ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ದಿನ ಮೂರು ವಾರ್ಡ್‌ಗಳಿಗೆ ಭೇಟಿ: ನೂತನ ಮೇಯರ್ ವಿಶಾಲ ದರ್ಗಿ

ಅಧಿಕಾರ ಸ್ವೀಕರಿಸಿದ ನೂತನ ಮೇಯರ್ ವಿಶಾಲ ದರ್ಗಿ; ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ
Last Updated 24 ಮಾರ್ಚ್ 2023, 13:20 IST
ಅಕ್ಷರ ಗಾತ್ರ

ಕಲಬುರಗಿ: ‍‘ಪ್ರತಿ ದಿನ ಬೆಳಿಗ್ಗೆ 8ರಿಂದ ಮೂರು ವಾರ್ಡ್‌ಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವೆ. ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯತ್ನಿಸುವೆ. ಯಾರು ಬೇಕಾದರೂ ನನ್ನ ಕಚೇರಿಗೆ ಬಂದು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು’.

–ಇದು ನೂತನ ಮೇಯರ್ ಆಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ವಿಶಾಲ ದರ್ಗಿ ಅವರ ಪ್ರಮುಖ ಘೋಷಣೆಗಳು.

ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾನಗರ ಪಾಲಿಕೆ ಸದಸ್ಯನಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ಕಾರಣ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಪ್ರತಿ ದಿನ ಮೂರು ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಚರ್ಚಿಸುವೆ. ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವೆ. ಅಧಿಕಾರಿಗಳಿಗೆ ಸೂಚಿಸುವೆ’ ಎಂದರು.

‘ಜನರ ಸೇವೆ ಮಾಡಲು ಮೇಯರ್ ಹುದ್ದೆ ಒಲಿದು ಬಂದಿದೆ. ಕುಡಿಯುವ ನೀರು, ರಸ್ತೆ, ಉದ್ಯಾನಗಳ ನಿರ್ವಹಣೆ, ಕಸ ವಿಲೇವಾರಿ ಮತ್ತಿತರ ವಿಚಾರಗಳ ಬಗ್ಗೆ ಶೀಘ್ರವೇ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುವೆ’ ಎಂದರು.

ಸ್ಮಾರ್ಟ್ ಸಿಟಿಗೆ ಪ್ರಯತ್ನ: ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಪಕ್ಷದ ಸಂಸದರು, ಶಾಸಕರ ನೆರವನ್ನು ಪಡೆದುಕೊಳ್ಳಲಾಗುವುದು ಎಂದರು.

‘ಮಹಾನಗರ ಪಾಲಿಕೆಗೆ ಸರ್ಕಾರದಿಂದ ಆರ್ಥಿಕ ನೆರವನ್ನು ಹೆಚ್ಚಿನ ಪ್ರಮಾಣದಲ್ಲಿ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕಿದೆ. ನಗರದಲ್ಲಿರುವ ಉದ್ಯಾನಗಳು ಹದಗೆಟ್ಟಿರುವ ಬಗ್ಗೆ ನನ್ನ ಗಮನದಲ್ಲಿದ್ದು, ಪ್ರಮುಖ ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕೆಲವೇ ದಿನಗಳಲ್ಲಿ ಸ್ಥಾಯಿ ಸಮಿತಿಯನ್ನು ರಚಿಸಲಾಗುವುದು. ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಸದ್ಯದಲ್ಲಿಯೇ ಘೋಷಣೆಯಾಗಲಿರುವ ಸಾಧ್ಯತೆ ಇರುವುದರಂದ ತರಾತುರಿಯಲ್ಲಿ ಬಜೆಟ್ ಮಂಡಿಸುವುದಿಲ್ಲ. ಚುನಾವಣೆ ಮುಗಿದ ಬಳಿಕವಷ್ಟೇ ಸಾಮಾನ್ಯ ಸಭೆ ಕರೆದು ಬಜೆಟ್ ಮಂಡಿಸಲಾಗುವುದು ಎಂದು ವಿಶಾಲ ದರ್ಗಿ ಮಾಹಿತಿ ನೀಡಿದರು.

ಜನಸಂಪರ್ಕ ಸಭೆ: ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಖುದ್ದಾಗಿ ತಿಳಿದುಕೊಳ್ಳಲು ಆಗಿಂದಾಗ್ಗೆ ಜನಸಂಪರ್ಕ ಸಭೆಗಳನ್ನು ನಡೆಸಲಾಗುವುದು. ಈ ಸಂದರ್ಭದಲ್ಲಿ ಆಯಾ ವಲಯದ ವ್ಯಾಪ್ತಿಯ ಅಧಿಕಾರಿಗಳೂ ಇರುವಂತೆ ಸೂಚನೆ ನೀಡುತ್ತೇನೆ. ಪ್ರಮುಖವಾಗಿ ಕುಡಿಯುವ ನೀರಿನ ಪೂರೈಕೆ ಮೊದಲ ಆದ್ಯತೆಯಾಗಿದೆ. ಆ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆಯುತ್ತೇನೆ ಎಂದರು.

ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸುಲಫಲ–ಶ್ರೀಶೈಲಂ ಪೀಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ, ಮಾಜಿ ಅಧ್ಯಕ್ಷ ದಯಾಘನ್ ಧಾರವಾಡಕರ, ಮಹಾನಗರ ಪಾಲಿಕೆ ಸದಸ್ಯರು ಇದ್ದರು.

ಉಪಮೇಯರ್ ಶಿವಾನಂದ ಪಿಸ್ತಿ ಅವರು ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮದ (ಕ್ರೆಡೆಲ್) ಅಧ್ಯಕ್ಷ ಚಂದು ಪಾಟೀಲ ಇದ್ದರು.

ಮೇಯರ್ ಹುದ್ದೆ ಸ್ವೀಕರಿಸಲು ಪಾಲಿಕೆ ಕಚೇರಿಗೆ ಬಂದ ವಿಶಾಲ ದರ್ಗಿ ಅವರನ್ನು ಹಲಗೆ ವಾದನದ ಮೂಲಕ ಬರಮಾಡಿಕೊಳ್ಳಲಾಯಿತು.

‌‘ಸಮಸ್ಯೆ ಇದ್ದರೆ ನೇರವಾಗಿ ಕರೆ ಮಾಡಿ’

ಕಲಬುರಗಿ ಮಹಾನಗರದ ಜನರಿಗೆ ಪಾಲಿಕೆಯಿಂದ ಆಗಬೇಕಾದ ಕೆಲಸಗಳಲ್ಲಿ ವ್ಯತ್ಯಯವಾದಲ್ಲಿ ತಮಗೆ ನೇರವಾಗಿ ಕರೆ ಮಾಡಬಹುದು. ತಮ್ಮ ಕಚೇರಿಗೂ ಬಂದು ಭೇಟಿ ಮಾಡಬಹುದು ಎಂದು ಮೇಯರ್ ವಿಶಾಲ ದರ್ಗಿ ತಿಳಿಸಿದರು.

ತಮ್ಮ ಮೊಬೈಲ್ ಸಂಖ್ಯೆ 98455 76619ಗೆ ಕರೆ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT