ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ: ನುಡಿಜಾತ್ರೆಗೆ ಐದು ಲಕ್ಷ ಜನರು

Last Updated 22 ಜನವರಿ 2020, 22:48 IST
ಅಕ್ಷರ ಗಾತ್ರ

ಬೆಂಗಳೂರು: ಕಲಬುರ್ಗಿಯಲ್ಲಿ ನಡೆಯುವ 85ನೇ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಸಮ್ಮೇಳನಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು ಪ್ರಧಾನ ವೇದಿಕೆ 35 ಎಕರೆಗಳ ವಿಶಾಲ ಸ್ಥಳದಲ್ಲಿ ತಲೆ ಎತ್ತಲಿದೆ. ಒಟ್ಟು ಮೂರು ವೇದಿಕೆಗಳಲ್ಲಿ ಗೋಷ್ಠಿಗಳು ನಡೆಯಲಿವೆ. ಫೆ. 5ರಂದು ಬೆಳಗ್ಗೆ 8ಕ್ಕೆ ರಾಷ್ಟ್ರಧ್ವಜ, ಪರಿಷತ್ತಿನ ಧ್ವಜ ಮತ್ತು ನಾಡಧ್ವಜಾರೋಹಣವಾಗಲಿದೆ. 8.30ಕ್ಕೆ ಡಾ. ಎಸ್.ಎಂ. ಪಂಡಿತ ರಂಗಮಂದಿರದಿಂದ ವಿವಿ ಆವರಣದ ಪ್ರಧಾನ ವೇದಿಕೆಯ ವರೆಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಲಿದ್ದು, 60 ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ. 11.30ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದರು.

ಈ ಸಲದ ಗೋಷ್ಠಿಗಳ ವಿಶೇಷ ಎಂದರೆ ಕನ್ನಡ ಭಾಷೆಯ ಉಳಿಸುವ, ಬೆಳೆಸುವ ಬಗ್ಗೆ ಸುದೀರ್ಘ ಉಪನ್ಯಾಸವನ್ನು ಅಯೋಜಿಸಲಾಗಿದೆ. ಈ ಉಪನ್ಯಾಸವನ್ನು ಹಿರಿಯ ವಿದ್ವಾಂಸ, ಸಂಶೋಧಕ ಷ. ಶೆಟ್ಟರ್‌ ನಡೆಸಿಕೊಡಲಿದ್ದಾರೆ. ಮೂರು ವೇದಿಕೆಗಳಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ನೂರಕ್ಕೂ ಹೆಚ್ಚು ಕವಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿ ಸುಮಾರು 27 ಕವಿಗಳು ಕಲಬುರ್ಗಿ ಭಾಗದವರೇ ಆಗಿದ್ದಾರೆ. ವಿಷಯ ವೈವಿಧ್ಯವೂ ಚೆನ್ನಾಗಿದೆ ಎಂದೂ ಅವರು ತಿಳಿಸಿದರು.

ಸಮ್ಮೇಳನದ ಸಿದ್ಧತೆಗಳ ಉಸ್ತುವಾರಿಯ ನೇತೃತ್ವವನ್ನು ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ವಹಿಸಿದ್ದಾರೆ. ಈಗಾಗಲೇ ₹ ಹತ್ತು ಕೋಟಿ ಬಿಡುಗಡೆಯಾಗಿದ್ದು, ಸ್ಥಳೀಯ ಸಂಘ ಸಂಸ್ಥೆಗಳು ದೇಣಿಗೆ ನೀಡುವ ಸಾಧ್ಯತೆಯಿದೆ. ಹೆಚ್ಚಿನ ವೆಚ್ಚವಾದಲ್ಲಿ ಸರ್ಕಾರ ಮತ್ತಷ್ಟು ಹಣವನ್ನು ಬಿಡುಗಡೆಮಾಡುತ್ತದೆ ಎಂಬ ಭರವಸೆಯನ್ನೂ ಉಪಮುಖ್ಯಮಂತ್ರಿ ನೀಡಿದ್ದಾರೆ ಎಂದೂ ಅವರು ಹೇಳಿದರು.

ಗಣ್ಯರಿಗಾಗಿ ಹೋಟೆಲ್‌ಗಳಲ್ಲಿ ‘ಎ’ ಶ್ರೇಣಿಯ 174 ಮತ್ತು ‘ಬಿ’ ಶ್ರೇಣಿಯ 184 ಕೊಠಡಿಗಳನ್ನು ಕಾದಿರಿಸಲಾಗಿದ್ದು, ಪ್ರತಿನಿಧಿಗಳಿಗಾಗಿ ವಿದ್ಯಾರ್ಥಿ ನಿಲಯ ಮತ್ತು ಕಲ್ಯಾಣಮಂಟಪಗಳನ್ನು ಬಳಸಿಕೊಳ್ಳಲಾಗುವುದು. ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳ ಜತೆಗೆ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದ ಭಕ್ಷ್ಯಗಳೂ ಇರುತ್ತವೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT