ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಶಾಲಾ ಅಂಗಳದಲ್ಲಿ ಮತ್ತೆ ಮಕ್ಕಳ ಕಲರವ

ಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವ: ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಶಿಕ್ಷಕರು
Published 31 ಮೇ 2024, 13:08 IST
Last Updated 31 ಮೇ 2024, 13:08 IST
ಅಕ್ಷರ ಗಾತ್ರ

ಕಲಬುರಗಿ: ಬೇಸಿಗೆಯ 50 ದಿನಗಳ ಸುದೀರ್ಘ ರಜೆಯ ನಂತರ ಶಾಲೆಗಳು ಪುನರಾರಂಭವಾಗಿದ್ದು, ಶಾಲಾ ಅಂಗಳದಲ್ಲಿ ಶುಕ್ರವಾರ ಮತ್ತೆ ಮಕ್ಕಳ ಕಲರವ ಕಂಡುಬಂತು. ಜಿಲ್ಲೆಯಾದ್ಯಂತ ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಹೂವು ನೀಡಿ ಸಂಭ್ರದಿಂದ ಸ್ವಾಗತಿಸಿದರು.

ಶಾಲೆಗಳನ್ನು ತಳಿರು ತೋರಣ ಮತ್ತು ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಆವರಣದಲ್ಲಿ ಬಣ್ಣಬಣ್ಣದ ಆಕರ್ಷಕ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಶಾಲಾ ಸಮಯಕ್ಕೆ ಹಾಜರಾದ ವಿದ್ಯಾರ್ಥಿಗಳ ಮೇಲೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಪುಷ್ಪವೃಷ್ಟಿ ಮಾಡಿದರು. ನಂತರ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು.

ಮೊದಲ ದಿನವೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ಪಡೆದ ಮಕ್ಕಳ ಮೊಗದಲ್ಲಿ ಖುಷಿ ಕಂಡುಬಂತು. 8, 9 ಮತ್ತು 10ನೇ ತರಗತಿ ಹೆಣ್ಣುಮಕ್ಕಳ ಜೊತೆಗೆ ಇದೇ ಮೊದಲ ಬಾರಿಗೆ 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿನಿಯರಿಗೂ ಚೂಡಿದಾರ್‌ ಸಮವಸ್ತ್ರ ವಿತರಿಸಲಾಯಿತು. ಮಧ್ಯಾಹ್ನದ ಬಿಸಿಯೂಟದಲ್ಲಿ ಎಲ್ಲರೂ ಸಿರಾ ಜೊತೆಗೆ ಉಪ್ಪಿಟ್ಟು ಅಥವಾ ಪಲಾವ್‌ ಸೇವಿಸಿದರು. ವಿದ್ಯಾರ್ಥಿಗಳು ಇಡೀ ದಿನ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮದಿಂದ ಕಾಲಕಳೆದರು.

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸುತ್ತಲಿನ ಓಣಿಗಳಲ್ಲಿ ‘2024–25ನೇ ಶೈಕ್ಷಣಿಕ ವರ್ಷದ ಉಚಿತ ಪ್ರವೇಶ ಪ್ರಾರಂಭ’ ಎಂಬ ಬ್ಯಾನರ್‌ ಹಿಡಿದು ಪ್ರಭಾತಪೇರಿ ನಡೆಸಿದರು. ‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’, ‘ಕಡ್ಡಾಯವಾಗಿ ಶಿಕ್ಷಣ ಕೊಡಿಸಿ’, ‘ಶಿಕ್ಷಣವೇ ಶಕ್ತಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ನಗರದ ತಾರ್‌ಫೈಲ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಕಾಶ್‌ ರಾಠೋಡ್‌, ಮುಖ್ಯ ಶಿಕ್ಷಕ ರಾಜಕುಮಾರ ಪಾಟೀಲ ಹಾಗೂ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳಿಗೆ ಎರಡು ಜೊತೆ ಬಟ್ಟೆ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು. ಬಿಸಿಯೂಟದಲ್ಲಿ ಸಿರಾ ಹಾಗೂ ಪಲಾವ್‌ ಕೊಡಲಾಯಿತು.

ಎಂ.ಬಿ.ನಗರದಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಪ್ರತಿಮಾ ದೇವೂರ, ಸಹಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳಿಗೆ ಗುಲಾಬಿ ಹೂವು ಮತ್ತು ಚಾಕೋಲೇಟ್‌ ನೀಡಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಅಕ್ಷರ ದಾಸೋಹ ಅಧಿಕಾರಿ ರಾಜಕುಮಾರ ಪಾಟೀಲ, ಸಿಆರ್‌ಪಿ ವೆಂಕಟೇಶ ತಳವಾರ, ಬಿಆರ್‌ಪಿ ಉಷಾ ಗೊಬ್ಬೂರ್‌ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ 2,055 ಸರ್ಕಾರಿ ಶಾಲೆ, 328 ಅನುದಾನಿತ, 1,332 ಅನುದಾನ ರಹಿತ ಹಾಗೂ ವಸತಿ ಸೇರಿದಂತೆ 170 ಇತರೆ ಶಾಲೆಗಳಿವೆ. ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಬುಧವಾರ ಮತ್ತು ಗುರುವಾರ ಮುಖ್ಯಶಿಕ್ಷಕರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಪೂರ್ವಸಿದ್ಧತೆಗಳನ್ನು ಕೈಗೊಂಡಿದ್ದರು. ತರಗತಿ ಕೋಣೆ, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಆವರಣದ ಸ್ವಚ್ಛತೆ ಮಾಡಿಕೊಂಡಿದ್ದರು. ಜೊತೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ಮನವಿ ಮಾಡಿಕೊಂಡಿದ್ದರು.

ಕಲಬುರಗಿಯ ತಾರಫೈಲ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಿದರು
–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ತಾರಫೈಲ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಿದರು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಸರ್ಕಾರಿ ಕನ್ಯಾ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಅಂಗವಾಗಿ ಶಾಲೆಯ ಆವರಣದಲ್ಲಿ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ರಂಗೋಲಿ ಬಿಡಿಸಿದರು
–ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್‌
ಕಲಬುರಗಿಯ ಸರ್ಕಾರಿ ಕನ್ಯಾ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಅಂಗವಾಗಿ ಶಾಲೆಯ ಆವರಣದಲ್ಲಿ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ರಂಗೋಲಿ ಬಿಡಿಸಿದರು –ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT