ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಿಲ್ ಆಗದಿದ್ದಕ್ಕೆ ಹೊಟ್ಟೆ ಮೇಲೆ ಹೊಡೆಯುತ್ತೀರಾ?’

ಗುವಿವಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಲೋಕಾಯುಕ್ತ ಎಸ್‌ಪಿ ಭೇಟಿ: ಅಡುಗೆ ಸಿಬ್ಬಂದಿಗೆ ತರಾಟೆ
Published 21 ಮಾರ್ಚ್ 2024, 16:27 IST
Last Updated 21 ಮಾರ್ಚ್ 2024, 16:27 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ಅವರು ಗುರುವಾರ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿನಿಯರ ಅಳಲು ಆಲಿಸಿದರು. ಕಡಿಮೆ ಮತ್ತು ಕಳಪೆ ಗುಣಮಟ್ಟದ ಆಹಾರ ನೀಡಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಗುಲಬರ್ಗಾ ವಿವಿಯ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ವಿತರಣೆ ಆರೋಪ; ‘ಕುಲಪತಿ ಮನೆ ಮುಂದೆ ಮಧ್ಯರಾತ್ರಿ ಪ್ರತಿಭಟನೆ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ಯ ಮಾರ್ಚ್‌ 21ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಲೋಕಾಯುಕ್ತ ಎಸ್‌ಪಿ ಅವರು ಗಮನಿಸಿದರು.

ಗುರುವಾರ ಬೆಳಿಗ್ಗೆ ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ, ಹಾಸ್ಟೆಲ್ ಆವರಣದಲ್ಲಿನ ಸ್ವಚ್ಛತೆಯ ನಿರ್ವಹಣೆ, ಭದ್ರತೆ, ಅಡುಗೆ ಕೋಣೆಯ ಪದಾರ್ಥಗಳು, ಊಟದ ಸಭಾಂಗಣವನ್ನು ವೀಕ್ಷಿಸಿದರು. ಆಹಾರದ ಗುಣಮಟ್ಟ ತಿಳಿಯಲು ತಾವೇ ತಿಂಡಿ ತಿಂದು ಪರಿಶೀಲನೆ ಮಾಡಿದರು. ಬಳಿಕ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾದರು.

‘ಕುಲಪತಿಗಳ ಮನೆಗೆ ಹೋಗಿ ದೂರು ಕೊಟ್ಟಿದ್ದಕ್ಕೆ ಅಡುಗೆ ಟೆಂಡರ್ ಪಡೆದವರು ಬೆದರಿಕೆ ಹಾಕಿದ್ದಾರೆ. ಸಮಸ್ಯೆಗಳಿಗೆ ಧ್ವನಿ ಎತ್ತುವುದೇ ತಪ್ಪಾ ಸರ್? ಬೆಳಿಗ್ಗೆ 10ಕ್ಕೆ ತರಗತಿಗಳು ಶುರುವಾಗುತ್ತವೆ. ಆದರೆ, 9.50ಕ್ಕೆ ಊಟ ತರುತ್ತಾರೆ. 10 ನಿಮಿಷದಲ್ಲಿ ತಿಂದು ಹೋಗಲು ಹೇಗೆ ಆಗುತ್ತದೆ. ಶೌಚಾಲಯದ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ಇದರಿಂದ ಸ್ನಾನ ಮಾಡಲು ಆಗುತ್ತಿಲ್ಲ’ ಎಂದು ವಿದ್ಯಾರ್ಥಿನಿಯರು ಹಾಸ್ಟೆಲ್ ಅವ್ಯವಸ್ಥೆಯನ್ನು ಎಸ್‌ಪಿ ಮುಂದಿಟ್ಟರು.

‘2023ರಿಂದ ಬಿಲ್ ಆಗಿಲ್ಲ. ಅಡುಗೆ ಮಾಡಲು ಸಿಬ್ಬಂದಿ ಕೊರತೆ ಇದೆ’ ಎಂದು ಸಮರ್ಥಿಸಿಕೊಂಡ ಟೆಂಡರ್‌ದಾರರನ್ನು ಜಾನ್ ಆಂಟೋನಿ ಅವರು ತರಾಟೆಗೆ ತೆಗೆದುಕೊಂಡರು. ‘ಸಿಬ್ಬಂದಿ ಕೊರತೆ ನಿಮ್ಮ ಆಂತರಿಕ ಸಮಸ್ಯೆ ಅದನ್ನು ನಮ್ಮ ಮುಂದೆ ಹೇಳಬೇಡಿ. ಬಿಲ್ ಬಾಕಿ ಇದ್ದರೆ ಟೆಂಡರ್‌ನಲ್ಲಿ ಪಾಲ್ಗೊಳ್ಳಬಾರದಿತ್ತು. ಬಿಲ್ ಆಗಿಲ್ಲವೆಂದು ವಿದ್ಯಾರ್ಥಿನಿಯರ ಹೊಟ್ಟೆಯ ಮೇಲೆ ಏಕೆ ಹೊಡೆಯುತ್ತಿದ್ದೀರಾ’ ಎಂದು ದಬಾಯಿಸಿದರು.

‘ಟೆಂಡರ್‌ದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ. ಹಾಸ್ಟೆಲ್‌ನಲ್ಲಿ ದೂರು ಪೆಟ್ಟಿಗೆ ಇರಿಸಬೇಕು’ ಎಂದು ಕುಲಪತಿಗೆ ಸೂಚಿಸಿದರು. ‘ವಿದ್ಯಾರ್ಥಿನಿಯರ ಹಾಸ್ಟೆಲ್‌ ಹೊಸ್ತಿಲು ಒಳಗೆ ಪುರುಷರು ಹೆಜ್ಜೆ ಇಡುವಂತಿಲ್ಲ. ಅವರ ಜತೆಗೆ ಮಾತಾಡುವಂತೆಯೂ ಇಲ್ಲ’ ಎಂದು ಟೆಂಡರ್‌ದಾರನಿಗೆ ಎಚ್ಚರಿಸಿದರು.

‘ತಾಯಿ– ತಂದೆ ಕೊಟ್ಟಿರುವ ದುಡ್ಡಿನಲ್ಲಿ ಹಾಸ್ಟೆಲ್ ಊಟ ಮಾಡುತ್ತಿದ್ದೀರಿ. ಯಾರಿಗೂ ಹೆದರಿಕೊಳ್ಳಬೇಡಿ. ಏನಾದರು ಸಮಸ್ಯೆಗಳು ಇದ್ದರೆ ಮುಖ್ಯ ವಾರ್ಡನ್‌ ಗಮನಕ್ಕೆ ತನ್ನಿ, ನಿಮ್ಮ ಜತೆಗೆ ನಾವೂ ಇರುತ್ತೇವೆ. ಆಗಾಗ ಭೇಟಿ ನೀಡುತ್ತೇನೆ, ಚೆನ್ನಾಗಿ ಓದಿ’ ಎಂದು ವಿದ್ಯಾರ್ಥಿನಿಯರಿಗೆ ಎಸ್‌ಪಿ ಧೈರ್ಯ ತುಂಬಿದರು.

ಎಚ್ಚರಿಕೆಯ ನೋಟಿಸ್: ಪ್ರೊ.ದಯಾನಂದ

‘ಅಡುಗೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಊಟ ಕೊಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಬಂದು ದೂರು ಕೊಟ್ಟಿದ್ದಾರೆ. ಅಡುಗೆ ಟೆಂಡರ್‌ದಾರರಿಗೆ ಎಚ್ಚರಿಕೆಯ ನೋಟಿಸ್ ಕೊಡಲಾಗುವುದು’ ಎಂದು ವಿವಿಯ ಕುಲಪತಿ ಪ್ರೊ. ದಯಾನಂದ ಅಗಸರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳಪೆ ಗುಣಮಟ್ಟದ ಆಹಾರ ಏಕೆ ಕೊಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇವೆ. ಸಿಂಡಿಕೇಟ್‌ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಿದ್ಯಾರ್ಥಿನಿಯರ ಜತೆಗೆ ಅನುಚಿತ ವರ್ತನೆ ತೋರಿದ ಆರೋಪ ಸಹ ಕೇಳಿಬಂದಿದೆ. ಇದೊಂದು ಸೂಕ್ಷ್ಮವಾದ ಆರೋಪವಾಗಿದ್ದು ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳಲಾಗುವುದು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT