ಬುಧವಾರ, ಏಪ್ರಿಲ್ 14, 2021
24 °C
ಕಲಬುರ್ಗಿ ತಾಲ್ಲೂಕು ಕವಿ ಸಮ್ಮೇಳನಕ್ಕೆ ಮಾಲೀಕಯ್ಯ ಗುತ್ತೇದಾರ ಚಾಲನೆ

‘ಅಭಿರುಚಿ ಬೆಳೆಸುವ ಸಾಹಿತ್ಯ ರಚನೆಯಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ನಮ್ಮ ಸಾಹಿತಿಗಳು, ಕವಿಗಳು ಅಭಿರುಚಿ ಬೆಳೆಸುವಂತಹ ಸಾಹಿತ್ಯ ಬರೆಯಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಸೋಮವಾರ ಕಸಾಪ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಪ್ರಥಮ ಕವಿ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಭಿರುಚಿಯಿಂದಲೇ ಭಾಷೆ, ನಾಡು, ಸಂಸ್ಕೃತಿ ಉಳಿಯುತ್ತದೆ. ಆದರೆ, ಇಂದಿನ ದಿನಗಳಲ್ಲಿ ನಮ್ಮ ಯುವಕರಲ್ಲಿ ಭಾಷೆ, ಸಾಹಿತ್ಯಕ್ಕಿಂತ ವಾಟ್ಸ್ ಆ್ಯಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಅಭಿರುಚಿ ಹೆಚ್ಚಾಗುತ್ತಿದೆ. ಆದರೆ, ಇಂದಿನ ದಿನಗಳಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದು ಹೆಚ್ಚು ಪ್ರಾಶಸ್ತ್ಯ ಪಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅಪಾಯ ತಂದೊಡ್ಡಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ ಕವಿ ಸಮ್ಮೇಳನ ಮಾಡುವ ಮೂಲಕ ತನ್ನತನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಇದು ಕನ್ನಡದಲ್ಲಿ ಬರೆಯಲು ಒತ್ತಾಸೆ ಮೂಡಿಸುತ್ತದೆ. ಅಲ್ಲದೆ, ಸಜ್ಜನರಲ್ಲಿ, ವಿಶೇಷ ಗ್ರಹಿಕೆ ಇರುವವರಲ್ಲಿ ಬರೆಯುವ ಆಸಕ್ತಿ ಉಂಟು ಮಾಡಲಿದೆ’ ಎಂದು ಹೇಳಿದರು.

ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ‘ಕನ್ನಡಿಗರಾದ ನಾವು ಕನ್ನಡದ ಬೆಳವಣಿಗೆಗಾಗಿ ನಮ್ಮಿಂದ ಆದ ಕೆಲಸವನ್ನು ಮಾಡಬೇಕಿದೆ’ ಎಂದರು.

‘ಇಂದಿನ ದಿನಗಳಲ್ಲಿ ಕವಿ ಸಮ್ಮೇಳನ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಕಸಾಪ ತಾಲೂಕು ಘಟಕ ಮಾಡಿದೆ ಎನ್ನುವುದು ಹೆಮ್ಮೆಯ ವಿಚಾರ. ಇಂದು ಸಾಹಿತಿಗಳ, ಕವಿಗಳ ಕೊರತೆ ಇಲ್ಲ. ಆದರೆ, ಎಲ್ಲ ಬರಹಗಳನ್ನು ಜನ ಒಪ್ಪುವಂತೆ ಓರಣ ಮಾಡಿ ಕಟ್ಟಿಕೊಡಲು ಬಳಸುವ ಭಾಷೆ, ಅಧ್ಯಯನ ಮತ್ತು ಕಥಾ ವಸ್ತು ಪ್ರಮುಖವಾಗುತ್ತದೆ’ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಡಾ. ಎಸ್.ಎಸ್.ಪಾಟೀಲ ಮಂದರವಾಡ ಮಾತನಾಡಿ, ‘ಕವಿಗಳು ವರ್ತಮಾನಕ್ಕೆ ಸ್ಪಂದಿಸುವುದು ತುರ್ತು ಅಗತ್ಯವಾಗಿದೆ. ನನ್ನನ್ನು ಕವಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬರೆಯಲು ಒತ್ತಾಸೆಯೂ ಆಗಿದೆ. 200 ಕವನಗಳು, 3 ಕೃತಿಗಳು ಹೊರಬಂದಿವೆ. ಎಲೆಮರೆಯ ಕಾಯಿಗಳನ್ನು ಗುರುತಿಸುವ ಮೂಲಕ ಕಸಾಪ ಮೇಲ್ಪಂಕ್ತಿ ಹಾಕಿದೆ’‌ ಎಂದರು.

ಸಮ್ಮೇಳನಾಧ್ಯಕ್ಷರ ಕುರಿತು ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ‘ವೈದ್ಯರಾಗಿದ್ದುಕೊಂಡು ಸಾಹಿತ್ಯವನ್ನು ದುಡಿಸಿಕೊಳ್ಳುವ ಗುಣವೇ ಡಾ.ಎಸ್‌.ಎಸ್‌. ಪಾಟೀಲ ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ. ಅವರ ಕೃತಿಗಳಿಂದ ಅವರೊಬ್ಬ ಸಮಯೋಚಿತ ಮತ್ತು ನ್ಯಾಯೋಚಿತ ಬರಹಗಾರ ಎನ್ನುವುದು ಸಾಬೀತು ಮಾಡಿದ್ದಾರೆ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರ ಹಿರೇಮಠ, ಮಹಾಲಕ್ಷ್ಮಿ ಪ್ರಾರ್ಥಿಸಿದರು. ಉಮಾಶ್ರೀ ಮಾಲಿಪಾಟೀಲ ನಿರೂಪಿಸಿದರು. ಭಾನುಕುಮಾರ ಗಿರಿಗೋಳ ವಂದಿಸಿದರು.

ಸಮ್ಮೇಳನದಲ್ಲಿ ಕಸಾಪ ಗೌರವ ಕಾರ್ಯದರ್ಶಿಯಾಗಿದ್ದ ಶಂಕರ ಬಿರಾದಾರ ಅವರ ನಿಧನಕ್ಕೆ ಮೌನ ಆಚರಿಸಲಾಯಿತು.

ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಕನ್ನಡ ಅಗ್ರಗಣ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಆಕಾಂಕ್ಷಾ ಪ್ರಮೋದ ಪುರಾಣಿಕ ಅವರ ಹಚ್ಚೇವು ಕನ್ನಡದ ದೀಪ ನೃತ್ಯ ಗಮನ ಸೆಳೆಯಿತು.

 20 ಜನ ಕವಿಗಳು ತಮ್ಮ ಕವನ ವಾಚನ ಮಾಡಿದರು. ಬಹುತೇಕ ಕವಿಗಳು ವರ್ತಮಾನದ ತಲ್ಲಣಕ್ಕೆ ಸಂಬಂಧಿಸಿದ ಕವಿತೆಗಳನ್ನು ರಚಿಸಿದ್ದರು. ಕಳ್ಳಿಮಠದ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಡಾ. ಸ್ವಾಮಿರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ನಡೆದ ಚುಟುಕು ಗೋಷ್ಠಿಯಲ್ಲಿ 10 ಜನ ಚುಟುಕು ಓದಿದರು. ನಾಗಪ್ಪ ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು