ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಒದಗಿಸುತ್ತಾರಾ ಜಿಲ್ಲಾಧಿಕಾರಿ?

ವಸತಿ ಯೋಜನೆ ಫಲಾನುಭವಿಗಳಿಗೆ ಬಾರದ ಹಣ, ಹಕ್ಕುಪತ್ರ, ಒತ್ತುವರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ರೈತರು
Last Updated 20 ಫೆಬ್ರುವರಿ 2021, 6:16 IST
ಅಕ್ಷರ ಗಾತ್ರ

ಕುಂಚಾವರಂ (ಚಿಂಚೋಳಿ): ತಾಲ್ಲೂಕು ಕೇಂದ್ರ ಚಿಂಚೋಳಿಯಿಂದ 30 ಕಿ.ಮೀ ದೂರ ಇರುವ ಕುಂಚಾವರಂ ಗ್ರಾಮಸ್ಥರು ಇನ್ನೂ ಮೂಲಸೌಕರ್ಯಗಳಿಲ್ಲದೇ ಪರದಾಡುವ ಸ್ಥಿತಿ ಇದೆ. ಫೆ. 21ರಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡುತ್ತಿರುವುದರಿಂದ, ಈ ಗಡಿ ಗ್ರಾಮದಲ್ಲಿ ಈಗ ಹೊಸ ನಿರೀಕ್ಷೆಗಳು ಮೂಡಿವೆ.

5 ಸಾವಿರ ಜನಸಂಖ್ಯೆ ಇರುವ ಈ ಉರಿನಲ್ಲಿ ಕನ್ನಡ, ತೆಲಗು ಭಾಷೆ ಬಳಕೆಯಿದೆ.ಜನರು ಅಗತ್ಯ ವಸ್ತುಗಳಿಗಾಗಿ ಸಮೀಪದ ತೆಲಂಗಾಣದ ಜಹೀರಾಬಾದ್‌ಗೆ ತೆರಳುತ್ತಾರೆ.

ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಜೆಸ್ಕಾಂನ 33 ಕೆವಿ ವಿದ್ಯುತ್ ಉಪ ಕೇಂದ್ರ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಅಂಚೆ ಕಚೇರಿ, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿನಿಲಯ, ಪೊಲೀಸ್ ಠಾಣೆ ಮೊದಲಾದ ಸರ್ಕಾರಿ ಕಚೇರಿಗಳನ್ನು ಈ ಗ್ರಾಮ ಹೊಂದಿದೆ. ಬಸ್‌ ನಿಲ್ದಾಣ ಕಟ್ಟಡ ಚೆನ್ನಾಗಿದ್ದರೂ ನಿರ್ವಹಣೆ ಇಲ್ಲದೇ ಪಾಳುಬಿದ್ದಿದೆ. ಕಸ ಗುಡಿಸುವವರು, ಸ್ವಚ್ಛತಾ ನಿರ್ವಹಣೆ ಮಾಡುವವರು ಇಲ್ಲ.

ಇಲ್ಲಿಯ ಸರ್ಕಾರಿ ಪ್ರೌಢಶಾಲೆಯ ಎದುರಿನ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳಿಲ್ಲ. ನಾಲ್ಕು ದಶಕಗಳಿಂದ ಜನರು ಸಮಸ್ಯೆಗಳನ್ನು ಹಾಸಿ ಹೊದ್ದುಕೊಂಡು ಜೀವನ ನಡೆಸುತ್ತಿದ್ದಾರೆ. ರಸ್ತೆಗಾಗಿ ಮೀಸಲಿರಿಸಿದ ಜಾಗ ಒತ್ತುವರಿ ಮಾಡಿದ್ದರಿಂದ ಸಿ.ಸಿ ರಸ್ತೆಗೆ ಅವಕಾಶವೇ ಇಲ್ಲ.

ಕುಂಚಾವರಂ ಸುತ್ತಲಿನ ಭಾಗದಲ್ಲಿ ಕೆಲ ರೈತರು ಉಪಜೀವನಕ್ಕಾಗಿ ಅರಣ್ಯ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದರೂ ಸಕ್ರಮಗೊಂಡಿಲ್ಲ. ಈ ಸಮಸ್ಯೆ ನೀಗುವುದು ಯಾವಾಗ ಎಂಬ ಪ್ರಶ್ನೆ ಅರಣ್ಯ ಭೂಮಿ ಅವಲಂಬಿಸಿದ ರೈತರನ್ನು ಕಾಡುತ್ತಿದೆ.

ವಲಸೆ: ಕುಂಚಾವರಂ ಸೇರಿದಂತೆ ಸುತ್ತಲಿನ ಗ್ರಾಮಗಳ ಜನ ಉದ್ಯೋಗ ಅರಸಿ ದೂರದ ಮುಂಬಯಿ, ಹೈದರಾಬಾದ್ ಮತ್ತು ಸಂಗರೆಡ್ಡಿ, ರಾಜಮಂಡ್ರಿ ಮೊದಲಾದ ಕಡೆ ಗುಳೆ ಹೋಗುವುದು ಇನ್ನೂ ನಿಂತಿಲ್ಲ. ಉದ್ಯೋಗ ಖಾತ್ರಿಯನ್ನು ಪರಿಣಾಮಕಾರಿ ಆಗಿ ಜಾರಿಗೊಳಿಸಿದರೆ ವಲಸೆ ಹೋಗುವುದು ನಿಲ್ಲುತ್ತದೆ ಎಂಬುದು ಜನರ ಕೋರಿಕೆ.

ಗಡಿ ವಿವಾದಕ್ಕಿಲ್ಲ ಪರಿಹಾರ: ಕುಂಚಾವರಂ ಸುತ್ತಲೂ ಕರ್ನಾಟಕ– ತೆಲಂಗಾಣ ಗಡಿ ಇದೆ. ಸಂಗಾಪುರದ ಕಾಟನಗಿಡ್ಡಾ ಸುತ್ತಲೂ ತೆಲಂಗಾಣದ ಜನ ಅರಣ್ಯ ಒತ್ತುವರಿ ಮಾಡಿಕೊಂಡಿದ್ದು, ಕರ್ನಾಟಕ ಗಡಿಯ ಕಲ್ಲುಗಳನ್ನು ಕಿತ್ತುಹಾಕಿದ್ದಾರೆ. ಶಿವರಾಂಪುರದಲ್ಲಿಯೂ ಈ ಸಮಸ್ಯೆ ಇದ್ದು, ಶಾದಿಪುರದಲ್ಲಿ ಕಂದಾಯ ಜಮೀನಿನ ಗಡಿ ವಿವಾದ ಉಭಯ ರಾಜ್ಯಗಳ ಮಧ್ಯೆ ಇದೆ. ಆದರೆ, ಕರ್ನಾಟಕದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದಕ್ಕೆ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಜನ.

ಶೇರಿಭಿಕನಳ್ಳಿ: ಕುಂಚಾವರಂ ಕಾಡಿನಲ್ಲಿಯೇ ಬರುವ ಶೇರಿಭಿಕನಳ್ಳಿಯಲ್ಲಿ 40 ಕುಟುಂಬಗಳು ವಾಸವಾಗಿವೆ. ಅಲ್ಲಿ ಕನಿಷ್ಠ ನಾಗರಿಕ ಸೌಕರ್ಯಗಳೂ ಇಲ್ಲದ ಕಾರಣ ಸ್ಥಳಾಂತರಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ ಲೈಫ್‌ಡೌನ್‌ ಕತೆಗಳು ಸರಣಿಯಲ್ಲಿ ಬೆಳಕು ಚೆಲ್ಲಿತ್ತು. ಬಳಿಕ ಒಂದೆರಡು ಬಾರಿ ಬಂದು ಸಮೀಕ್ಷೆ ನಡೆಸಿ ಹೋದ ಅಧಿಕಾರಿಗಳು ಮತ್ತೆ ನೆನಪು ಮಾಡಿಕೊಂಡಿಲ್ಲ. ಈಗ ಜಿಲ್ಲಾಧಿಕಾರಿಯೇ ಕಡಂಚಿಗೆ ಬರುತ್ತಿರುವ ಕಾರಣ ಕಾರಿನ ಮಧ್ಯದ ಜನರೂ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.

ಸಿದ್ಧತೆಗಳು ಏನು?:ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದ್ದು, 500ಕ್ಕೂ ಅಧಿಕ ಜನ ಆಸಿನರಾಗಲು ಖುರ್ಚಿ ವ್ಯವಸ್ಥೆ ಮಾಡಲಾಗಿದೆ. ಜನರು ಬಂದು ಹೋಗಲು ಎರಡು ಕಡೆ ದಾರಿ ವ್ಯವಸ್ಥೆ ಮಾಡಲಾಗಿದೆ.

ಉಪ ವಿಭಾಗಾಧಿಕಾರಿ ರಮೇಶ ಕೋಲಾರ ಮತ್ತು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಕುಂಚಾವರಂಗೆ ಭೇಟಿ ನೀಡಿ ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇವರಿಗೆ ಗ್ರಾಮ ಪಂಚಾಯಿತಿ ಪಿಡಿಒ ತುಕ್ಕಪ್ಪ ಮತ್ತು ಸಬ್ ಇನ್ಸಪೆಕ್ಟರ್ ಉಪೇಂದ್ರಕುಮಾರ ಸಾಥ್ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT