ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಶ್ಯಾಮ ಬಡಾವಣೆಗೆ ಬೇಕಿದೆ ಸೌಕರ್ಯ

Published 28 ಆಗಸ್ಟ್ 2023, 4:59 IST
Last Updated 28 ಆಗಸ್ಟ್ 2023, 4:59 IST
ಅಕ್ಷರ ಗಾತ್ರ

ಓಂಕಾರ ಬಿರಾದಾರ

ಕಲಬುರಗಿ: ಮಳೆಯಾದರೆ ಸಾಕು ಗದ್ದೆಯಂತಾಗುವ ರಸ್ತೆ, ಇಲ್ಲಿ ಸಂಚರಿಸಲು ನರಕಯಾತನೆ ಪಡುವ ಜನ, ಮನೆಯ ಶೌಚಾಲಯ ನೀರೆಲ್ಲ ರಸ್ತೆಯ ಮೇಲೆ ಹರಿದು ಗಲೀಜು ವಾಸನೆ, ಕೆಟ್ಟ ರಸ್ತೆಯಲ್ಲೇ ಮಕ್ಕಳ ಓಡಾಟ, ಬೆಳಗದ ಬೀದಿ ದೀಪಗಳು...

ಇದು ಕಲಬುರಗಿ ನಗರದ ಕೋಟನೂರ (ಡಿ) ಸಮೀಪದ ನಂದಿಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶರಣಬಸವೇಶ್ವರ ನಗರ (ಶ್ಯಾಮ ಬಡಾವಣೆ)ದ ಚಿತ್ರಣ. ಇದು ಗುಲಬರ್ಗಾ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದಿದೆ. ಇಲ್ಲಿ 300ಕ್ಕೂ ಅಧಿಕ ಮನೆಗಳಿವೆ. 1300ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದಾರೆ. ಆದರೆ, ಇಲ್ಲಿಯ ಜನ ಮೂಲಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಬಡಾವಣೆ ರಚನೆಗೊಂಡು 15 ವರ್ಷಗಳಾದರೂ ಇಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ. ಒಳಚರಂಡಿ ವ್ಯವಸ್ಥೆಯಿಲ್ಲ. ಬಳಕೆಗೆ ಹಾಗೂ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ನಿವಾಸಿಗಳು ವೈಯಕ್ತಿಕ ಕೊಳವೆಬಾವಿ ಕೊರೆಸಿ, ನೀರು ಲಭ್ಯವಾದರೆ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಕೊಳವೆಬಾವಿ ಇಲ್ಲದವರು ದೂರದ ಸ್ಥಳಗಳಿಂದ ನೀರು ತಂದು ಬಳಕೆ ಮಾಡುತ್ತಿದ್ದಾರೆ.

ಬಡಾವಣೆ ರಚನೆಯಾಗಿ 15 ವರ್ಷಗಳು ಕಳೆದರೂ ಮೂಲಸೌಕರ್ಯಗಳಿಂದ ಬಳಲುವಂತಾಗಿದೆ. ಯುಜಿಡಿ ಸಿ.ಸಿ ರಸ್ತೆ ನಿರ್ಮಾಣ ಮಾಡಬೇಕು.
ಸಂಜೀವ ಹಂಚನಾಳ, ಬಡಾವಣೆ ನಿವಾಸಿ

ಬಡಾವಣೆಯ ಕೆಲ ಪ್ರದೇಶದಲ್ಲಿ ಮಾತ್ರ ವಿದ್ಯುತ್ ದೀಪ ಅಳವಡಿಸಲಾಗಿದೆ. ಇದರಿಂದ ರಾತ್ರಿ ಸಮಯದಲ್ಲಿ ತಿರುಗಾಡಲು ಹಾವು, ಚೇಳುಗಳ ಭಯವಿದೆ. ಬಡಾವಣೆ ಸಮಗ್ರ ಅಭಿವೃದ್ಧಿ ಕಲ್ಪಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಂದಿಕೂರ ಗ್ರಾಮ ಪಂಚಾಯಿತಿಗೆ ಅನುದಾನ ಒದಗಿಸುವಂತೆ ಪತ್ರ ಬರೆಯಲಾಗಿದೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಬಡಾವಣೆಯ ಎಲ್ಲ ನಿವಾಸಿಗಳು ಪ್ರತಿವರ್ಷದ ಲಕ್ಷಾಂತರ ರೂಪಾಯಿ ಗ್ರಾಮ ಪಂಚಾಯಿತಿಗೆ ತೆರಿಗೆ ರೂಪದಲ್ಲಿ ಹಣ ಕಟ್ಟುತ್ತಿದ್ದೇವೆ. ಆದರೆ, ಮೂಲಸೌಕರ್ಯ ಮಾತ್ರ ಮರೀಚಿಕೆಯಾಗಿದೆ. ಹಿಂದಿನ ಶಾಸಕರ ಅವಧಿಯಲ್ಲಿ ಬಡಾವಣೆ ಕೆಲ ಪ್ರದೇಶದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನೂ ಶೇ 60ರಷ್ಟು ಕಾಮಗಾರಿ ಬಾಕಿ ಇದೆ.

‘ಕೆಲ ದಿನಗಳ ಹಿಂದೆ ಗ್ರಾ.ಪಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವೆ. ಸಮಸ್ಯೆ ಬಗ್ಗೆ ಮಾಹಿತಿ ಇಲ್ಲ. ಆ. 29ರಂದು ನಡೆಯುವ ಪಂಚಾಯಿತಿ ಸಭೆಯ ಬಳಿಕ ಮಾಹಿತಿ ಪಡೆಯಲಾಗುವುದು.
ಚಂದ್ರಕಾಂತ ಪೂಜಾರಿ, ನಂದಿಕೂರ ಗ್ರಾ.ಪಂ. ಅಧ್ಯಕ್ಷ

ಮಳೆಗಾಲ ಆರಂಭವಾಗಿರುವುದರಿಂದ ಮಕ್ಕಳು ಶಾಲೆಗೆ ಹೋಗಿ ಬರುವುದು ಸಹ ಕಷ್ಟವಾಗಿದೆ. ಚರಂಡಿ ನೀರು ರಸ್ತೆ ಮೇಲೆ ಹರಿದು ರೋಗರುಜಿನಗಳಿಗೆ ಕಾರಣವಾಗಿದೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಸಿ.ಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಬಡಾವಣೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬಡಾವಣೆಯ ನಿವಾಸಿಗಳ ವಾಯುವಿಹಾರಕ್ಕೆ ಚೆನ್ನಾಗಿರುವ ಗಾರ್ಡನ್‌ ವ್ಯವಸ್ಥೆ ಇಲ್ಲ. ಗಾರ್ಡನ್‌ ನಿರ್ಮಾಣ ಮಾಡಬೇಕು. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂಬುದು ಅಲ್ಲಿನ ನಿವಾಸಿಗಳ ಆಗ್ರಹ.

ಕಲಬುರಗಿಯ ಕೋಟನೂರ (ಡಿ) ಸಮೀಪದ ನಂದಿಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಶರಣಬಸವೇಶ್ವರ ನಗರದ ಕಚ್ಚಾ ರಸ್ತೆ
ಕಲಬುರಗಿಯ ಕೋಟನೂರ (ಡಿ) ಸಮೀಪದ ನಂದಿಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಶರಣಬಸವೇಶ್ವರ ನಗರದ ಕಚ್ಚಾ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT