ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಅವೈಜ್ಞಾನಿಕ ಕಾಲುವೆಗಳಿಂದ ಹೊಲಕ್ಕಿಲ್ಲ ನೀರು!

ಗಂಡೋರಿ ನಾಲಾ ಯೋಜನೆ: ಕೋಟ್ಯಂತರ ಹಣ ಸುರಿದರೂ ಕಳಪೆ ಕಾಮಗಾರಿಗೆ ರೈತರು ಸುಸ್ತು
Published 15 ಏಪ್ರಿಲ್ 2024, 4:16 IST
Last Updated 15 ಏಪ್ರಿಲ್ 2024, 4:16 IST
ಅಕ್ಷರ ಗಾತ್ರ

ಕಲಬುರಗಿ: ಒಣ ಬೇಸಾಯವನ್ನೇ ನಂಬಿಕೊಂಡು ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿರುವ ಜಿಲ್ಲೆಯ ರೈತರಿಗೆ ನೀರಾವರಿ ಕಲ್ಪಿಸುವ ಉದ್ದೇಶದಿಂದ 30 ವರ್ಷಗಳ ಹಿಂದೆ ಆರಂಭವಾದ ಗಂಡೋರಿ ನಾಲಾ ಯೋಜನೆಯು ಇಂದಿಗೂ ರೈತರ ಹೊಲಗಳಿಗೆ ನೀರುಣಿಸಲು ಯಶಸ್ವಿಯಾಗದೆ ಪರದಾಡುತ್ತಿದೆ.

ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮಹಾಗಾಂವ ಸಮೀಪ ನಿರ್ಮಿಸಿರುವ ಗಂಡೋರಿ ನಾಲಾ ಅಣೆಕಟ್ಟಿನಲ್ಲಿ ಸಂಗ್ರಹಿಸಿದ ನೀರನ್ನು ಕಮಲಾ‍ಪುರ, ಕಾಳಗಿ, ಚಿತ್ತಾಪುರ ತಾಲ್ಲೂಕಿನ ರೈತರ ಹೊಲಗಳಿಗೆ ಸಾಗಿಸಲು 2002ರಲ್ಲಿ 60 ಕಿ.ಮೀ. ವಿಸ್ತೀರ್ಣದ ಗಂಡೋರಿ ಎಡದಂಡೆ ಕಾಲುವೆ ಹಾಗೂ 7 ಕಿ.ಮೀ. ವಿಸ್ತೀರ್ಣದ ಬಲದಂಡೆ ಕಾಲುವೆಯನ್ನು ನಿರ್ಮಿಸಲಾಗಿತ್ತು.

ಮುಖ್ಯ ಕಾಲುವೆಗೆ ಹೊಂದಿಕೊಂಡಂತೆ ಅಲ್ಲಲ್ಲಿ ವಿತರಣಾ ಕಾಲುವೆಗಳನ್ನು ಕರ್ನಾಟಕ ನೀರಾವರಿ ನಿಗಮವು (ಕೆಎನ್‌ಎನ್‌ಎಲ್‌) ನಿರ್ಮಿಸಿದೆ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಕಾಲುವೆಯಲ್ಲಿ ನೀರು ಹರಿಯುವ ಯಾವುದೇ ಲಕ್ಷಣಗಳು ಕಾಣುವುದಿಲ್ಲ. ಮುಖ್ಯಕಾಲುವೆ ಪಕ್ಕದ ಮಧ್ಯ ಭಾಗದಲ್ಲಿ ವಿತರಣಾ ಕಾಲುವೆಗೆ ನೀರು ಹರಿಸಲು ವಾಲ್ವ್‌ಗಳನ್ನು ನಿರ್ಮಿಸಲಾಗಿದೆ. ಆದರೆ, ವಿತರಣಾ ಕಾಲುವೆಯು ವಾಲ್ವ್‌ಗಿಂತ ಎತ್ತರ ಭಾಗದಲ್ಲಿರುವುದರಿಂದ ನೀರು ಎಂದಿಗೂ ರೈತರ ಹೊಲಕ್ಕೆ ಹರಿಯುವುದಿಲ್ಲ ಎಂದು ರೈತರು ಆರೋಪಿಸುತ್ತಾರೆ. 

ಗಂಡೋರಿ ನಾಲಾದ ಬಲದಂಡೆ ಕಾಲುವೆಗುಂಟ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಇಂತಹ ಎರಡು ವಾಲ್ವ್‌ಗಳಿಗೆ ಹೊಂದಿಕೊಂಡ ವಿತರಣಾ ಕಾಲುವೆಗಳು ಮೂಲ ಸ್ವರೂಪವನ್ನೇ ಕಳೆದುಕೊಂಡು ರೈತರು ತಮ್ಮ ಹೊಲದ ಬೋರ್‌ವೆಲ್‌ನಿಂದ ಹರಿಸಲು ನಿರ್ಮಿಸಿದ ಕಚ್ಚಾ ಕಾಲುವೆಗಳಂತೆ ಕಂಡು ಬಂದವು. ಆ ಕಾಲುವೆಯಲ್ಲಿ ನೀರು ಹರಿಸುವ ಭರವಸೆಯನ್ನೇ ಕಳೆದುಕೊಂಡಿದ್ದರಿಂದ ಕೆಲ ರೈತರು ಕಾಲುವೆಗೆ ಮುಳ್ಳು ಕಂಟಿ ಹಾಕಿ ಮುಚ್ಚಿದ್ದಾರೆ.

2017ರಲ್ಲಿ ₹ 167 ಕೋಟಿ ವೆಚ್ಚದಲ್ಲಿ ಕಾಲುವೆಯ ನವೀಕರಣ ಮತ್ತು ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. 2020ರಲ್ಲಿ ಕಾಮಗಾರಿ ಮುಕ್ತಾಯವಾಯಿತಾದರೂ ಅಲ್ಲಿ ಯಾವುದೇ ಕೆಲಸಗಳು ನಡೆದ ಕುರುಹುಗಳೂ ಕಾಣುತ್ತಿಲ್ಲ. ಆಗಲೇ ವಿತರಣಾ ಕಾಲುವೆಗಳಿಗೆ ಸಿಮೆಂಟ್ ಕಾಂಕ್ರೀಟ್ ಹಾಕಿ ರೈತರ ಹೊಲಗಳಿಗೆ ಸಮರ್ಪಕವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಭ್ರಷ್ಟತೆ, ಉದಾಸೀನ ಪ್ರವೃತ್ತಿ ರೂಢಿಸಿಕೊಂಡಿರುವ ಎಂಜಿನಿಯರ್‌ಗಳಿಂದಾಗಿ ಯಾವುದೇ ಆಧುನಿಕರಣ ಕೆಲಸ ಆಗಿಲ್ಲ ಎನ್ನುತ್ತಾರೆ ಗಂಡೋರಿ ನಾಲಾ ಕಾಲುವೆ ಆಧುನಿಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿರುವ ಮಹಾಗಾಂವ ಗ್ರಾಮದ ಯುವ ಮುಖಂಡ ವಿಶ್ವನಾಥ ತಡಕಲ್.

ಕಮಲಾಪುರ ತಾಲ್ಲೂಕಿನ ಹರಕಂಚಿ ಗ್ರಾಮದ ಬಳಿ ನಿರ್ಮಿಸಿರುವ ವಿತರಣಾ ಕಾಲುವೆ ತನ್ನ ಮೂಲಸ್ವರೂಪ ಕಳೆದುಕೊಂಡಿರುವುದು
–ಪ್ರಜಾವಾಣಿ ಚಿತ್ರಗಳು
ಕಮಲಾಪುರ ತಾಲ್ಲೂಕಿನ ಹರಕಂಚಿ ಗ್ರಾಮದ ಬಳಿ ನಿರ್ಮಿಸಿರುವ ವಿತರಣಾ ಕಾಲುವೆ ತನ್ನ ಮೂಲಸ್ವರೂಪ ಕಳೆದುಕೊಂಡಿರುವುದು –ಪ್ರಜಾವಾಣಿ ಚಿತ್ರಗಳು

ಕಾಲುವೆ ಅಕ್ರಮದಲ್ಲಿ ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರೂ ಶಾಮೀಲಾಗಿರುವ ಆರೋಪಗಳಿದ್ದು ಲೋಕಾಯುಕ್ತರು ಈ ಕುರಿತೂ ತನಿಖೆ ನಡೆಸಬೇಕು

–ವಿಶ್ವನಾಥ ತಡಕಲ್ ದೂರುದಾರ ಮಹಾಗಾಂವ

ಗಂಡೋರಿ ನಾಲೆ ನಿರ್ಮಾಣವಾದ ಬಳಿಕ ನಮ್ಮ ಹೊಲಗಳಿಗೆ ಒಮ್ಮೆಯೂ ನೀರು ಹರಿದಿಲ್ಲ. ಈಗಲಾದರೂ ನೀರು ಹರಿಸಿದರೆ ಒಂದಷ್ಟು ಕೊಳವೆಬಾವಿ ಮರುಪೂರಣಗೊಂಡು ಬೆಳೆ ರಕ್ಷಿಸಿಕೊಳ್ಳಬಹುದು

ಚಂದ್ರಶೇಖರ ರೈತ ಹರಕಂಚಿ ಗ್ರಾಮ

ಥರ್ಡ್ ಪಾರ್ಟಿ ಪರಿಶೀಲನೆಗೂ ಅಡ್ಡಗಾಲು!

ಸರ್ಕಾರದ ಯಾವುದೇ ಕಾಮಗಾರಿ ಪೂರ್ಣಗೊಂಡ ಬಳಿಕ ಅದನ್ನು ಪರಿಶೀಲನೆ ನಡೆಸಿ ವರದಿ ನೀಡಲು ಸಂಬಂಧಪಟ್ಟ ಇಲಾಖೆ ಥರ್ಡ್ ಪಾರ್ಟಿ ಪರಿಶೀಲನೆ ನಡೆಸಬೇಕು. ಆದರೆ ನೂರಾರು ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಗಂಡೋರಿ ನಾಲಾ ಕಾಲುವೆ ಆಧುನಿಕರಣ ಕಾಮಗಾರಿಯನ್ನು ಥರ್ಡ್ ಪಾರ್ಟಿ ಪರಿಶೀಲನೆ ನಡೆಸಲು ಅಧಿಕಾರಿಗಳು ಸಮ್ಮತಿಸಿರಲಿಲ್ಲ ಎಂದು ಆರೋಪಿಸುತ್ತಾರೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಲೋಕಾಯುಕ್ತರಿಗೆ ದೂರು ನೀಡಿರುವ ವಿಶ್ವನಾಥ ತಡಕಲ್. ಅನಿವಾರ್ಯವಾಗಿ ಕೊನೆಗೆ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್‌ಗೆ ನೀಡಲಾಯಿತು. ಗುಣ ನಿಯಂತ್ರಣ ಮಾಡಬೇಕಾದ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ತಡಕಲ್.

ಹುಸಿಯಾದ ಕಾರಜೋಳ ಭರವಸೆ

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಕಾಮಗಾರಿಯಲ್ಲಿ ಅಕ್ರಮಗಳ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ 2021ರ ಸೆಪ್ಟೆಂಬರ್ 30ರಂದು ಗಂಡೋರಿ ನಾಲಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರೈತರು ‘ಗಂಡೋರಿ ನಾಲಾದಿಂದ ಕಾಲುವೆಯ ಟೇಲ್ ಎಂಡ್‌ವರೆಗೆ ನೀರು ಹರಿಯುವುದಿಲ್ಲ. ಇದಕ್ಕೆ ಕಾಲುವೆಯ ಕಳಪೆ ಕಾಮಗಾರಿಯೂ ಕಾರಣ’ ಎಂದು ದೂರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕಾರಜೋಳ ಈ ಬಗ್ಗೆ ಮುಖ್ಯ ಎಂಜಿನಿಯರ್ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ವರದಿ ನೀಡುವಂತೆ ಸೂಚನೆ ನೀಡಿದ್ದರು. ಆದರೆ ಆ ನಂತರ ಯಾವುದೇ ಕ್ರಮವಾಗಲಿಲ್ಲ. ಗಂಡೋರಿ ನಾಲಾ ನಂಬಿಕೊಂಡ ರೈತರ ಸಂಕಟ ಮುಂದುವರೆದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT