ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಲ್ಲಿ ವಿದ್ಯುತ್ ದರ ಹೆಚ್ಚಿಸಿ ಬರೆ ಹಾಕಬೇಡಿ: ಸಾರ್ವಜನಿಕರ ಆಕ್ರೋಶ

ಕೆಇಆರ್‌ಸಿ ಸಾರ್ವಜನಿಕರ ವಿಚಾರಣೆ ಸಭೆ
Published 20 ಫೆಬ್ರುವರಿ 2024, 16:26 IST
Last Updated 20 ಫೆಬ್ರುವರಿ 2024, 16:26 IST
ಅಕ್ಷರ ಗಾತ್ರ

ಕಲಬುರಗಿ: ‘ಬರಗಾಲದಿಂದಾಗಿ ಎಲ್ಲ ಕ್ಷೇತ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದಾಯದ ಕೊರತೆ ಸರಿದೂಗಿಸಲು ಜೆಸ್ಕಾಂ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ದರ ಪರಿಷ್ಕರಣೆ ಮಾಡಬಾರದು. ಬದಲಾಗಿ ದರದಲ್ಲಿ ಇಳಿಕೆ ಮಾಡಬೇಕು. ಸೋರಿಕೆಯನ್ನು ನಿಯಂತ್ರಿಸಿ, ಸರ್ಕಾರದ ವಿವಿಧ ಇಲಾಖೆಗಳು ಬಾಕಿ ಉಳಿಸಿಕೊಂಡ ಕೋಟ್ಯಂತರ ರೂಪಾಯಿ ಬಿಲ್ ಮೊತ್ತವನ್ನು ವಸೂಲಿ ಮಾಡಿ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು’ ಎಂಬ ಒಕ್ಕೂರಲ ಸಲಹೆ ಸಾರ್ವಜನಿಕರಿಂದ ವ್ಯಕ್ತವಾಯಿತು.

ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) 2024–25ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಅಂಗವಾಗಿ ಸಾರ್ವಜನಿಕ ವಿಚಾರಣೆ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಜೆಸ್ಕಾಂ ವ್ಯಾಪ್ತಿಯ ಉದ್ಯಮಿಗಳು, ಸಂಘ–ಸಂಸ್ಥೆಗಳು, ಕೈಗಾರಿಕಾ ಕಂಪನಿ ಪ್ರತಿನಿಧಿಗಳು, ರೈತರು, ಗ್ರಾಹಕರು ವಿದ್ಯುತ್ ದರ ಪರಿಷ್ಕರಣೆ ಕೈಬಿಡುವಂತೆ ಆಗ್ರಹಿಸಿದರು.

ರಾಯಚೂರು ಕಾಟನ್‌ ಮಿಲ್ಲರ್ಸ್‌ ಅಸೋಸಿಯೇಶನ್ ಅಧ್ಯಕ್ಷ ವಿ.ಲಕ್ಷ್ಮಿರೆಡ್ಡಿ ಮಾತನಾಡಿ, ‘ಬರದಿಂದಾಗಿ ಹತ್ತಿ ಬೆಳೆಯ ಇಳುವರಿ ಕಡಿಮೆಯಾಗಿದ್ದು, ರಾಯಚೂರಲ್ಲಿ 65 ಕಾಟನ್ ಮಿಲ್ಲಗಳಿಗೆ ಸಂಕಷ್ಟ ಎದುರಾಗಿದೆ. ವರ್ಷದಲ್ಲಿ 3–4 ತಿಂಗಳು ನಡೆಯುವ ಮಿಲ್‌ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಹತ್ತಿ ಬಂದಿಲ್ಲ. ಇಂತಹ ಸಮಯದಲ್ಲಿ ದರ ಪರಿಷ್ಕರಣೆ ಮಾಡಿದರೆ 25 ಕೆಡಬ್ಲ್ಯು ವಿದ್ಯುತ್ ಪಡೆದವರು ನಿತ್ಯ ₹2,500ಯಷ್ಟು ಹೊರೆಯಾಗುತ್ತದೆ’ ಎಂದರು.

ರಾಯಚೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಬಣ್ಣ ಮಾತನಾಡಿ, ‘ಬರದಿಂದ ಎರಡನೇ ಬೆಳೆ ಇಲ್ಲದೆ ಅಕ್ಕಿ ಗಿರಣಿಗಳು ಬಂದ್ ಆಗುವ ಸ್ಥಿತಿಗೆ ಬಂದಿದೆ. ಕೇಂದ್ರ ಸರ್ಕಾರ ₹ 29ಕ್ಕೆ ಕೆ.ಜಿ. ಭಾರತ್ ಬ್ರ್ಯಾಂಡ್ ಅಕ್ಕಿ ನೀಡುತ್ತಿರುವುದರಿಂದ ಸಂಸ್ಕರಣೆಯನ್ನು ಕಡಿಮೆ ಮಾಡುವಂತಿದೆ. ಇಂತಹ ಯಾತನೆಯ ಸಮಯದಲ್ಲಿ ದರ ಏರಿಕೆ ಸಲ್ಲದು’ ಎಂದು ಕೋರಿದರು.

ವಿಜಯನಗರ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅಶ್ವಿನ್‌ ಕೋತಂಬ್ರಿ ಮಾತನಾಡಿ, ‘ಹೊಸಪೇಟೆಯ ಹಳೆ ಕೈಗಾರಿಕಾ ಪ್ರದೇಶದಲ್ಲಿ ಪ್ರತಿ 30 ನಿಮಿಷಕ್ಕೆ 8ರಿಂದ 10 ನಿಮಿಷ ವಿದ್ಯುತ್ ಕಡಿತವಾಗುತ್ತಿದೆ. ಹೊಸ ಫೀಡರ್ ಕೂಡಿಸುವಂತೆ 2009ರಿಂದ ಮನವಿ ಮಾಡಿಕೊಂಡು ಬರುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ. ಜೆಸ್ಕಾಂ ಎಂಡಿ ಪ್ರತಿ ಎರಡ್ಮೂರು ತಿಂಗಳಿಗೆ ಒಮ್ಮೆಯಾದರು ಪ್ರತಿ ಜಿಲ್ಲೆಯಲ್ಲಿ ಸಭೆ ನಡೆಸಬೇಕು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಪಿ.ರವಿಕುಮಾರ, ‘ಕೈಗಾರಿಕೆ ಪ್ರದೇಶದಿಂದ ಜೆಸ್ಕಾಂ ಹೆಚ್ಚಿನ ಬಿಲ್‌ ಹಣ ಹರಿದುಬರುತ್ತದೆ. ಕನಿಷ್ಠ ಸೌಕರ್ಯ ಕೊಡಲು ಆಗುವುದಿಲ್ಲವೇ ನಿಮಗೆ? ಪ್ರತಿಯೊಂದು ಕೈಗಾರಿಕಾ ಪ್ರದೇಶದಲ್ಲಿ ಪರಿಣಿತ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ವಿಳಂಬಕ್ಕೆ ಆಸ್ಪದ ಇಲ್ಲದೆ ಉತ್ತಮ ಸೇವೆಯ ಕಲ್ಪಿಸಬೇಕು’ ಎಂದು ಎಂಡಿಗೆ ಸೂಚಿಸಿದರು.

ವಿದ್ಯುತ್ ಬಳಕೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್‌.ಎಂ. ಶರ್ಮಾ ಮಾತನಾಡಿ, ‘ಪ್ರತಿ ವರ್ಷ ಸಭೆ ನಡೆಸಿದಾಗ ದರ ಏರಿಸದಂತೆ ಮನವಿ ಮಾಡಿದರೂ ಪರಿಷ್ಕರಣೆ ಮಾಡಲಾಗುತ್ತಿದೆ. ಕಾಟಾಚಾರಕ್ಕೆ ನಮ್ಮ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ. ಈ ವರ್ಷವಾದರೂ ದರ ಹೆಚ್ಚಿಸಬೇಡಿ. ಜೆಸ್ಕಾಂನವರು ತಮ್ಮ ನೌಕರರ ಪಿಂಚಣಿ ಮೊತ್ತವನ್ನು ಗ್ರಾಹಕರ ಮೇಲೆ ಹಾಕುವ ಚಿಂತನೆಯಲ್ಲಿ ಇದ್ದಾರೆ. ಇದಕ್ಕೆ ತಡೆಯೊಡ್ಡಬೇಕು’ ಎಂದು ಆಗ್ರಹಿಸಿದರು.

ಸಭೆಯಲ್ಲಿ ಆಯೋಗದ ಸದಸ್ಯ ಎಂ.ಡಿ ರವಿ, ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ, ಜೆಸ್ಕಾಂನ ವಿವಿಧ ವಿಭಾಗದ ಅಧಿಕಾರಿಗಳು ಹಾಜರಿದ್ದರು.

ಕಲಬುರಗಿಯಲ್ಲಿ ಮಂಗಳವಾರ ನಡೆದ ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ದರ ಪರಿಷ್ಕರಣೆಯ ಸಾರ್ವಜನಿಕ ವಿಚಾರಣೆಯ ಕೆಇಆರ್‌ಸಿ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ದೀಪಕ್ ಗಾಲಾ ಮಾತನಾಡಿದರು. ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಮಂಗಳವಾರ ನಡೆದ ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ದರ ಪರಿಷ್ಕರಣೆಯ ಸಾರ್ವಜನಿಕ ವಿಚಾರಣೆಯ ಕೆಇಆರ್‌ಸಿ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ದೀಪಕ್ ಗಾಲಾ ಮಾತನಾಡಿದರು. ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು

‘10 ವರ್ಷಗಳಲ್ಲಿ 966 ಜನರ ಸಾವು’

‘ಜೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳಲ್ಲಿ 966 ಜನರು ಮೃತಪಟ್ಟಿದ್ದಾರೆ. 2165 ಜಾನುವಾರುಗಳು ಮೃತಪಟ್ಟಿದ್ದು ಇದೇ ಅವಧಿಯಲ್ಲಿ ಅವಘಡ ತಡೆಗೆ ₹181.26 ಕೋಟಿ ಖರ್ಚು ಮಾಡಿದ್ದರೂ ಸಾವು–ನೋವು ಕಡಿಮೆ ಮಾಡಲು ಸಾಧ್ಯವಾಗಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ದೀಪಕ್ ಗಾಲಾ ಹೇಳಿದರು. ಜೆಸ್ಕಾಂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಸಬ್ಸಿಡಿ ಬಾಕಿ ಮತ್ತು ಸಬ್ಸಿಡಿ ಬಾಕಿ ಮೇಲಿನ ಬಡ್ಡಿಯನ್ನು ಸಂಗ್ರಹಿಸುತ್ತಿಲ್ಲ. ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ನಿಗಮಗಳಿಂದ ಇಂಧನ ಸಬ್ಸಿಡಿ ಮತ್ತು ಗಂಗಾ ಕಲ್ಯಾಣ ಬಾಕಿ ಸಂಗ್ರಹಿಸುವ ಬದಲು ವಿದ್ಯುತ್ ಬಿಲ್‌ಗಳನ್ನು ಪ್ರಾಮಾಣಿಕವಾಗಿ ಪಾವತಿಸುವ ಗ್ರಾಹಕರ ಮೇಲೆ ತನ್ನ ಆರ್ಥಿಕ ಹೊರೆಯನ್ನು ವರ್ಗಾಯಿಸುತ್ತಿದೆ. 2007ರಿಂದ 2023ರ ಡಿಸೆಂಬರ್ ಅಂತ್ಯದವರೆಗೆ ಸರ್ಕಾರದ ₹3222 ಕೋಟಿ ಸಬ್ಸಿಡಿ ಬಾಕಿ ಉಳಿದೆ. ಇದರಲ್ಲಿ ₹1821 ಕೋಟಿ ಸಬ್ಸಿಡಿಯ ಬಡ್ಡಿಯೇ ಇದೆ’ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿ.ರವಿಕುಮಾರ ಸರ್ಕಾರದ ಬಾಕಿ ಮೊತ್ತವನ್ನು ನಿಯಮಿತವಾಗಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎಂಜಿನಿಯರ್ ಹೇಳಿಕೆಗೆ ತಬ್ಬಿಬ್ಬಾದ ಅಧ್ಯಕ್ಷ

‘ಏಳು ವರ್ಷಗಳ ಹಿಂದೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆದಿದ್ದೆ. ಜೆಸ್ಕಾಂಗೆ ಸೇರಿದ್ದ ವೈಯರ್ ಅನ್ನು ಕಳ್ಳರು ಕದ್ದೊಯ್ದಿದ್ದಾರೆ. ಜೆಸ್ಕಾಂ ಸಿಬ್ಬಂದಿ ದೂರು ಕೊಟ್ಟರೆ ಮಾತ್ರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. 7 ವರ್ಷದಿಂದ ಒಬ್ಬರೂ ಸ್ಪಂದಿಸುತ್ತಿಲ್ಲ’ ಎಂದು ಕಲಬುರಗಿ ತಾಲ್ಲೂಕಿನ ಭೀಮಳ್ಳಿ ಗ್ರಾಮದ ಜನಾರ್ದನ ದೂರಿದರು. ಕಳ್ಳತನ ತಡೆಗೆ ಜಾಗೃತ ದಳ ಎಚ್ಚರ ವಹಿಸುವಂತೆ ಸೂಚಿಸಿದ ಅಧ್ಯಕ್ಷ ಪಿ.ರವಿಕುಮಾರ ರೈತರಿಗೆ ಸಂಪರ್ಕ ಕಲ್ಪಿಸುವಂತೆ ಎಂಜಿನಿಯರ್‌ಗೆ ತಾಕೀತು ಮಾಡಿದರು. ‘ವಿದ್ಯುತ್ ಸಂಪರ್ಕ ಕೊಡಲು 3 ವಾರಬೇಕು’ ಎಂದು ಎಂಜಿನಿಯರ್ ನೀಡಿದ ಪ್ರತ್ಯುತ್ತರಕ್ಕೆ ಅಧ್ಯಕ್ಷರು ತಬ್ಬಿಬ್ಬಾಗಿ ‘ನಗರ ಸಮೀಪದಲ್ಲಿ 3 ವಾರ ಬೇಕಾದರೆ ಉಳಿದಡೆ ಹೇಗಿರಬಹುದು’ ಎಂದರು.

₹1593.26 ಕೋಟಿ ಆದಾಯ ಕೊರತೆ

ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ದರದಲ್ಲಿ ಸಬ್ಸಿಡಿ ನೀಡುತ್ತಿರುವ ಕಾರಣ ₹1593.26 ಕೋಟಿ ಆದಾಯ ಕೊರತೆ ಕಂಡುಬಂದಿದೆ. ಈ ನಷ್ಟ ಭರಿಸಲು 2025ನೇ ಹಣಕಾಸು ವರ್ಷದಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಜೆಸ್ಕಾಂ ದರ ಪರಿಷ್ಕರಣೆ ಪ್ರಸ್ತಾಪದಲ್ಲಿ ತಿಳಿಸಿದೆ. ಗೃಹಬಳಕೆ ನೀರು ಪೂರೈಕೆ ಬೀದಿ ದೀಪ ಕೃಷಿ ಹಾಗೂ ತಾತ್ಕಾಲಿಕ ವಿದ್ಯುತ್ ಸರಬರಾಜಿನಲ್ಲಿ ಪ್ರತಿ ಎಲ್‌ಟಿ ಮತ್ತು ಯುಟಿ ಬಳಕೆ ಮೇಲೆ ತಲಾ ಒಂದು ಪೈಸೆ ಏರಿಸಿದೆ. ಭಾಗ್ಯ ಜ್ಯೋತಿ (ಬಿಜೆ)/ ಕುಟೀರ ಜ್ಯೋತಿ (ಕೆಜೆ) ಮೇಲೆ 2 ಪೈಸೆ ಹೆಚ್ಚಕ್ಕೆ ಪ್ರಸ್ತಾಪ ಸಲ್ಲಿಸಿದೆ. ಕೈಗಾರಿಕೆ ಹಾಗೂ ವಾಣಿಜ್ಯದಲ್ಲಿ 0.50 ಪೈಸೆ ಕಡಿತ ಮಾಡಿದೆ. ಎಲ್‌ಟಿ ಮತ್ತು ಎಚ್‌ಟಿ ಪ್ರತಿ ಕೆಡಬ್ಲ್ಯು/ಎಚ್‌ಪಿ/ಕೆವಿಎ ಮೇಲೆ ₹100 ಏರಿಕೆ ಮಾಡಿದೆ.

ದರ ಪರಿಷ್ಕರಣೆಯಲ್ಲಿ ಗ್ರಾಹಕರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿ. ಮತ್ತೊಂದು ಕಡೆ ಜೆಸ್ಕಾಂ ಸಹ ಉಳಿಯಬೇಕು. ಎರಡನ್ನೂ ನಿಭಾಯಿಸಲು ತಮ್ಮ ಸಲಹೆಗಳು ಮಹತ್ವದ್ದಾಗಿದೆ.
-ಪಿ.ರವಿಕುಮಾರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT