ವಾಡಿ (ಕಲಬುರಗಿ ಜಿಲ್ಲೆ): ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಗುರುವಾರ ಸಂಜೆ ಆಟೊ ಹಾಗೂ ಬೂದಿ ಹೊತ್ತ ಟ್ಯಾಂಕರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಆರು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರು ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ನಿವಾಸಿಗಳಾಗಿದ್ದು, ಆಧಾರ್ ತಿದ್ದುಪಡಿಗಾಗಿ ಚಿತ್ತಾಪುರಕ್ಕೆ ಹೋಗಿ ಮರಳಿ ನಾಲವಾರ ಗ್ರಾಮಕ್ಕೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಡಿಕ್ಕಿ ಹೊಡೆದ ನಂತರ ಸುಮಾರು 100 ಅಡಿಗೂ ಅಧಿಕ ದೂರದವರೆಗೆ ಲಾರಿಯು ಆಟೊವನ್ನು ಎಳೆದುಕೊಂಡು ಹೋಗಿದ್ದು, ದೇಹಗಳು ಛಿದ್ರಗೊಂಡು ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ನಾಜ್ಮೀನ್ ಬೇಗಂ ಮಂಜುರ್ (28), ನಾಜ್ಮೀನ್ ಮಕ್ಕಳಾದ ಫಾತಿಮಾ ಮಂಜುರ್ (12), ಅಬೂಬಕ್ಕರ್ ಮಂಜುರ್ (4), ಬೀಬಿ ಮರಿಯಮ್ ಮಂಜುರ್ ( 3 ತಿಂಗಳು), ನಾಜ್ಮೀನ್ ಮೈದುನ ಮಹ್ಮದ್ ಪಾಷಾ ಮುಸ್ತಾಕ್ (20) ಹಾಗೂ ಆಟೋ ಚಾಲಕ ಬಾಬಾ (35) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
10 ವರ್ಷದ ಬಾಲಕ ಮಹ್ಮದ್ ಹುಸೇನ್ ಮಂಜುರ್ ಗಾಯಗೊಂಡಿದ್ದಾನೆ.
ಮೃತರು ನಾಲವಾರ ಗ್ರಾಮದ ವಾರ್ಡ್ ನಂ.1ರ ಅಕಾನಿ ಮಸೀದಿ ಹತ್ತಿರದ ನಿವಾಸಿಗಳಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟರು.