್ಪುಗಳು ಮಾಡಿದ್ದರೂ ಅವರ ರಕ್ಷಣೆಗೆ ನಿಂತು ಜಿಲ್ಲಾಧಿಕಾರಿ ಅವರು ಸ್ವಜಾತಿ ಪ್ರೇಮ ಮೆರೆಯುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು’ ಎಂದು ಬಿಜೆಪಿ ಯುವ ಮುಖಂಡ ಶಿವಲಿಂಗ ಹಳಿಮನಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಬಡೇಪುರ ಗ್ರಾಮದ ಲೆಕ್ಕಾಧಿಕಾರಿಯಾಗಿದ್ದ ನಿಸಾರ್‌ ಅಹ್ಮದ್‌ ವಜೀರ್‌ ಅವರು ಅಕ್ರಮವಾಗಿ ವಕ್ಫ್‌ಬೋರ್ಡ್‌ನ 8.34 ಎಕರೆ ಜಮೀನು ಸಿಟಿಎಸ್‌ ಆಧಾರದ ಮೇಲೆ ನಿವೇಶನ ಹಾಕಿ ಮಾರಾಟ ಮಾಡಿದ್ದಾರೆ. ಅದಕ್ಕೆ ಅವಕಾಶವಿಲ್ಲದಿದ್ದರೂ ಎಲ್ಲ ನಿವೇಶನಗಳನ್ನು ಗುಂಟೆ ಲೆಕ್ಕದಲ್ಲಿ ಪರಿವರ್ತಿಸಿ ಉಪನೋಂದಣಿ ಕಚೇರಿಯ ಜಿ ಫಾರ್ಮ್‌ ಬರದಿದ್ದರೂ ಮುಟೇಶನ್‌ ಮಾಡಿಕೊಟ್ಟಿದ್ದಾರೆ’ ಎಂದು ದೂರಿದರು.

‘ಅಧಿಕಾರಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಆದೇಶವಿದ್ದರೂ ಜಿಲ್ಲಾಧಿಕಾರಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ, ಜಿಲ್ಲಾ ವಕ್ಫ್‌ಬೋರ್ಡ್‌ ಅಧಿಕಾರಿಗಳು ಕಡತ ಮುಚ್ಚಿಟ್ಟು ನಿಸಾರ್‌ ಅಹ್ಮದ್‌ ವಜೀರ್‌ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ತಹಶೀಲ್ದಾರ್‌ ಗ್ರೇಡ್‌–2 ಆಗಿದ್ದ ಅವಧಿಯಲ್ಲಿ ಮುಸ್ಲಿಂ ಸಮುದಾಯದ ಸುಮಾರು ಒಂದು ಸಾವಿರ ಜನರಿಗೆ ಕೆಟಗರಿ–1 ಪ್ರಮಾಣ ಪತ್ರ ನೀಡಿದ್ದಾರೆ. ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹುಸೇನ್ ಪಾಶಾ ಎಂಬುವವರು ಕಚೇರಿಯಲ್ಲಿರುವ ಸುಮಾರು 15 ಗಿಡಗಳನ್ನು ಕಡಿದು ಮಾರಾಟ ಮಾಡಿ ₹ 1 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಎಪಿಎಲ್‌ ಅರ್ಹತೆ ಇದ್ದರೂ ಬಿಪಿಎಲ್‌ ಕಾರ್ಡ್‌ ವಿತರಣೆ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ತಹಶೀಲ್ದಾರ್ ವರದಿ ಮಾಡಿದ್ದರೂ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಆಪಾದಿಸಿದರು.

‘ಜಿಲ್ಲೆಯ ಎಲ್ಲ ವಕ್ಫ್‌ಬೋರ್ಡ್‌ ಜಮೀನುಗಳ ಪಹಣಿ ಪತ್ರಿಕೆ ಕಾಲಂ ನಂಬರ್‌ 11ರಲ್ಲಿ ಸದರಿ ಜಮೀನು ವಕ್ಫ್‌ಬೋರ್ಡ್‌ಗೆ ಸೇರಿದ್ದು ಎಂದು ನಮೂದಿಸಲು ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಅವರು ಸ್ವಜಾತಿ ಪ್ರೇಮದಿಂದ ಆ ಷರಾವನ್ನು ತೆಗೆದುಹಾಕಿದ್ದಾರೆ’ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂದೀಪ ಭರಣಿ, ಗಂಗಾಧರ ಪಾಟೀಲ, ದಯಾನಂದ ಪಾಟೀಲ ಹಾಜರಿದ್ದರು.

ಫೌಜಿಯಾ ತರನ್ನುಮ್
ಫೌಜಿಯಾ ತರನ್ನುಮ್

‘ಜಾತಿ ನೋಡದೇ ಕೆಲಸ ಮಾಡುತ್ತಿದ್ದೇನೆ’

‘ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಇದೀಗ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಜನರು ಯಾವ ಜಾತಿಯವರು ಎಂಬುದನ್ನು ನೋಡದೇ ಕೆಲಸ ಮಾಡುತ್ತಿದ್ದೇನೆ. ರಾತ್ರಿ 9 ಗಂಟೆಯವರೆಗೂ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ. ಒಂದು ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ನನ್ನ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು. ‌‘ಸ್ವಜನ ಪಕ್ಷಪಾತದ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಜನರೇ ನನ್ನ ಕಾರ್ಯವೈಖರಿ ನೋಡುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT