ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್

Published 24 ಜೂನ್ 2024, 5:12 IST
Last Updated 24 ಜೂನ್ 2024, 5:12 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೋಮವಾರ ಬೆಳಿಗ್ಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದು, ಪೊಲೀಸ್ ಅಧಿಕಾರಿಗಳಿಂದ ತಪಾಸಣೆ ನಡೆಸಲಾಗಿದೆ.

ವಿಮಾನ ನಿಲ್ದಾಣದ ಕಟ್ಟಡದಲ್ಲಿ ಬಾಂಬ್ ಇರಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ್ ಅವರಿಗೆ ಇ- ಮೇಲ್ ಬಂದಿದೆ. ತಕ್ಷಣವೇ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ, ಶ್ವಾನದಳ ತಪಾಸಣೆ ನಡೆಸಿದರು. ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಂದಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇತರೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೆಳಗೆ ಇಳಿಸದೆ ತಪಾಸಣೆ ಮಾಡಲಾಯಿತು. ಆ ಬಳಿಕ ಪ್ರಯಾಣಿಕರು ಕೆಳಗೆ ಇಳಿದರು. ಶ್ವಾನದಳ, ಹೆಚ್ಚಿನ ಪೊಲೀಸರ ನಿಯೋಜನೆ, ಬ್ಯಾಗ್‌ಗಳ ತಪಾಸಣೆಯಿಂದಾಗಿ ನಿಲ್ದಾಣದಲ್ಲಿನ ಪ್ರಯಾಣಿಕರಲ್ಲಿ ಆತಂಕ ಕಂಡುಬಂತು.

'ಬೆಳಿಗ್ಗೆ 7ರ ಸುಮಾರಿಗೆ ನನ್ನ ಇ-ಮೇಲ್ ಐಡಿಗೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸಂದೇಶವೊಂದು ಅನಾಮಧೇಯ ವ್ಯಕ್ತಿಯಿಂದ ಬಂದಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರು ನಿಲ್ದಾಣಕ್ಕೆ ಬಂದು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು. ಪ್ರಯಾಣಿಕರ ಬ್ಯಾಗ್‌ಗಳ ತಪಾಸಣೆಯೂ ಮಾಡಿದರು. ಯಾವುದೇ ಸ್ಪೋಟಕ ವಸ್ತು ಕಂಡುಬಂದಿಲ್ಲ' ಎಂದು ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ್ 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT