ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ‘ಕೊರತೆ’ಗಳ ಸುಳಿಯಲ್ಲಿ ಪಿಯು ಕಾಲೇಜು

Published 18 ಜೂನ್ 2024, 6:18 IST
Last Updated 18 ಜೂನ್ 2024, 6:18 IST
ಅಕ್ಷರ ಗಾತ್ರ

ಕಲಬುರಗಿ: ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಡೆಸ್ಕ್‌ಗಳ ಕೊರತೆ, ಸುಣ್ಣ ಬಣ್ಣ ಕಾಣದ ಗೋಡೆಗಳು, ಮುರಿದ ಕಿಟಕಿಗಳು, ತುಕ್ಕು ಹಿಡಿದಿರುವ ಪ್ರವೇಶ ದ್ವಾರದ ಗೇಟ್‌, ಸ್ವಚ್ಛತೆ ಕಾಣದ ತರಗತಿ ಕೋಣೆಗಳು ಮತ್ತು ಹಿಂಬದಿಯ ಪರಿಸರ, ಮಳೆಗೆ ಸೋರುವ ಕೋಣೆಗಳು, ವಿದ್ಯುತ್ ಬೆಳಕಿಗಾಗಿ ಕಾಯುತ್ತಿರುವ ಕೊಠಡಿಗಳು, ಗಿಡ–ಗಂಟಿಗಳಿಂದ ಆವೃತವಾದ ಕ್ಯಾಂಪಸ್...

ಹೀಗೆ ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕಲಿಯಬೇಕು ಎಂಬ ಆಸೆಯನ್ನೇ ಕಮರುವಂತೆ ಮಾಡುತ್ತಿವೆ. ಪೂರ್ಣಪ್ರಮಾಣದ ಬೋಧಕ ಸಿಬ್ಬಂದಿ ಹಾಗೂ ‘ಡಿ’ ದರ್ಜೆ ನೌಕರರ ಕೊರತೆಯೂ ಕಾಲೇಜು ಪ್ರಾಂಶುಪಾಲರನ್ನು ಬಹುವಾಗಿ ಕಾಡುತ್ತಿದೆ.

ವಿಭಾಗೀಯ ಕೇಂದ್ರವಾದ ಕಲಬುರಗಿ ಜಿಲ್ಲೆಯಾದ್ಯಂತ 50 ಸರ್ಕಾರಿ ಪಿಯು ಕಾಲೇಜು, 29 ಅನುದಾನಿತ ಹಾಗೂ 180 ಖಾಸಗಿ ಸೇರಿ ಒಟ್ಟು 259 ಕಾಲೇಜುಗಳಿವೆ. ಪ್ರತಿ ವರ್ಷ ಸುಮಾರು 29 ಸಾವಿರ ವಿದ್ಯಾರ್ಥಿಗಳು ಪಿಯುಸಿ ಪ್ರವೇಶ ಪಡೆಯುತ್ತಾರೆ. ಖಾಸಗಿ ಕಾಲೇಜುಗಳಲ್ಲಿನ ಹೆಚ್ಚುವರಿ ಶುಲ್ಕ ಭರಿಸಲಾಗದೇ, ಸುಮಾರು 7,000ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳತ್ತ ಮುಖ ಮಾಡುತ್ತಾರೆ. ಅಲ್ಲಿ ಅವರಿಗೆ ಉಪನ್ಯಾಸಕರಿಂದ ಹಿಡಿದು ಶೌಚಾಲಯದವರೆಗಿನ ಸಮಸ್ಯೆಗಳು ಕಾಡುತ್ತಿವೆ.

1933ಕ್ಕೂ ಮುನ್ನ ನಗರದ ಸೂಪರ್ ಮಾರ್ಕೆಟ್‌ನಲ್ಲಿ ಶಾಲೆ ಮತ್ತು ಕಾಲೇಜು ಶಿಕ್ಷಣ ಒಳಗೊಂಡ ಮಲ್ಟಿಪರ್ಪಸ್ ಹೈಸ್ಕೂಲ್‌ (ಎಂಪಿಎಚ್‌ಎಸ್) ಆರಂಭವಾಗಿತ್ತು. ಶತಮಾನದ ಸಂಭ್ರಮಕ್ಕೆ ಸಿದ್ಧವಾಗಬೇಕಾದ ಎಂಪಿಎಚ್‌ಎಸ್‌ನ ಹಳೆಯ ಕಟ್ಟಡ ಬೀಳುವ ಹಂತ ತಲುಪಿದೆ.

ಕಟ್ಟಡದ ಸಿಮೆಂಟ್ ಶೀಟ್‌ಗಳು ಸೀಳಿದ್ದು, ಸಣ್ಣ ಮಳೆಗೆ ಸೋರುತ್ತವೆ. ಕಟ್ಟಡದ ನಡುವಿನ ಆವರಣ ಹಾಗೂ ಕ್ಯಾಂಪಸ್ ತುಂಬೆಲ್ಲ ಗಿಡ–ಗಂಟಿಗಳು ಬೆಳೆದಿವೆ. ಎಂಟು ವರ್ಷಗಳ ಹಿಂದೆಯಷ್ಟೇ ₹50 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡದ ಟೈಲ್ಸ್‌ ಬಿರುಕು ಬಿಟ್ಟಿವೆ. ಸರಿಯಾದ ನಿರ್ವಹಣೆ ಇಲ್ಲದೆ ಕಸದ ತೊಟ್ಟಿಯಂತೆ ಆಗಿದೆ.

ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕುಳಿತುಕೊಂಡು ಊಟ ಮಾಡುವಂತಹ ಸುಸಜ್ಜಿತವಾದ ಆವರಣ ಮತ್ತು ಕಾಲೇಜಿಗೆ ರಾತ್ರಿ ಭದ್ರತೆ ಇಲ್ಲ. ಆದರ್ಶ ನಗರದ ಪಿಯು ಕಾಲೇಜಿಗೆ ಉತ್ತಮ ಕಟ್ಟಡ ಇದ್ದರೂ ಅದರ ನಿರ್ವಹಣೆ ಹಾಗೂ ಭದ್ರತೆಗೆ ಸಿಬ್ಬಂದಿಯೇ ಇಲ್ಲ. ಜೇವರ್ಗಿ ಕಾಲೊನಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೋಣೆಗಳೇ ಇಲ್ಲ. ಹೀಗೆ, ಒಂದಲ್ಲಾ ಒಂದು ಇಲ್ಲಗಳ ನಡುವೆ ಸರ್ಕಾರಿ ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.

400 ಮಂದಿಗೆ ಒಂದೇ ಶೌಚಾಲಯ!

ಸ್ಟೇಷನ್ ಬಜಾರ್‌ನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 400 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯವಿದೆ. ಎರಡು ಶೌಚಾಲಯಗಳ ಪೈಕಿ ಒಂದು ಬಹುತೇಕ ಸ್ಥಗಿತವಾಗಿದೆ. ಇದರ ಜತೆಗೆ ಕಾಂಪೌಂಡ್‌ ಇಲ್ಲದೆ ಕ್ಯಾಂಪಸ್, ಸುಣ್ಣ ಬಣ್ಣ ಕಾಣದ ಗೋಡೆಗಳು, ಧೂಳು ಹಿಡಿದ ಪ್ರಯೋಗಾಲಯ ಕೋಣೆಗಳು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

‘ಮೂಲಸೌಕರ್ಯ ಒದಗಿಸುವಂತೆ ಜನಪ್ರತಿನಿಧಿಗಳಿಗೆ ಪತ್ರ ಬರೆದು, ಮೇಲಾಧಿಕಾರಿಗಳ ಕಚೇರಿಗೆ ಅಲೆದು ಚಪ್ಪಲಿ ಸವೆದರೂ ಸುಧಾರಣೆ ಭಾಗ್ಯ ಸಿಗಲಿಲ್ಲ’ ಎನ್ನುತ್ತಾರೆ ಸಿಬ್ಬಂದಿ.

ಸಿಬ್ಬಂದಿ ಕೊರತೆ ಭಾರ

ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಪೈಕಿ ವಿಜ್ಞಾನದ ಕಠಿಣ ವಿಷಯಗಳನ್ನು ಕಲಿಸಲು ಕಾಯಂ ಉಪನ್ಯಾಸಕರ ಕೊರತೆ ಹೆಚ್ಚಾಗಿದೆ. ಅತಿಥಿ ಉಪನ್ಯಾಸಕರಿಂದ ಗುಣಮಟ್ಟದ ಬೋಧನೆ ಸಿಗುತ್ತಿಲ್ಲ ಎಂಬ ಬೇಸರ ಪೋಷಕರದ್ದು. ಮಂಜೂರಾದ 489 ಉಪನ್ಯಾಸಕರ ಹುದ್ದೆಗಳ ಪೈಕಿ 353 ಕಾಯಂ ಉಪನ್ಯಾಸಕರಿದ್ದು, 136 ಹುದ್ದೆಗಳು ಖಾಲಿ ಇವೆ. ಪ್ರಾಚಾರ್ಯರ 20 ಹುದ್ದೆಗಳು ಸಹ ಭರ್ತಿಗಾಗಿ ಕಾಯುತ್ತಿವೆ.

50 ಕಾಲೇಜುಗಳ ಪೈಕಿ ಕೇವಲ 4 ಕಾಲೇಜುಗಳಲ್ಲಿ ‘ಡಿ’ ಗ್ರೂಪ್‌ ನೌಕರರು ಇದ್ದಾರೆ. ಕಾಲೇಜಿನ ಸ್ವಚ್ಛತೆ, ಹಾಜರಾತಿ ಪುಸ್ತಕಗಳ ಬರಹ, ಕಚೇರಿಯ ಕಡತಗಳ ಕೆಲಸವನ್ನು ಉಪನ್ಯಾಸಕರೇ ಮಾಡುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT