ಮಂಗಳವಾರ, ಅಕ್ಟೋಬರ್ 19, 2021
23 °C
ಕುಸನೂರ–ಹಾಗರಗಾ ವಸತಿ ವಿನ್ಯಾಸಕ್ಕೆ 5 ಸಾವಿರ ಅರ್ಜಿ ಸ್ವೀಕಾರ

ಕಲಬುರಗಿ: ನಿವೇಶನ ಹಂಚಿಕೆ ಆರಂಭಿಸಲು ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ಕುಸನೂರ–ಹಾಗರಗಾ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲು ನಗರದ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಶಾಸಕ ದತ್ತಾತ್ರೇಯ ಪಾಟೀಲ ಅವರು ವಿಷಯ ಪ್ರಸ್ತಾಪಿಸಿ, ನಿವೇಶನ ಹಂಚಿಕೆ ಪ್ರಕ್ರಿಯೆ ಶುರು ಮಾಡಲು ಸಲಹೆ ನೀಡಿದರು.

ನಿವೇಶನ ಖರಿದಿಗೆ 10 ಸಾವಿರಕ್ಕೂ ಅಧಿಕ ಅರ್ಜಿಗಳು ಬರುವ ಅಂದಾಜಿತ್ತು. ಕೇವಲ 5 ಸಾವಿರ ಅರ್ಜಿ ಬಂದಿವೆ. ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ನಿವೇಶನ ಹಂಚಿಕೆ ಕಾರ್ಯ ಶುರು ಮಾಡುವಂತೆ ಸೂಚಿಸಲಾಯಿತು.

ಹೊಸದಾಗಿ ಪ್ರಾರಂಭವಾಗುವ ಬಡಾವಣೆಗಳಲ್ಲಿ ಭೂಗತ ಕೇಬಲ್ ಹಾಕುವ ಮೂಲಕ ವಿದ್ಯುತ್ ಸೌಲಭ್ಯ ಒದಗಿಸಬೇಕು. ಇದಕ್ಕೆ ಖರ್ಚು ಹೆಚ್ಚಿಗೆ ಬಂದರೂ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಬಹುದಾಗಿದೆ. ವಿದ್ಯುತ್‌ನಿಂದ ಆಗಬಹುದಾದ ಅನಾಹುತ ತಪ್ಪಿಸಬಹುದಾಗಿದೆ ಎಂಬ ಸಲಹೆಗೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳು ಸಮ್ಮತಿಸಿದರು.

ಜಂಟಿಯಾಗಿ ಬಡಾವಣೆ ಅಭಿವೃದ್ಧಿ: ಸಭೆಯಲ್ಲಿ ಮಾತನಾಡಿದ ದತ್ತಾತ್ರೇಯ ಪಾಟೀಲ ರೇವೂರ, ಬಡಾವಣೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಮಧ್ಯೆ ಕೆಲ ಗೊಂದಲವಿತ್ತು. ಅಭಿವೃದ್ಧಿ ವಿಚಾರಗಳಿಗಾಗಿ ಯಾರ ಬಳಿ ಹೋಗಬೇಕೆಂಬ ಸಾರ್ವಜನಿಕರು ಗೊಂದಲಕ್ಕೂ ಒಳಗಾಗುತ್ತಿದ್ದರು. ಜಂಟಿಯಾಗಿ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡರೆ ಜನರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮನೆಗಳ ಮಾಲೀಕರು ತಮ್ಮ ಬಡಾವಣೆಗಳಲ್ಲಿನ ಉದ್ಯಾನವನವನ್ನು ರಕ್ಷಣೆ ಮಾಡಬೇಕು. ಯವುದೇ ಹಂತದಲ್ಲೂ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಬಡಾವಣೆ ಮಂಜೂರಾತಿಗೆ ಅರ್ಜಿ ಹಾಕುವ ಸಂದರ್ಭದಲ್ಲಿ ಷರತ್ತು ವಿಧಿಸಬೇಕು ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಎಲ್ಲರೂ ಒಮ್ಮತದ ನಿರ್ಣಯ ಸೂಚಿಸಿದರು.

ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಸುನೀಲ್ ವಲ್ಯಾಪುರೆ, ಪ್ರಾಧಿಕಾರದ ಆಯುಕ್ತ ರಾಚಪ್ಪ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ನಗರ ಯೋಜನಾ ವ್ಯವಸ್ಥಾಪಕ ಸಂಗಮೇಶ ಗಾರಂಪಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು