ಸೇಡಂ: ತಾಲ್ಲೂಕಿನಲ್ಲಿ ಗುರುವಾರ ವರುಣನ ಆರ್ಭಟ ಜೋರಾಗಿತ್ತು. ಇದರಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಬುಧವಾರ ರಾತ್ರಿಯೂ ಭಾರಿ ಮಳೆಯಾಗಿತ್ತು. ಜೊತೆಗೆ ಗುರುವಾರ ಬೆಳಿಗ್ಗೆಯಿಂದಲೇ ಜಿಟಜಿಟಿ ಮಳೆ ಸುರಿಯಿತು. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇಂದು ರಜೆ ಸಿಗುತ್ತದೆನೋ ಎಂದು ಕಾಯ್ದರು. ಕೆಲ ಪಾಲಕರು ನಿನ್ನೆ ಮಳೆ ಇರಲಿಲ್ಲ, ಆದರೂ ರಜೆ ಘೋಷಿಸಲಾಗಿತ್ತು. ಇಂದು ಮಳೆ ಸುರಿಯುತ್ತಿದ್ದರೂ ಸಹ ಸರ್ಕಾರ ರಜೆ ನೀಡಿಲ್ಲವೇಕೆ ಎಂದು ಮನದಲ್ಲಿ ಪ್ರಶ್ನಿಸುತ್ತಾ ಮಕ್ಕಳಿಗೆ ಶಾಲೆಗೆ ಕಳುಹಿಸಿದರು.
ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಎಡಬಿಡದೇ ಸುರಿದ ಮಳೆಯಿಂದ ಜನರು ತತ್ತರಿಸಿದ್ದಾರೆ. ಚಳಿ ಗಾಳಿ ಬೀಸುತ್ತಿದೆ. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ರೈತಾಪಿ ವರ್ಗ ಮಳೆಯಿಂದ ಕಂಗಾಲಾಗಿದೆ.
ನದಿಗಳಲ್ಲಿ ಹೆಚ್ಚಿದ ಪ್ರವಾಹ: ತಾಲ್ಲೂಕಿನ ಉಭಯ ನದಿಗಳಾದ ಕಾಗಿಣಾ ಮತ್ತು ಕಮಲಾವತಿಯಲ್ಲಿ ನದಿ ನೀರಿನ ಪ್ರವಾಹ ಹೆಚ್ಚಿದೆ. ಕಾಗಿಣಾ ನದಿ ನೀರಿನ ಪ್ರವಾಹ ಹೆಚ್ಚಿದ್ದರಿಂದ, ತೊಟ್ನಳ್ಳಿ, ಬಿಜನಳ್ಳಿ, ಯಡಗಾ, ಸಂಗಾವಿ, ಬೀರನಳ್ಳಿ, ಅರೆಮೊಮ್ಮನಳ್ಳಿ, ಮಳಖೇಡ, ಸಮಖೇಡ ತಾಂಡಾದಲ್ಲಿ, ಕುಕ್ಕುಂದಾ ಕಡೆಗಳಲ್ಲಿನ ಹೊಲಗಳಿಗೆ ನೀರು ನುಗ್ಗಿದ್ದು ಬೆಳೆಗಳಿಗೆ ಹಾನಿಯಾಗುತ್ತಿದೆ’ ಎಂದು ರೈತ ಚನ್ನಬಸ್ಸಪ್ಪ ಹಾಗರಗಿ ತಿಳಿಸಿದ್ದಾರೆ.
ತಾಲ್ಲೂಕಿನ ಮಳಖೇಡ, ಕೋಡ್ಲಾ, ಕೋಲ್ಕುಂದಾ, ಮದನಾ, ಮುಧೋಳ, ರಂಜೋಳ ಸೇರಿದಂತೆ ತಾಲ್ಲೂಕಿನಾದ್ಯಂತ ಮಳೆ ಗುರುವಾರವು ಮುಂದುವರೆಯಿತು.
ಮಳೆ ವಿವರ: ಬುಧವಾರ ತಾಲ್ಲೂಕಿನ ಸೇಡಂ 27 ಮಿ.ಮೀ, ಆಡಕಿ 18.3 ಮಿ.ಮೀ, ಮುಧೋಳ 31 ಮಿ.ಮೀ, ಕೋಡ್ಲಾ 26.3 ಮಿ.ಮೀ ಮತ್ತು ಕೋಲ್ಕುಂದಾದಲ್ಲಿ 37.5 ಮಿ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಬೆನಕನಳ್ಳಿ ಗ್ರಾಮಕ್ಕೆ ನುಗ್ಗಿದ ನೀರು ‘ಗ್ರಾಮದ ಅಗಸಿ ಬಳಿಯರಿವು ನಾಲಾಕ್ಕೆ ನೀರು ಹರಿದು ಬಂದಿದ್ದು ಬೆನಕನಳ್ಳಿ ಗ್ರಾಮದಿಂದ ದಿಗ್ಗಾಂವ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನೀರಲ್ಲಿ ಮುಳುಗಿತ್ತು. ಮಾರ್ಗವನ್ನು ಬದಲಿಸಿ ಮರಗಮ್ಮ ದೇವಿ ಗುಡಿಯಿಂದ ದಿಗ್ಗಾಂವ ಗ್ರಾಮಕ್ಕೆ ಪ್ರಯಾಣಿಕರು ತೆರಳಿದರು. ಅಲ್ಲದೆ ಅಗಸಿಯಿಂದಲೇ ಗ್ರಾಮದೊಳಗೆ ಸಂಚರಿಸುವ ರಸ್ತೆ ಮೇಲೆ ನೀರು ಹರಿದಿದ್ದರಿಂದ ಬೈಕ್ ಸವಾರರು ಸಾರ್ವಜನಿರಕು ಪರದಾಡಿದರು’ ಎಂದು ಗ್ರಾಮ ನಿವಾಸಿ ಮಲ್ಲಿಕಾರ್ಜುನ ಕಾಕಲವಾರ ತಿಳಿಸಿದರು. ಚಂದಣೇಶ್ವರ ಗುಡಿ ಹತ್ತಿರ ನೀರು ನಿಂತು ದೇವಾಲಯಕ್ಕೆ ತೆರಳಲು ಅನನುಕೂಲವಾಗಿದೆ. ಹಾವು ಚೇಳು ಸೇರಿದಂತೆ ಜಲಚರ ಕ್ರಿಮಿ ಕೀಟಗಳು ನೀರಿನಲ್ಲಿ ಹರಿದು ಬರುತ್ತಿವೆ. ಇದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಗ್ರಾಮದ ಒಂದು ಹೋಟೆಲ್‌ಗೆ ನೀರು ನುಗ್ಗಿದೆ ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.