ಸೋಮವಾರ, ಆಗಸ್ಟ್ 8, 2022
22 °C

ಕಲಬುರಗಿ: ಕತ್ತು ಹಿಸುಕಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ತಂದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಪತ್ನಿ ಬಿಟ್ಟು ಹೋದ ಕಾರಣ ಮನನೊಂದ ಆಟೊ ಚಾಲಕನೊಬ್ಬ ತನ್ನ ಇಬ್ಬರು ಪುತ್ರಿಯರನ್ನು ಆಟವಾಡಿಸಲು ಉದ್ಯಾನಕ್ಕೆ ಕರೆದೊಯ್ದು ವಾಪಸ್ ಕರೆತರುವಾಗ ಅವರ ಕತ್ತು ಹಿಸುಕಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಇಲ್ಲಿನ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ನಡೆದಿದೆ.

ಬಂಬೂ ಬಜಾರ್ ಬಳಿಯ ಭೋವಿಗಲ್ಲಿ ನಿವಾಸಿ ಲಕ್ಷ್ಮಿಕಾಂತ ಮಾರುತಿರಾವ್ (35) ತನ್ನ ಮಕ್ಕಳಾದ ಸೋನಿಯಾ (10) ಮತ್ತು ಮಯೂರಿ (8) ಎಂಬ ಮಕ್ಕಳನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಲಕ್ಷ್ಮಿಕಾಂತ ಪತ್ನಿ ಅಂಜಲಿ ತಮ್ಮ ಇನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ನಾಲ್ಕು ತಿಂಗಳ ಹಿಂದೆ ಮನೆ ಬಿಟ್ಟು ತವರುಮನೆಗೆ ಹೋಗಿದ್ದರು. ಅಂದಿನಿಂದ ಇಬ್ಬರು ಹೆಣ್ಣುಮಕ್ಕಳನ್ನು ಸಾಕುವ ಜವಾಬ್ದಾರಿ ಲಕ್ಷ್ಮಿಕಾಂತ ಮೇಲೆ ಇತ್ತು. ಪತ್ನಿ ಮನೆ ಬಿಟ್ಟು ಬೇಸರದಲ್ಲೇ ಇದ್ದ ಲಕ್ಷ್ಮಿಕಾಂತ ಮಂಗಳವಾರ ಸಂಜೆ ನಗರದ ಸೇಡಂ ರಸ್ತೆಯಲ್ಲಿರುವ ವೀರೇಂದ್ರ ಪಾಟೀಲ ಬಡಾವಣೆಯ ಉದ್ಯಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ಮಕ್ಕಳನ್ನು ಆಟವಾಡಿಸಿ ಆಟೊದಲ್ಲಿ ಕರೆತಂದು ಅಲ್ಲಿಯೇ ಕತ್ತು ಹಿಸುಕಿ ಸಾಯಿಸಿದ್ದಾಗಿ ಪೊಲೀಸರು ಎದುರು ತಪ್ಪೊಪ್ಪಿಕೊಂಡಿದ್ದಾನೆ.

ಇಡೀ ರಾತ್ರಿ ಆಟೊದಲ್ಲಿ ಮಕ್ಕಳ ಮೃತ ದೇಹದೊಂದಿಗೆ ನಗರದೆಲ್ಲೆಡೆ ಸುತ್ತಾಡಿದ್ದಾನೆ. ಬುಧವಾರ ಬೆಳಿಗ್ಗೆ ಚೌಕ್ ಪೊಲೀಸ್ ಠಾಣೆಗೆ ಬಂದು ತಾನು ಮಾಡಿದ ಕೃತ್ಯವನ್ನು ತಿಳಿಸಿದ್ದಾನೆ. ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದು ವೀರೇಂದ್ರ ಪಾಟೀಲ ಬಡಾವಣೆ ವ್ಯಾಪ್ತಿಗೆ ಒಳಪಡುವ ಮಹಾತ್ಮ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು