ಕಲಬುರಗಿ: ಜಿಲ್ಲೆಯಲ್ಲಿ ಚಿತ್ತಾಪುರ ‘ಪಥ ಸಂಚಲನ’ದ ಸದ್ದು ಮುಂದುವರಿದಿದೆ. ಪೈಪೋಟಿಗೆ ಬಿದ್ದು ನ.2ರಂದು ಅನುಮತಿ ಕೋರಿರುವ ಸಂಘಟನೆಗಳೊಂದಿಗೆ ಜಿಲ್ಲಾಡಳಿತ ಮಂಗಳವಾರ ಶಾಂತಿ ಸಭೆ ನಡೆಸಲಿದ್ದು, ಸಾರ್ವಜನಿಕರ ಚಿತ್ತ ಇದೀಗ ‘ಶಾಂತಿ ಸಭೆ’ಯತ್ತ ನೆಟ್ಟಿದೆ. ಅರ್ಜಿ ಸಲ್ಲಿಸಿರುವ ಸಂಘಟನೆಗಳು ‘ಶಾಂತಿ ಸಭೆ’ಯಲ್ಲಿ ಏನೆಲ್ಲ ವಾದ ಮಂಡಿಸಬಹುದು ಎಂಬ ಕುತೂಹಲ ಗರಿಗೆದರಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹಾಜರಾಗುವಂತೆ ಜಿಲ್ಲಾಡಳಿತ ಅ.25ರಂದು ಅನುಮತಿ ಕೋರಿದ್ದ 10 ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿತ್ತು. ‘ಪ್ರತಿ ಸಂಘಟನೆಯಿಂದ ಗರಿಷ್ಠ ಮೂವರು ಸದಸ್ಯರು ಹಾಜರಾಗಬಹುದು. ಲಿಖಿತ ಹೇಳಿಕೆ ಸಲ್ಲಿಸಲೂ ಅವಕಾಶವಿದೆ’ ಎಂದು ನೋಟಿಸ್ನಲ್ಲಿ ತಿಳಿಸಿತ್ತು.

ಚಿತ್ತಾಪುರದಲ್ಲಿ ಆರ್ಎಸ್ಎಸ್ ಅ.19ರಂದು ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಆರ್ಎಸ್ಎಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಈ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಹಾಗೂ ಅದರ ಬಗೆಗೆ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು.

ಆರ್ಎಸ್ಎಸ್ ಮಾತ್ರವಲ್ಲದೇ, ಭಾರತೀಯ ದಲಿತ ಪ್ಯಾಂಥರ್, ಭೀಮ್ ಆರ್ಮಿ, ಗೊಂಡ–ಕುರುಬ ಎಸ್ಟಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯದ ಛಲವಾದಿ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ 10 ಸಂಘಟನೆಗಳು ನ.2ರಂದೇ ಪಥಸಂಚಲನ–ಮೆರವಣಿಗೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದವು.

ಅ.24ರಂದು ಈ ಸಂಬಂಧಿತ ಅರ್ಜಿ ವಿಚಾರಣೆ ಮುಂದುವರಿಸಿದ್ದ ಹೈಕೋರ್ಟ್, ವಿವಿಧ ಸಂಘಟನೆಗಳೊಂದಿಗೆ ಅ.28ರಂದು ಶಾಂತಿಸಭೆ ನಡೆಸಿ, ಅ.30ರಂದು ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಅದರಂತೆ ಕಲಬುರಗಿ ಜಿಲ್ಲಾಡಳಿತ ಈ ಶಾಂತಿ ಸಭೆ ಆಯೋಜಿಸಿದೆ.

ಜಿಲ್ಲಾಡಳಿತ ಶಾಂತಿಸಭೆಗೆ ಆಹ್ವಾನಿಸಿದೆ. ನಮ್ಮ ಕಡೆಯಿಂದ ಮೂವರು ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ಸಭೆಯಲ್ಲಿ ಏನು ನಿರ್ಧಾರವಾಗುತ್ತೋ ನೋಡೋಣ
ಅಶೋಕ ಪಾಟೀಲ ಆರ್ಎಸ್ಎಸ್ ಜಿಲ್ಲಾ ಸಂಚಾಲಕ

‘ಸಚಿವ ಖರ್ಗೆ ಪ್ರಾಯೋಜಿತ ವಿರೋಧ’

‘ಕಲಬುರಗಿ ಸಾಮರಸ್ಯದ ನೆಲ. ಹಿಂದೆಂದೂ ಇಲ್ಲಿ ಕೋಮು–ಜಾತಿ ಸಂಘರ್ಷ ನಡೆದಿಲ್ಲ. ಇಂಥ ನೆಲದಲ್ಲಿ ಆರ್ಎಸ್ಎಸ್ ಪಥಸಂಚಲನ ದಿನವೇ ತಾವೂ ಪಥಸಂಚಲನ ನಡೆಸಲು ದಲಿತ ಸಂಘಟನೆಗಳು ಮುಂದಾಗಿರುವುದು ತೀವ್ರ ಖಂಡನೀಯ’ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಅಸಮಾಧಾನ ವ್ಯಕ್ತಪಡಿಸಿದರು. ‘ಜಿಲ್ಲೆಯ ಅಭಿವೃದ್ಧಿ ಬಗೆಗೆ ಗಮನಹರಿಸದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಪ್ರಾಯೋಜಿಕತ್ವದಲ್ಲಿ ದಲಿತ ಸಂಘಟನೆಗಳನ್ನು ಆರ್ಎಸ್ಎಸ್ ಪಥಸಂಚಲನದ ವಿರುದ್ಧ ಎತ್ತಿಕಟ್ಟಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ‘ಮಲ್ಲಿಕಾರ್ಜುನ ಖರ್ಗೆ ತಮ್ಮ 50 ವರ್ಷಗಳ ರಾಜಕಾರಣದಲ್ಲಿ ಆರ್ಎಸ್ಎಸ್ ಪಥಸಂಚಲನ ಸಂಘದ ಚಟುವಟಿಕೆಗಳು ನಡೆಯಲಿಲ್ಲವೇ? ಅವರು ಎಂದೂ ವಿರೋಧಿಸಿಲ್ಲ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದರಿಂದಲೇ ಅವರು ಒಂಬತ್ತು ಸಲ ಗೆಲುವು ಸಾಧಿಸಿದರು. ರಾಜ್ಯಸಭೆ ಸದಸ್ಯ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಎಐಸಿಸಿ ಅಧ್ಯಕ್ಷರೂ ಆಗಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಾಕಷ್ಟು ಹೆಸರಿದೆ. ಅವರಿಗೆ ಹೆಸರಿನ ಅಗತ್ಯವಿಲ್ಲ. ಆದರೂ ಹೆಸರಿನ ಗೀಳು ಹಾಗೂ ನಿರಂತರವಾಗಿ ಮಾಧ್ಯಮದಲ್ಲಿ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. ‘ಜಿಲ್ಲೆಯಲ್ಲಿ ಶಾಂತಿ–ಸೌಹಾರ್ದ ಕಾಪಾಡಬೇಕಿದ್ದ ಸರ್ಕಾರದ ಪ್ರಮುಖರೇ ಗೊಂದಲ ಸೃಷ್ಟಿಸಿದರೆ ಹೇಗೆ? ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಇಂಥ ಗೊಂದಲ ಸೃಷ್ಟಿ ಜಾತಿಗಳ ನಡುವೆ ಸಮಾಜಗಳ ನಡುವೆ ಕಂದಕ ಮೂಡಿಸದಂತೆ ತಡೆಯಬೇಕು. ಆರ್ಎಸ್ಎಸ್ಗೂ ಪಥಸಂಚಲನಕ್ಕೆ ಅವಕಾಶ ನೀಡಲಿ. ಅನುಮತಿ ಕೇಳಿರುವ ಇತರ ಸಂಘಟನೆಗಳಿಗೂ ಒಂದೊಂದು ದಿನ ಅನುಮತಿ ನೀಡಲಿ’ ಎಂದು ಒತ್ತಾಯಿಸಿದರು. ಮಾಜಿ ಮೇಯರ್ ವಿಶಾಲ್ ದರ್ಗಿ ಹಾಗೂ ಬಸವರಾಜ ಬೆನ್ನೂರ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕುಸ್ತಿ ಅನಿಲ ಜಾಧವ ರವಿ ಕ್ರಾಂತಿ ಗಣೇಶ ವಳಕೇರಿ ಶಿವಯೋಗಿ ನಾಗನಹಳ್ಳಿ ಸಂತೋಷ ಹಾದಿಮನಿ ವಿಜಯಕುಮಾರ ಆಡಕಿ ಸೇರಿದಂತೆ ಹಲವರಿದ್ದರು.

‘ಲಾಠಿ ಬಿಟ್ಟು ಬಾವುಟ ಹಿಡಿಯಲಿ’

‘ಚಿತ್ತಾಪುರದಲ್ಲಿ ಲಾಠಿ ಹಿಡಿದು ಪಥಸಂಚಲನ ನಡೆಯಲು ಆರ್ಎಸ್ಎಸ್ಗೆ ಅನುಮತಿ ನೀಡಬಾರದು’ ಎಂದು ಸೌಹಾರ್ದ ಕರ್ನಾಟಕ ಸಂಘಟನೆ ಮುಖಂಡರು ಆಗ್ರಹಿಸಿದರು. ‘ಲಾಠಿ ಒಂದರ್ಥದಲ್ಲಿ ಆಯುಧವೇ ಸರಿ. ಅಕ್ಷರ ಕಲಿಸುವ ಶಿಕ್ಷಕರಿಗೂ ಲಾಠಿ ಹಿಡಿದು ಮಕ್ಕಳಿಗೆ ಬೋಧಿಸಬೇಡಿ ಎನ್ನುತ್ತೇವೆ. ಭವಿಷ್ಯದಲ್ಲಿ ಆರ್ಎಸ್ಎಸ್ಗೆ ಲಾಠಿ ಹಿಡಿದು ಪಥಸಂಚಲನ ನಡೆಸಲು ಅವಕಾಶ ನೀಡಬಾರದು. ಅದರ ಬದಲು ತ್ರಿವರ್ಣ ಧ್ವಜದ ಬಾವುಟ ಹಿಡಿದು ಪಥಸಂಚಲನ ನಡೆಸಲಿ’ ಎಂದು ಸಂಘಟನೆ ಸದಸ್ಯೆ ಕೆ.ನೀಲಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು. ‘ಹಿಂದೂ ಜನತೆಗೂ ಆರ್ಎಸ್ಎಸ್ಗೂ ಸಂಬಂಧವೇ ಇಲ್ಲ. ಹಿಂದುಳಿದ ಸಮುದಾಯಗಳ ಬಗೆಗೆ ಆರ್ಎಸ್ಎಸ್ ಕಾಳಜಿಯನ್ನೇ ಹೊಂದಿಲ್ಲ. ಭಾರತೀಯ ಧರ್ಮಗಳೆಲ್ಲ ಪ್ರಧಾನವಾಗಿ ಮಾನವೀಯತೆ ಬೋಧಿಸಿವೆ. ಆದರೆ ಆರ್ಎಸ್ಎಸ್ ಹಿಂದೂ ರಾಷ್ಟ್ರದ ಕನಸು ತೋರಿಸುತ್ತ ‘ಹಿಂದುತ್ವ’ ರಾಷ್ಟ್ರವನ್ನು ಪ್ರತಿಪಾದಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖಂಡ ಅರ್ಜುನ ಭದ್ರೆ ಮಾತನಾಡಿ ‘ಆರ್ಎಸ್ಎಸ್ ಲಾಠಿ ಹಿಡಿದು ಪಥಸಂಚಲನ ನಡೆಸುವುದಾದರೆ ಅದಕ್ಕೆ ತ್ರಿವರ್ಣ ಧ್ವಜ ಹಾಕಿಕೊಳ್ಳಲಿ ಹಾಗೂ ಕೈಯಲ್ಲಿ ಸಂವಿಧಾನ ಹಿಡಿದು ಸಾಗಲಿ. ಮಹಾತ್ಮ ಗಾಂಧಿ ಕೊಂದ ಗೋಡ್ಸೆಗೆ ಮನುಸ್ಮೃತಿಗೆ ಧಿಕ್ಕಾರ ಕೂಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಚಿತ್ತಾಪುರದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಹೀಗಾಗಿ ನ್ಯಾಯಾಲಯ ಅವಕಾಶ ನೀಡಲಿ ನೀಡದಿರಲಿ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ನಾವು ಆಸ್ಪದ ಕೊಡಲ್ಲ. ಆರ್ಎಸ್ಎಸ್ ಕಡೆಯವರು ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬವನ್ನು ಅವಾಚ್ಯವಾಗಿ ನಿಂದಿಸಿದ್ದನ್ನು ಅವರ ಬೆಂಬಲಿಗರು ಸಹಿಸಲ್ಲ. ಆ ದೃಷ್ಟಿಯಿಂದ ಪಥಸಂಚಲನಕ್ಕೆ ಅನುಮತಿ ನೀಡಬಾರದು’ ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಭುಲಿಂಗ ಮಹಾಗಾಂವಕರ್ ಮೀನಾಕ್ಷಿ ಬಾಳಿ ಆರ್.ಜಿ.ಶಟಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.