ಚಿಂಚೋಳಿ: ವನ್ಯಜೀವಿಧಾಮದ ಹೃದಯ ಭಾಗದಲ್ಲಿನ ಶೇರಿಭಿಕನಳ್ಳಿ ತಾಂಡಾಕ್ಕೆ ಮಂಗಳವಾರ ಅಧಿಕಾರಿಗಳ ತಂಡಭೇಟಿ ನೀಡಿ, ದಾಖಲಾತಿಗಳ ಪರಿಶೀಲನೆ ನಡೆಸಿತು.
ವನ್ಯಜೀವಿ ಧಾಮದಲ್ಲಿ ಇರುವುದರಿಂದ ಕಾಡುಪ್ರಾಣಿಗಳ ಜೀವನಕ್ಕೆ ಜನರಿಂದ ತೊಂದರೆ ಆಗುತ್ತಿದೆ. ಶೇರಿಭಿಕನಳ್ಳಿಗೆ ಮೂಲಸೌಕರ್ಯ ಕಲ್ಪಿಸಲು ಕಾನೂನು ತೊಡಕಿರುವುದರಿಂದ ತಾಂಡಾ ಸ್ಥಳಾಂತರಿಸಿ ಪುನರ್ ವಸತಿ ಕಲ್ಪಿಸುವ ಯೋಜನೆಗೆ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಮಂಗಳವಾರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಭಾಗಪ್ಪಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಂಕರ ರಾಠೋಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪ್ರೇಮಿಲಾಬಾಯಿ, ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಮಠ, ಕಂದಾಯ ನಿರೀಕ್ಷಕ ರವಿ ಪಾಟೀಲ, ಗ್ರಾಮ ಆಡಳಿತಾಧಿಕಾರಿ ಶಿವಾಜಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಕೊರಡಂಪಳ್ಳಿ ಮೊದಲಾದವರು ಭೇಟಿ ನೀಡಿದ್ದಾರೆ.
ತಾಂಡಾ ಸ್ಥಳಾಂತರ ಹಿನ್ನೆಲೆಯಲ್ಲಿ ರಚಿಸಿದ ಸಮಿತಿಯ ಅಧ್ಯಕ್ಷ ವಸಂತ ಪಾಂಡು ಹಾಗೂ ರವಿ ರಾಠೋಡ, ಶ್ರೀಕಾಂತ ಚವ್ಹಾಣ್, ಮನ್ನು ಚಿನ್ನಾ ರಾಠೋಡ, ರಾಮಜಿ ರಾಠೋಡ, ಲಕ್ಷ್ಮಣ ಚವ್ಹಾಣ್ ಮೊದಲಾದವರು ಇದ್ದರು.
ಅಧಿಕಾರಿಗಳು, ತಾಂಡಾ ಜನರ ಸಂಖ್ಯೆ, 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರ ವಿವರ, ಪಡಿತರ ಚೀಟಿಗಳು, ಮನೆಗಳ ವಿವರ, ಜನಸಂಖ್ಯೆ, ಜಮೀನು ವಿವರ ಪಡೆದುಕೊಂಡು ಕೆಲವು ದಾಖಲಾತಿ ಪರಿಶೀಲನೆ ನಡೆಸಿದರು.