ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ-ಸೇಡಂ ಸಂಪರ್ಕ ಕಡಿತ; 24ಮನೆಗಳಿಗೆ ಹಾನಿ

ಮಂಗಲಗಿ ಹರಿಜನವಾಡದ 100ಕ್ಕೂ ಹೆಚ್ಚು ಮನೆಗಳ ಜನ ತತ್ತರ
Published 20 ಜುಲೈ 2023, 14:19 IST
Last Updated 20 ಜುಲೈ 2023, 14:19 IST
ಅಕ್ಷರ ಗಾತ್ರ

ಕಾಳಗಿ: ತಾಲ್ಲೂಕಿನಾದ್ಯಂತ ಗುರುವಾರ ಇಡಿ ದಿನ ಬಿರುಸುಗೊಂಡ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಬುಧವಾರ ರಾತ್ರಿ ಆರಂಭವಾದ ಮಳೆ ಗುರುವಾರ ರಾತ್ರಿವರೆಗೂ ಒಂದೇ ಸಮಾನಾಗಿ ಧರೆಗಿಳಿದಿದೆ. ಜನ, ಜಾನುವಾರು ಹೊರಗೆ ಓಡಾಡದಂತೆ ತಡೆ ಒಡ್ಡಿದೆ. ಹೊಲಗದ್ದೆಗಳಲ್ಲಿ ನೀರು ಹರಿದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಎಂದಿನಂತೆ ಶಾಲೆಗಳಿಗೆ ತೆರಳಿದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸೇಡಂ ಉಪವಿಭಾಗಾಧಿಕಾರಿ ರಜೆ ಘೋಷಣೆ ಮಾಡಿದ ವಿಷಯ ತಡವಾಗಿ ಗೊತ್ತಾಗಿ ಅವರು ಮಳೆಯಲ್ಲೆ ಮನೆಗೆ ಹಿಂದಿರುಗಿದ ಘಟನೆ ಜರುಗಿತು. ಪ್ರಯಾಣಿಕರ ಕೊರತೆಗೆ ಬಸ್ಸುಗಳು ಖಾಲಿ ಖಾಲಿಯಾಗಿ ಸಂಚರಿಸಿದ್ದು ಕಂಡುಬಂತು.

ಗುರುವಾರ ಸರ್ಕಾರಿ ಕಚೇರಿ, ಬ್ಯಾಂಕ್‍ಗಳು ಜನರಿಲ್ಲದೆ ಬಣಗುಟ್ಟಿದವು. ಮಳೆ ನೀರಿನ ರಭಸಕ್ಕೆ ಮಂಗಲಗಿ ಬಳಿಯ ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ-149 ಕಿರುಸೇತುವೆ ಮೇಲಿಂದ ನೀರು ಹರಿದು ಕಾಳಗಿ-ಸೇಡಂ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಮಂಗಲಗಿ ಗ್ರಾಮದ ಜನರು ಹರಿಜನವಾಡಕ್ಕೆ ಹೋಗದಂತೆ ಮತ್ತು ಹರಿಜನವಾಡದ 100ಕ್ಕೂ ಹೆಚ್ಚು ಮನೆಗಳ ಜನರು ಮಂಗಲಗಿ ಗ್ರಾಮಕ್ಕೆ ಬರದಂತೆ ನೀರು ತಡೆಯೊಡ್ಡಿದೆ.

ಕಾಳಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ರಾಜ್ಯಹೆದ್ದಾರಿ-149ರಲ್ಲಿ ಮಳೆನೀರು ಸಂಗ್ರಹವಾಗಿ ಸುಗೂರ ರಸ್ತೆ ಮಾರ್ಗದ ಸಂಪರ್ಕಕ್ಕೆ ಅಡಚಣೆ ಉಂಟುಮಾಡಿತು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಧಾವಿಸಿ ನೀರು ತೆರವುಗೊಳಿಸಿ ಸಂಚಾರಕ್ಕೆ ಹೆದ್ದಾರಿ ಮುಕ್ತಗೊಳಿಸಿದರು. ಮೊಹರಂ ಹಬ್ಬ ಆರಂಭವಾಗಿದ್ದರಿಂದ ಶಹಾಹುಸೇನ್ ಸಾಬ ಪೀರ ಪ್ರತಿಷ್ಠಾನಕ್ಕೆ ಸಂಬಂಧಿತರು ಸಂಜೆ ಮಳೆಯಲ್ಲೆ ದರ್ಗಾಕ್ಕೆ ತೆರಳಿದರು.

ಗುರುವಾರ ಬೆಳಗಿನಜಾವ ಕಾಳಗಿ-40.2ಮಿ.ಮೀ, ಹೇರೂರ ಕೆ.-45.4ಮಿ.ಮೀ, ಕೋಡ್ಲಿ-42.4ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ. ಪ್ರಸ್ತುತ ಮುಂಗಾರು ಆರಂಭದಿಂದ ಇಲ್ಲಿವರೆಗೆ ಒಟ್ಟು 24ಮನೆಗಳು ಬಿದ್ದಿವೆ, ಯಾವುದೇ ಜೀವಹಾನಿ ಸಂಭವಿಸಿರುವುದಿಲ್ಲ ಎಂದು ಅಧಿಕಾರಿ ನಾಗನಾಥ ತರಗೆ ತಿಳಿಸಿದ್ದಾರೆ.

ಕಾಳಗಿ ತಾಲ್ಲೂಕಿನ ಮಂಗಲಗಿ ಬಳಿ ಹಾದುಹೋಗುವ ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ-149 ಕಿರುಸೇತುವೆ ಮೇಲೆ ಗುರುವಾರ ಮಳೆ ನೀರು ಹರಿದು ಸೇಡಂ ರಸ್ತೆ ಸಂಪರ್ಕ ಕಡಿತಗೊಂಡಿತ್ತು
ಕಾಳಗಿ ತಾಲ್ಲೂಕಿನ ಮಂಗಲಗಿ ಬಳಿ ಹಾದುಹೋಗುವ ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ-149 ಕಿರುಸೇತುವೆ ಮೇಲೆ ಗುರುವಾರ ಮಳೆ ನೀರು ಹರಿದು ಸೇಡಂ ರಸ್ತೆ ಸಂಪರ್ಕ ಕಡಿತಗೊಂಡಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT