ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿಯಲ್ಲಿ ಕಾಣದ ಕನ್ನಡ ನಾಮಫಲಕ

ಸಂಘಟನೆಗಳ ಮನವಿ, ಹೋರಾಟ, ಎಚ್ಚರಿಕೆ ಬಳಿಕವೂ ಜಿಲ್ಲಾಡಳಿತ ನಿರ್ಲಕ್ಷ್ಯ
Published 16 ಜೂನ್ 2024, 7:02 IST
Last Updated 16 ಜೂನ್ 2024, 7:02 IST
ಅಕ್ಷರ ಗಾತ್ರ

ಕಲಬುರಗಿ: ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ–2022’ ಹಾಗೂ ‘ತಿದ್ದುಪಡಿ ಅಧಿನಿಯಮ–2024’ರ ಅನ್ವಯ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ನಿಯಮ ನಗರದಲ್ಲಿ ಅನುಷ್ಠಾನಕ್ಕೆ ಬಂದೇ ಇಲ್ಲ.

‘ಕಲಬುರಗಿ ಜಿಲ್ಲೆ ಬೇರೆ ಜಿಲ್ಲೆಗಳಂತಲ್ಲ. ಇಲ್ಲಿ ಬಹುತೇಕರು ಕನ್ನಡ ಬಂದರೂ ಉರ್ದು, ಹಿಂದಿ ಭಾಷೆ ಮಾತನಾಡುತ್ತಾರೆ. ಕನ್ನಡ ಅಪರೂಪ ಎನ್ನುವಂತಾಗಿದ್ದು ಇಲ್ಲಿಯೇ ಕನ್ನಡ ಕಡ್ಡಾಯ ನಿಯಮವನ್ನು ಸರ್ಮಪಕವಾಗಿ ಅನುಷ್ಠಾನಕ್ಕೆ ತರದಿರುವುದು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ವೈಫಲ್ಯ ಮತ್ತು ಮಾತೃಭಾಷೆ ಬಗೆಗಿನ ನಿರ್ಲಕ್ಷ್ಯ’ ಎನ್ನುವುದು ಕನ್ನಡಪರ ಸಂಘಟನೆಗಳ ಮುಖಂಡರ ಆಕ್ರೋಶ.

ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ, ಸೂಪರ್ ಮಾರುಕಟ್ಟೆ, ಕೆಬಿಎನ್‌ ದರ್ಗಾ ಸುತ್ತಲಿನ ಪ್ರದೇಶ ಸೇರಿ ಬಹುತೇಕ ಸ್ಥಳಗಲ್ಲಿನ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಕಾಣುತ್ತಲೇ ಇಲ್ಲ. ಬಹುತೇಕ ನಾಮಫಲಕಗಳಲ್ಲಿ ಇಂಗ್ಲಿಷ್ ಆವರಿಸಿದ್ದರೆ ಅಲ್ಲಿ ಇಲ್ಲಿ ಉರ್ದು ಸಹ ಪಾಲು ಪಡೆದಿದೆ.

‘ಬೃಹತ್ ಪ್ರತಿಭಟನೆ ಮಾಡಿದ್ದೇವೆ, ಅನೇಕ ಮನವಿ ಸಲ್ಲಿಸಿದ್ದೇವೆ. ಆದರೂ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅಧಿಕಾರಿಗಳು ಇತರ ಭಾಷೆಗಳ ನಾಮಫಲಕಗನ್ನು ತೆಗೆಸಲು ಮನಸ್ಸು ಮಾಡುತ್ತಿಲ್ಲ’ ಎಂದು ಕನ್ನಡ ಸಂಘಟನೆಯ ಮುಖಂಡರೊಬ್ಬರು ತಿಳಿಸಿದರು.

‘ಕನ್ನಡ ಅನುಷ್ಠಾನದಲ್ಲಿ ಜಿಲ್ಲಾ ಆಡಳಿತದ ನಿರ್ಲಕ್ಷ್ಯ ಸಂಪೂರ್ಣವಾಗಿ ಎದ್ದು ಕಾಣುತ್ತಿದೆ‌. ಪಕ್ಕದ ಬೀದರ್, ರಾಯಚೂರು ಜಿಲ್ಲೆಗಳ ಸಣ್ಣ ಪಟ್ಟಣಗಳಲ್ಲೂ ಅನ್ಯ ಭಾಷೆಗಳ ನಾಮಫಲಕಗಳನ್ನು ತೆರವು ಮಾಡಿಸಿದ್ದಾರೆ‌‌. ಆದರೆ ಕಲಬುರಗಿ ನಗರದಲ್ಲಿ ಬೇರೆ ಭಾಷೆಯದ್ದೇ ಸಿಂಹ ಪಾಲಿದೆ‌. ಮಾತೃಭಾಷೆ ಕಡ್ಡಾಯ ನಿಮಯವನ್ನು ಒತ್ತಾಯಪೂರ್ವಕವಾಗಿಯಾದರೂ ಜಾರಿಗೆ ತರಲೇಬೇಕು' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕನ್ನಡ ಉಪನ್ಯಾಸಕರೊಬ್ಬರು ಹೇಳಿದರು.

ಬೆಂಗಳೂರು ಮಾದರಿ ಚಳವಳಿ ಎಚ್ಚರಿಕೆ: ‘ಕಳೆದ ವರ್ಷ ಡಿಸೆಂಬರ್‌ನಲ್ಲಿ ನಮ್ಮ ಸಂಘಟನೆ ವತಿಯಿಂದ ಹೋರಾಟ ನಡೆದ ಬಳಿಕ ನಾವೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಕನ್ನಡ ಕಡ್ಡಾಯ ನಿಯಮದ ಅನುಷ್ಠಾನಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆ ವತಿಯಿಂದ ಒಂದು ಪಡೆ ರಚಿಸಿ ಬೆಂಗಳೂರಿನಲ್ಲಿ ಮಾಡಿದ ಹಾಗೆ ಅನ್ಯ ಭಾಷೆಗಳ ನಾಮಫಲಕಗಳಿಗೆ ಮಸಿ ಬಳೆಯುವ, ಒಡೆಯುವ ಹೋರಾಟ ಮಾಡುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಪುನೀತರಾಜ್ ಕವಡೆ ಹೇಳಿದರು.

ಕಲಬುರಗಿ ನಗರದ ಮೋಹನ್‌ ಲಾಡ್ಜ್‌ ವೃತ್ತದಲ್ಲಿರುವ ವಾಣಿಜ್ಯ ಸಂಕಿರಣದಲ್ಲಿರುವ ಬಹುತೇಕ ಅಂಗಡಿಗಳಿಗೆ ಅನ್ಯ ಭಾಷೆಗಳ ನಾಮಫಲಕಗಳನ್ನೇ ಅಳವಡಿಸಿದ್ದಾರೆ
ಕಲಬುರಗಿ ನಗರದ ಮೋಹನ್‌ ಲಾಡ್ಜ್‌ ವೃತ್ತದಲ್ಲಿರುವ ವಾಣಿಜ್ಯ ಸಂಕಿರಣದಲ್ಲಿರುವ ಬಹುತೇಕ ಅಂಗಡಿಗಳಿಗೆ ಅನ್ಯ ಭಾಷೆಗಳ ನಾಮಫಲಕಗಳನ್ನೇ ಅಳವಡಿಸಿದ್ದಾರೆ
ಕಲಬುರಗಿ ನಗರದ ಪಿಡಿಎ ಕಾಲೇಜು ರಸ್ತೆಯಲ್ಲಿರುವ ವಾಣಿಜ್ಯ ಸಂಕಿರಣ ಮತ್ತು ಅದರಲ್ಲಿರುವ ನಾಮಫಲಕಗಳು ಅನ್ಯ ಭಾಷೆಯಲ್ಲಿರುವುದು
ಕಲಬುರಗಿ ನಗರದ ಪಿಡಿಎ ಕಾಲೇಜು ರಸ್ತೆಯಲ್ಲಿರುವ ವಾಣಿಜ್ಯ ಸಂಕಿರಣ ಮತ್ತು ಅದರಲ್ಲಿರುವ ನಾಮಫಲಕಗಳು ಅನ್ಯ ಭಾಷೆಯಲ್ಲಿರುವುದು

ನಿಯಮ ರೂಪಿಸಿ ಆರು ತಿಂಗಳಾದರೂ ಒಂದೇ ಒಂದು ನೋಟಿಸ್‌ ನೀಡಿಲ್ಲ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿ: ಅಧಿಕಾರಿ ಮನವಿ

ಇಂಗ್ಲಿಷ್ ಭಾಷೆಯ ನಾಮಫಲಕ ತೆಗೆಯುವಂತೆ ನಮಗೆ ಈವರೆಗೆ ಯಾರಿಂದಲೂ ನೋಟಿಸ್‌ ಬಂದಿಲ್ಲ. ಹಾಗೇನಾದರೂ ಸೂಚನೆ ನೀಡಿದರೆ ತೆಗೆದು ಕನ್ನಡದ ಫಲಕವನ್ನೇ ಹಾಕುತ್ತೇವೆ.
-ಏಕಾಏಕಿ ಒಡೆದರೆ ನಮಗೆ ನಷ್ಟವಾಗುತ್ತದೆ ರವಿ ಬೇಕರಿ ವ್ಯಾಪಾರಸ್ಥ
ಜೂನ್ 15 ರ ಬಳಿಕ ನಮ್ಮ ಸಂಘಟನೆ ವತಿಯಿಂದ ಅಧಿಕಾರಿಗಳಿಗೆ ಮತ್ತೊಂದು ಮನವಿ ಸಲ್ಲಿಸುತ್ತೇವೆ. ಈ ತಿಂಗಳ ಒಳಗೆ ಅನ್ಯ ಭಾಷೆಯ ನಾಮಪಲಕಗಳನ್ನುತೆರವುಗೊಳಿಸಲು ಕ್ರಮತೆಗೆದುಕೊಳ್ಳದಿದ್ದರೆ ಹೋರಾಟ ನಿಶ್ಚಿತ
ಪುನೀತರಾಜ್ ಕವಡೆ ಅಧ್ಯಕ್ಷ ಕರವೇ ಜಿಲ್ಲಾ ಘಟಕ
ಮುಂದಿನ ವಾರದಲ್ಲಿ ಪರಿಷತ್ ವತಿಯಿಂದ ಎಲ್ಲ ಅಂಗಡಿ ಹೋಟೆಲ್‌ಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ನಗರದಲ್ಲಷ್ಟೆ ಅಲ್ಲದೆ ತಾಲ್ಲೂಕು ಘಟಕಗಳ ಮೂಲಕ ಜಾಗೃತಿ ಕಾರ್ಯ ಮಾಡುತ್ತೇವೆ
ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷ ಕಸಾಪ ಜಿಲ್ಲಾ ಘಟಕ

ನಷ್ಟದ ಆತಂಕ ಜನಪ್ರಿಯ ಅಂಗಡಿಗಳು ಜನದಟ್ಟಣೆ ಪ್ರದೇಶದಲ್ಲಿರುವ ಬಹುತೇಕ ಅಂಗಡಿಗಳ ಮಾಲೀಕರು ಇಂಗ್ಲಿಷ್‌ ಭಾಷೆಯ ನಾಮಫಲಕಗಳನ್ನೇ ಹಾಕಿಸಿದ್ದಾರೆ. ಅದರಲ್ಲೂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಡಿಜಿಟಲ್ ಎಲ್‌ಇಡಿ ಫಲಕಗಳನ್ನೇ ಹೆಚ್ಚು ಅಳವಡಿಸಿದ್ದಾರೆ. ಇವುಗಳಿಗೆ ಕನಿಷ್ಠ ₹30 ಸಾವಿರದಿಂದ ₹90 ಸಾವಿರ ವೆಚ್ಚ ಮಾಡಿದ್ದಾರೆ. ಇವುಗಳನ್ನು ತೆಗೆಯುವುದರಿಂದ ಮತ್ತೆ ಅಷ್ಟು ಖರ್ಚು ಮಾಡಿ ಹೊಸ ಫಲಕಗಳನ್ನು ಹಾಕಿಸಬೇಕಾದ ಅನಿವಾರ್ಯತೆ ಅಂಗಡಿಗಳ ಮಾಲೀಕರಿಗೆ ಎದುರಾಗಿದೆ. ‘ಕಳೆದ ವರ್ಷದ ಆಗಸ್ಟ್‌ನಲ್ಲಿ ನಮ್ಮ ಅಂಗಡಿಗೆ ಎಲ್‌ಇಡಿಯ ಹೊಸ ಬೋರ್ಡ್ ಹಾಕಿಸಿದ್ದಾರೆ. ಇನ್ನೂ ಒಂದು ವರ್ಷವೂ ಆಗಿಲ್ಲ. ಆಗಲೇ ತೆಗೆಸಿದರೆ ಮಾಲೀಕರಿಗೆ ನಷ್ಟವಾಗುತ್ತದೆ’ ಎಂದು ನೆಹರೂ ಗಂಜ್‌ನ ಹೋಟೆಲ್‌ ವ್ಯವಸ್ಥಾಪಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT