ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾನೊ ತಂತ್ರಜ್ಞಾನದಿಂದ ಕೃಷಿ ಉತ್ಪಾದನೆ ಹೆಚ್ಚಳ: ಪ್ರೊ. ಎಸ್‌.ಆರ್. ನಿರಂಜನ

Published 8 ಜನವರಿ 2024, 16:23 IST
Last Updated 8 ಜನವರಿ 2024, 16:23 IST
ಅಕ್ಷರ ಗಾತ್ರ

ಕಲಬುರಗಿ: ನ್ಯಾನೊ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಕೃಷಿಯಲ್ಲಿ ಹೆಚ್ಚಿನ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಆಹಾರ ಭದ್ರತೆಯನ್ನು ಹೊಂದಬಹುದು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪ್ರೊ. ಎಸ್‌.ಆರ್. ನಿರಂಜನ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಇಂಗ್ಲೆಂಡ್‌ನ ಬ್ರಾಡ್‌ಫೋರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಜನರು ಹಸಿವಿನಿಂದ ನರಳಬೇಕಾಗಿತ್ತು. ಹೀಗಾಗಿ, ಎಂ.ಎಸ್. ಸ್ವಾಮಿನಾಥನ್‌ ನೇತೃತ್ವದಲ್ಲಿ ಹೆಚ್ಚಿನ ಕೃಷಿ ಉತ್ಪಾದನೆ ಮಾಡುವ ನಿರ್ಧಾರ ಕೈಗೊಂಡಿದ್ದರಿಂದ ಕೃಷಿಯಲ್ಲಿ ಹೆಚ್ಚಿನ ಬದಲಾವಣೆಗಳಾದವು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರಿಂದ ಆಹಾರ ಉತ್ಪಾದನೆ ಹೆಚ್ಚಾಗಿ ಎಲ್ಲರಿಗೂ ಆಹಾರ ಪೂರೈಸುವುದು ಸಾಧ್ಯವಾಗಿದೆ‘ ಎಂದರು.

ನ್ಯಾನೊ ತಂತ್ರಜ್ಞಾನದ ಬಳಕೆಯಿಂದಾಗಿ ಬೆಳೆಗಳಿಗೆ ಸಿಂಪಡಿಸುತ್ತಿದ್ದ ರಾಸಾಯನಿಕಗಳ ಬಳಕೆಯನ್ನು ತಗ್ಗಿಸಿದೆ. ಸಮರ್ಪಕ ನೀರು ಹಾಗೂ ಪೋಷಕಾಂಶಗಳನ್ನು ಒದಗಿಸುತ್ತಿರುವುದರಿಂದ ಕೃಷಿ ಉತ್ಪಾದನೆ ಹೆಚ್ಚಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ನ್ಯಾನೊ ತಂತ್ರಜ್ಞಾನದ ವ್ಯಾಪ‍ಕ ಬಳಕೆಯಿಂದಾಗಿ ಸಾಕಷ್ಟು ಜೀವ ಹಾನಿಗಳನ್ನು ತಪ್ಪಿಸಬಹುದಾಗಿದೆ. ಮೂರು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕೋವಿಡ್ ಮಹಾಮಾರಿಯನ್ನು ತೊಲಗಿಸಲು ಲಸಿಕೆಯಲ್ಲಿ ನ್ಯಾನೊ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಯಿತು ಎಂದು ಹೇಳಿದರು.

ಭಾರತವು ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯನ್ನು ಗಮನಿಸಿ ವಿದೇಶಿ ವಿಶ್ವವಿದ್ಯಾಲಯಗಳು ಇಲ್ಲಿನ ವಿಜ್ಞಾನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿವೆ. ಇದು ಹೆಮ್ಮೆಯ ವಿಚಾರವಾಗಿದೆ. ಜೊತೆಗೆ, ಅತಿ ಹೆಚ್ಚು ಸಂಶೋಧನಾ ವರದಿಗಳನ್ನು ಅಂತರರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಿಸಿದ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿರುವುದೂ ಸಂತಸದ ಸಂಗತಿ ಎಂದು ಪ್ರೊ. ನಿರಂಜನ ತಿಳಿಸಿದರು.

ಹರಿಯಾಣದ ಅಮಿಟಿ ವಿಶ್ವವಿದ್ಯಾಲಯದ ವಿಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ರಾಜೇಂದ್ರ ಪ್ರಸಾದ್ ದಿಕ್ಸೂಚಿ ಭಾಷಣ ಮಾಡಿದರು.

ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ, ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.ಎಸ್.ಎ. ಖಗಾನಿ, ಗುವಿವಿ ಕುಲಸಚಿವ ಬಿ. ಶರಣಪ್ಪ, ಸ್ಥಳೀಯ ಸಂಘಟನಾ ಕಾರ್ಯದರ್ಶಿ ಪ್ರೊ. ಜಿ.ಎಂ. ವಿದ್ಯಾಸಾಗರ್, ಪ್ರೊ. ರಾಜನಾಳ್ಕರ್ ಲಕ್ಷ್ಮಣ ವೇದಿಕೆಯಲ್ಲಿದ್ದರು.

ಕುಲಸಚಿವ (ಮೌಲ್ಯಮಾಪನ) ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ವಂದನಾರ್ಪಣೆ ಮಾಡಿದರು.

2023ರಲ್ಲಿ 13 ಲಕ್ಷ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು ತೆರಳಿದ್ದರು. ಪ್ರಸಕ್ತ ವರ್ಷ ಈ ಸಂಖ್ಯೆ 18 ಲಕ್ಷಕ್ಕೆ ಏರುವ ನಿರೀಕ್ಷೆ ಇದೆ. ಅವರೆಲ್ಲ ವಾಪಸ್ ಬಂದು ದೇಶ ಸೇವೆ ಮಾಡಬೇಕು
ಪ್ರೊ.ಎಸ್.ಆರ್. ನಿರಂಜನ ಉಪಾಧ್ಯಕ್ಷ ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT