ಕಲಬುರಗಿ: ‘ಯುವ ಪೀಳಿಗೆಗೆ ಸಂಸ್ಕಾರ ಬಹಳ ಅವಶ್ಯಕವಾಗಿದೆ. ಮನುಷ್ಯ ಮನುಷ್ಯತ್ವದಿಂದ ಬದುಕಬೇಕಾದರೆ ಆಧ್ಯಾತ್ಮಿಕ ಪ್ರವಚನವನ್ನು ಆಲಿಸಬೇಕು. ಸಂಸ್ಕಾರ ನೀಡುವಲ್ಲಿ ಪುರಾಣ ಪ್ರವಚನಗಳ ಪಾತ್ರ ಬಹು ದೊಡ್ಡದು’ ಎಂದು ಚಿಣಮಗೇರಾ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರು ನುಡಿದರು.
ಜಿಲ್ಲೆಯ ಕಮಲಾಪುರ ತಾಲ್ಲೂಕಿನ ವಿಕೆ ಸಲಗರ ಗ್ರಾಮದ ಮಹಾಂತೇಶ್ವರ ಮಠದಲ್ಲಿ ಶ್ರಾವಣ ಮಾಸ ಮುಕ್ತಾಯ ಅಂಗವಾಗಿ ಹಮ್ಮಿಕೊಂಡಿದ್ದ ಕಡಕೋಳ ಮಡಿವಾಳೇಶ್ವರ ಪುರಾಣ ಮಹಾಮಂಗಲೋತ್ಸವ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನರೋಣಾದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ‘ಗುರು– ಶಿಷ್ಯರ ಸಂಬಂಧ ಬಹಳ ಪುರಾತನವಾದದ್ದು. ಮಹಾಂತ ಮತ್ತು ಕಡಕೋಳದ ಮಡಿವಾಳಪ್ಪ ಗುರು ಶಿಷ್ಯರು ಈ ಜಗತ್ತಿಗೆ ಅದ್ಭುತವಾದ ಸಂದೇಶವನ್ನು ಸಾರಿದ್ದಾರೆ’ ಎಂದರು.
ಪ್ರವಚನಕಾರ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿ ಮಾತನಾಡಿ, ‘ಕಲ್ಯಾಣ ಕರ್ನಾಟಕದ ತತ್ವಪದ ಹರಿಕಾರ 18ನೇ ಶತಮಾನದ ಕೊನೆಯ ಭಾಗದಲ್ಲಿ ಬದುಕಿದ ಕಡಕೋಳದ ಮಡಿವಾಳಪ್ಪನವರು ತಮ್ಮ ತತ್ವಪದಗಳ ಮುಖಾಂತರ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದಾರೆ’ ಎಂದು ತಿಳಿಸಿದರು.
ಸಾಹಿತಿಗಳಾದ ಕರುಣದೇವ ಸಲಗರ, ಕಲಾವಿದ ಸಂತೋಷಕುಮಾರ ಸಿಂದಗಿ, ತಬಲಾ ವಾದಕ ವೀರೇಶ ಹಿರೇಜೇವರ್ಗಿ, ಮಹಾಂತೇಶ್ವರ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.